ಮುಸ್ಲಿಂ ಸಮುದಾಯದಲ್ಲಿ ಶೈಕ್ಷಣಿಕ ಕ್ರಾಂತಿಗೆ ವೇದಿಕೆಯಾದ ‘ಮೀಫ್’ ಸಂಘಟನೆಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

Update: 2023-10-31 09:59 GMT

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಸ್ಲಿಂ ಸಮುದಾಯದಲ್ಲಿ ಶೈಕ್ಷಣಿಕ ಕ್ರಾಂತಿ ಸೃಷ್ಟಿಸಲು ಶ್ರಮಿಸಿದ ‘ಮೀಫ್’ ಸಂಘಟನೆಗೆ ಕರ್ನಾಟಕ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ರಾಜ್ಯದ ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ.ಮೊಹಿದಿನ್ ಅವರ ಕನಸಿನ ಕೂಸಾದ ‘ಮುಸ್ಲಿಂ ಎಜುಕೇಶನ್ ಇನ್‌ಸ್ಟಿಟ್ಯೂಶನ್ಸ್ ಫೆಡರೇಶನ್’ (ಮೀಫ್) ಕಳೆದ 22 ವರ್ಷಗಳಲ್ಲಿ ಸಲ್ಲಿಸಿದ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ಯನ್ನು ರಾಜ್ಯ ಸರಕಾರ ಘೋಷಿಸಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಸ್ಲಿಮರು ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವುದನ್ನು ಕಂಡು ಹಿರಿಯ ರಾಜಕಾರಣಿ, ಮಾಜಿ ಸಚಿವ ಬಿ.ಎ.ಮೊಹಿದಿನ್ 1990ರ ದಶಕದಲ್ಲೇ ಜಿಲ್ಲೆಯ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಹಗಲು ಹೊತ್ತಿನಲ್ಲಿ ಖಾಲಿಯಾಗಿರುತ್ತಿದ್ದ ಮಸೀದಿಯ ಮದ್ರಸಗಳ ಕಟ್ಟಡದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಬಿ.ಎ. ಮೊಹಿದಿನ್ ಅವರ ಕರೆಗೆ ಸ್ಪಂದಿಸಿದ ಜಿಲ್ಲೆಯ ಮುಸ್ಲಿಮ್ ಜಮಾಅತ್‌ಗಳು ಮದ್ರಸ ಕಟ್ಟಡದಲ್ಲೇ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಮುಂದಾದರು.

ವರ್ಷ ಕಳೆಯುತ್ತಿದ್ದಂತೆಯೇ ಇದಕ್ಕೆ ಭಾರೀ ಸ್ಪಂದನ ಸಿಕ್ಕಿತು. ಆಗಲೇ ಆಂಗ್ಲ ಮಾಧ್ಯಮ ಶಿಕ್ಷಣದ ಮಹತ್ವವನ್ನು ಅರಿತಿದ್ದ ಬಿ.ಎ. ಮೊಹಿದಿನ್ ಮುಸ್ಲಿಂ ಶಿಕ್ಷಣ ಸಂಸ್ಥೆಗಳನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಮುಂದಾದರು. ಹಾಗೇ 2001ರಲ್ಲಿ ‘ಮುಸ್ಲಿಂ ಎಜುಕೇಶನ್ ಇನ್‌ಸ್ಟಿಟ್ಯೂಶನ್ಸ್ ಫೆಡರೇಶನ್’ (ಮೀಫ್) ಸಂಸ್ಥೆಯನ್ನು ಸ್ಥಾಪಿಸಿದರು.

ಸದ್ಯ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 180 ಆಂಗ್ಲ ಮಾಧ್ಯಮ ಶಾಲೆಗಳು ‘ಮೀಫ್’ನ ಸದಸ್ಯತ್ವ ಪಡೆದಿವೆ. ಬಿ.ಎ. ಮೊಹಿದಿನ್‌ರ ದೂರದರ್ಶಿತ್ವದ ಪರಿಣಾಮವಾಗಿ ಇಂದು ‘ಮೀಫ್’ ಅತ್ಯಂತ ಯಶಸ್ವೀಯಾಗಿ ಕಾರ್ಯಾಚರಿಸುತ್ತಿದೆ. ಕೆಲವು ಶಾಲೆಗಳು ಪದವಿ ಪೂರ್ವ ಸಂಯುಕ್ತ ಕಾಲೇಜು ಹಂತವನ್ನೂ ತಲುಪಿರುವುದು ಗಮನಾರ್ಹ.

‘ಶಿಕ್ಷಣವೇ ಅಭಿವೃದ್ಧಿಯ ಮೂಲ’ ಎಂಬ ತತ್ವದಡಿ ಉತ್ತಮ ಶಿಕ್ಷಣದೊಂದಿಗೆ ತೀರಾ ಹಿಂದುಳಿದ ಮುಸ್ಲಿಂ ಸಮುದಾಯ ವನ್ನು ಸುಶಿಕ್ಷಿತಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಎಲ್ಲಾ ರೀತಿಯ ಸಹಾಯ-ಸಹಕಾರವನ್ನು ಕೂಡ ‘ಮೀಫ್’ ಸಮುದಾಯದ ಮಕ್ಕಳಿಗೆ ನೀಡುತ್ತಿವೆ. ‘ಮೀಫ್’ ಸಂಸ್ಥೆಯು ಸದಸ್ಯತ್ವ ಪಡೆದ ಶಾಲೆಗಳ ಆಡಳಿತಾತ್ಮಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುತ್ತಿದೆ. ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ತರಬೇತಿ ಕಾರ್ಯಕ್ರಮ ನೀಡುತ್ತಿದೆ. ಇದೀಗ ‘ಮೀಫ್’ ಅಧೀನದ ಶಾಲೆಗಳಲ್ಲಿ 60,000 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಸುಮಾರು 6,000 ಶಿಕ್ಷಕರು ಈ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಶಾಲೆಗಳಲ್ಲಿ ಸರ್ವ ಧರ್ಮಗಳ ವಿದ್ಯಾರ್ಥಿ-ಶಿಕ್ಷಕರಿರುವುದು ಗಮನಾರ್ಹವಾಗಿದೆ. ಪ್ರತೀ ವರ್ಷ ಉತ್ತಮ ಫಲಿತಾಂಶಗಳನ್ನು ದಾಖಲಿಸುತ್ತಿರುವುದು ಕೂಡ ‘ಮೀಫ್’ನ ವೈಶಿಷ್ಟ್ಯವಾಗಿವೆ.

ಸರಕಾರದ ಅನುಮತಿ ಹಾಗೂ ಮಾನ್ಯತೆ ಪ್ರಮಾಣ ಪತ್ರದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಾರ್ಯಾಚರಿಸುತ್ತಿರುವ ಈ ಖಾಸಗಿ ಅನುದಾನ ರಹಿತ ಶಾಲೆಗಳು ಕಡಿಮೆ ಮೊತ್ತದ ಬೋಧನಾ ಶುಲ್ಕದೊಂದಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಾ ಬಂದಿರುವುದು ಇದರ ಹೆಗ್ಗಳಿಕೆಯಾಗಿವೆ. ಆಯಾ ಪ್ರದೇಶದ ಅನಾಥ, ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಮತ್ತು ಇನ್ನು ಕೆಲವರಿಗೆ ರಿಯಾಯಿತಿ ದರದಲ್ಲೂ ಶಿಕ್ಷಣ ನೀಡುತ್ತಿರುವುದು ವಿಶೇಷ.

ಮೀಫ್ ಮೂಲಕ ದ.ಕ. ಮತ್ತು ಉಡುಪಿ ಜಿಲ್ಲೆಗಳನ್ನು 5 ವಲಯಗಳನ್ನಾಗಿ ಮಾಡಿ ಪ್ರತಿ ವರ್ಷವೂ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ನುರಿತ ತರಬೇತುದಾರರಿಂದ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ. ಇದರಿಂದಾಗಿ ಕಳೆದ ಎರಡು ಶ್ಯೆಕ್ಷಣಿಕ ವರ್ಷಗಳಲ್ಲಿ ಶೇ.83 ವಿದ್ಯಾರ್ಥಿಗಳು ವಿಶಿಷ್ಠ ಮತ್ತು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಪಿಯುಸಿ ಫಲಿತಾಂಶದಲ್ಲೂ ಹೆಚ್ಚಿನ ಪ್ರಗತಿ ಸಾಧಿಸಿದೆ.

ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಶಿಕ್ಷಕರಿಗೆ ತರಬೇತಿ ನೀಡುತ್ತಿರುವುದು ‘ಮೀಫ್’ನ ಶೈಕ್ಷಣಿಕ ಕಾಳಜಿಗೆ ಸಾಕ್ಷಿಯಾಗಿವೆ. ಎರಡು ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಶಾಲೆಗಳ ಬೋಧಕೇತರ ಸಿಬ್ಬಂದಿಗೂ ಸೂಕ್ತ ತರಬೇತಿಯನ್ನು ಮೀಫ್ ನೀಡುತ್ತಾ ಬಂದಿದೆ. ಶಾಲಾಡಳಿತದ ಸಮಸ್ಯೆಗಳ ಬಗ್ಗೆ ಇಲಾಖಾ ಅಧಿಕಾರಿಗಳ ಜೊತೆ ಸಂವಾದ ನಡೆಸುತ್ತಿದೆ . ಎಸೆಸೆಲ್ಸಿ ಮತ್ತು ಪಿಯುಸಿ ಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಕೂಡ ‘ಮೀಫ್’ನ ಹೆಗ್ಗಳಿಕೆಯಾಗಿದೆ.

ವೃತ್ತಿಪರ ಕೋರ್ಸುಗಳಾದ ಐಎಎಸ್/ಐಪಿಎಸ್ ಬಗ್ಗೆಯೂ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸಲು ಪ್ರೌಢಶಾಲಾ ಮಟ್ಟದಲ್ಲಿ ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ. ಸಾಕ್ಷರತಾ ಪ್ರಮಾಣ ವೃದ್ಧಿಸಲು 3 ದಶಕಗಳಿಂದ ಉಭಯ ಜಿಲ್ಲೆಗಳ ಪ್ರತೀ ಗ್ರಾಮದಲ್ಲೂ ‘ಮೀಫ್’ ಶ್ರಮಿಸುತ್ತಿದೆ. ಮೀಫ್ ಸಂಸ್ಥೆಯಡಿ ಕಲಿಯುತ್ತಿರುವ ಪ್ರತಿಭಾನ್ವಿತ ಬಡ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯ ಪ್ರಮುಖ ಪದವಿ ಪೂರ್ವ ಕಾಲೇಜುಗಳಲ್ಲಿ 174 ಉಚಿತ ಸೀಟುಗಳನ್ನು ದೊರಕಿಸಿ ಕೊಡಲಾಗಿದೆ.

ಗ್ರಾಮೀಣ್ ಪ್ರದೇಶದ ಬಡ ಹಾಗು ಅರ್ಹ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಂಗಳೂರು ಬೆಂಗಳೂರುಗಳ ತಾಂತ್ರಿಕ ಕಾಲೇಜುಗಳಲ್ಲಿ ಉಚಿತ ಸೀಟು ಒದಗಿಸಿ ಕೊಟ್ಟು ನೆರವಾಗುತ್ತಿದೆ ಮೀಫ್. ಜೊತೆಗೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದೆ.

‘ಮೀಫ್’ನ ಸ್ಥಾಪಕಾಧ್ಯಕ್ಷ ಶಿಕ್ಷಣ ತಜ್ಞ ಪಿ.ಎ. ಖಾದರ್ ಕುಕ್ಕಾಡಿ ಕೂಡ ಮೀಫ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಬಳಿಕ ಮುಹಮ್ಮದ್ ಬ್ಯಾರಿ ಎಡಪದವು ಅಧ್ಯಕ್ಷರಾದರು. ಅವರ ನಿಧನದ ಬಳಿಕ ನಿವೃತ್ತ ಅಧಿಕಾರಿ ಮೂಸಬ್ಬ ಬ್ಯಾರಿ ‘ಮೀಫ್’ನ ಚುಕ್ಕಾಣಿ ಹಿಡಿದು ನಾನಾ ಕಡೆ ಯಶಸ್ವಿ ಶೈಕ್ಷಣಿಕ ಕಾರ್ಯಾಗಾರ ನಡೆಸಿದ್ದಾರೆ.

ಮುಹಮ್ಮದ್ ಬ್ಯಾರಿ ಎಡಪದವು ಅಧ್ಯಕ್ಷರಾದ ಬಳಿಕ ಬಿ.ಎ.ಮೊಹಿದಿನ್ ‘ಮೀಫ್’ನ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಈಗ ಉಮರ್ ಟೀಕೆ ಮೀಫ್‌ನ ಗೌರವಾಧ್ಯಕ್ಷರಾಗಿ ಮತ್ತು ಸೈಯದ್ ಮುಹಮ್ಮದ್ ಬ್ಯಾರಿ ಅವರು ಮುಖ್ಯ ಸಲಹೆಗಾರರಾಗಿ, ರಿಯಾಝ್ ಅಹ್ಮದ್ ಕಣ್ಣೂರು ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News