ಕೆತ್ತಿಕಲ್ ಗುಡ್ಡದಲ್ಲಿ ಮಣ್ಣು ಮಾಫಿಯಾ ಪ್ರಕರಣ | ತಿಂಗಳಾಂತ್ಯಕ್ಕೆ ತನಿಖಾ ವರದಿ : ಸಚಿವ ದಿನೇಶ್ ಗುಂಡೂರಾವ್
ಮಂಗಳೂರು : ಕೆತ್ತಿಕಲ್ ಗುಡ್ಡದಲ್ಲಿ ಅವ್ಯಾಹತವಾಗಿ ಮಣ್ಣು ತೆಗೆದ ಕಾರಣ ಉಂಟಾಗಿರುವ ಅಪಾಯದ ಪರಿಸ್ಥಿತಿ ಕುರಿತಂತೆ ಸೆಂಟ್ರಲ್ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ತಿಂಗಳಾಂತ್ಯಕ್ಕೆ ವರದಿ ಸಿಗಲಿದೆ. ವರದಿ ಆಧಾರದಲ್ಲಿ ಶಿಸ್ತು ಕ್ರಮ ವಹಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದರು.
2018-19ರಿಂದಲೇ ಅಲ್ಲಿಂದ ಮಣ್ಣು ತೆಗೆದಿರುವ ಬಗ್ಗೆ ವರದಿ ಇದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಏನು ಮಾಡಿದ್ದಾರೆ ಎಂಬ ಬಗ್ಗೆ ತನಿಖಾ ತಂಡವು ನೀಡುವ ವರದಿ ಆಧಾರದಲ್ಲಿ ಕ್ರಮ ವಹಿಸಲಾಗುವುದು. ಇದೇ ವೇಳೆ ಅಲ್ಲಿರುವ 9 ಮನೆಯವರನ್ನು ಸ್ಥಳಾಂತರ ಮಾಡಿ ರಕ್ಷಣೆ ಒದಗಿಸಬೇಕಾಗಿದೆ ಎಂದು ಸಚಿವ ದಿನೇಶ್ ಗುಂಡುರಾವ್ ಹೇಳಿದರು.
ಕೆತ್ತಿಕಲ್ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ತಂಡ ಬಂದು ಪರಿಶೀಲನೆ ನಡೆಸಿದೆ. ಅವರು ನೀಡಿರುವ ಸಲಹೆಗಳನ್ನು ಪಾಲಿಸಲು ಜಿಲ್ಲಾಡಳಿತ ಕ್ರಮ ವಹಿಸಲಿದೆ. ಎನ್‌ಐಟಿಕೆ ತಂಡವೂ ಪರಿಶೀಲನೆ ನಡೆಸಿದ್ದು, ವರದಿ ನೀಡಲಿದೆ. ಎನ್‌ಎಚ್‌ಎಐ ವತಿಯಿಂದಲೂ ಪರಿಶೀಲನೆ ನಡೆದಿದೆ ಎಂದು ಸಚಿವರು ಹೇಳಿದರು.
ಪೊಲೀಸ್ ಕ್ವಾಟರ್ಸ್ ಹೊಸ ಕಟ್ಟಡಗಳ ಕಳಪೆ ಕಾಮಗಾರಿ ಬಗ್ಗೆ ವರದಿ ನೀಡಲು ತಿಳಿಸಲಾಗಿದೆ. ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿ ಕಾಮಗಾರಿ ಪೂರ್ಣಗೊಳಿಸಲು ಸ್ಮಾರ್ಟ್ ಸಿಟಿಯಡಿ 20 ಕೋಟಿ ರೂ. ಮಂಜೂರು ಆಗಿದೆ. ಶೀಘ್ರವೇ ಕೆಲಸ ಮುಗಿಸಿ ಉದ್ಘಾಟನೆ ನಡೆಸಲಾಗುವುದು ಎಂದು ಸಚಿವರು ಈ ಸಂದರ್ಭ ತಿಳಿಸಿದರು.
ಈ ವರ್ಷ ಪ್ರಥಮ ಬಾರಿಗೆ ಎಲ್ಲಾ ಜಿಲ್ಲೆಗಳಲ್ಲಿ ಅಂಗಾಂಗ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಸುವ ಕಾರ್ಯ ಇಂದಿನಿಂದ ಆರಂಭಗೊಂಡಿದೆ. ಬೇಡಿಕೆ ಅಗತ್ಯವಿದ್ದರೂ ಅಂಗಾಂಗ ಸಿಗುವುದು ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ :
ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಆದರೆ ಈ ಯೋಜನೆಗಳನ್ನು ಇನ್ನಷ್ಟು ಜನರಿಗೆ ಮುಟ್ಟಿಸುವ ಪ್ರಯತ್ನದೊಂದಿಗೆ ಸೋರಿಕೆ ಆಗದೆ ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಕ್ರಮ ವಹಿಸಲಾಗುವುದು. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಶೇ.75 ರಾಜ್ಯ ಸರಕಾರದ ಹಣವಾದರೆ, ಶೇ. 25ರಷ್ಟು ಮಾತ್ರವೇ ಕೇಂದ್ರದ್ದು. ಹಾಗಿದ್ದರೂ ಅದನ್ನು ಕೇಂದ್ರದ ಯೋಜನೆಯಾಗಿ ಬಿಂಬಿಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳು ಅನರ್ಹರಿಗೂ ಸಿಗುತ್ತಿದೆ ಎಂಬ ನೆಲೆಯಲ್ಲಿ ಅದು ದುರ್ಬಳಕೆ ಆಗದಂತೆ ಕ್ರಮ ವಹಿಸಬೇಕಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕಾಳಿ ಸೇತುವೆ ಕುಸಿತದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲೂ ವಿವಿಧ ಇಲಾಖೆಗೊಳಪಟ್ಟ ಸೇತುವೆಗಳ ಪರಿಶೀಲನೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.