ಶಾಸಕ ಹರೀಶ್ ಪೂಂಜ ಬಿಲ್ಲವ ಸಮಾಜದ ಮುಖಂಡರ ವಿರುದ್ಧ ಮಾಡಿರುವ ಆರೋಪ ಖಂಡನೀಯ: ಬಿಲ್ಲವ ಮಹಾಮಂಡಲ

Update: 2024-08-17 14:51 GMT

ಬೆಳ್ತಂಗಡಿ : ‘ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳಾಗಿ ಶೌರ್ಯ ಪ್ರಶಸ್ತಿ, ಮುಖ್ಯಮಂತ್ರಿ ಪದಕ, ರಾಷ್ಟ್ರ ಪ್ರಶಸ್ತಿ ಪಡೆದುಕೊಂಡು ನಿವೃತ್ತರಾದ ಬಿಲ್ಲವ ಸಮಾಜದ ಮುಖಂಡರುಗಳ ಮೇಲೆ ಶಾಸಕ ಹರೀಶ್ ಪೂಂಜ ನಿಂದನಾತ್ಮಕವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಅವರು ಮಾಡಿರುವ ಆರೋಪಗಳನ್ನು ಸಮಸ್ತ ಬಿಲ್ಲವ ಸಮಾಜ ಖಂಡಿಸುತ್ತೇವೆ’ ಎಂದು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಹಾಗೂ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಕಾರ್ಯದರ್ಶಿ ಗಣೇಶ್ ಪೂಜಾರಿ ಗುರುಪುರ ಹೇಳಿದರು.

ಅವರು ಶನಿವಾರ ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದ ಬಿಲ್ಲವ ಸಮಾಜ ಬ್ರಹ್ಮಶ್ರೀ ನಾರಾಯಣ ಗುರುಗಳ ಸಾಮಾಜಿಕ ಸುಧಾರಣೆಗಳಿಂದಾಗಿ ಸಮಾಜದ ಮುಖ್ಯವಾಹಿನಿಗೆ ಬರುತ್ತಿದೆ. ಇಂತಹ ಸಮಯದಲ್ಲಿ ಕೂಡ ಸಮಾಜದ ಮೇಲೆ ಮತ್ತು ಸಮಾಜದ ಮುಖಂಡರ ಮೇಲೆ ದಬ್ಬಾಳಿಕೆ ದೌರ್ಜನ್ಯ, ನಿಂದನೆಗಳು ನಡೆಯುತ್ತಿರುವುದು ವಿಷಾದನೀಯ’ ಎಂದರು.

ರಾಜಕೀಯದಲ್ಲಿ ಆರೋಪ, ಪ್ರತ್ಯಾರೋಪ ನಿಂದನೆ ಏನೇ ಇದ್ದರೂ ಕಾನೂನಾತ್ಮವಾಗಿ ಪೂರಕ ದಾಖಲೆಗಳೊಂದಿಗೆ ಉತ್ತರ ಕೊಡುವುದು ರಾಜಕೀಯ ಧರ್ಮ. ಆದರೆ ಬೆಳ್ತಂಗಡಿ ಶಾಸಕರು ಮಾತ್ರ ಎಲ್ಲ ಮಿತಿಯನ್ನೂ ಮೀರಿ ಸಮಾಜದ ಮುಖಂಡರುಗಳನ್ನು ನಿಂದಿಸುವ ಕಾರ್ಯಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದರು.

ಅತ್ಯುತ್ತಮ‌ ಅಧಿಕಾರಿ ಎಂದು ಎಲ್ಲರಿಂದಲೂ ಗೌರವ ಪಡೆದಿರುವ ಬಿಲ್ಲವ ಸಮಾಜದ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಹಾಗೂ ರಾಷ್ಟ್ರಪತಿ ಪದಕ ಪುರಸ್ಕೃತ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ, ಸಮಾಜಕ್ಕಾಗಿ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೀತಾಂಬರ ಹೆರಾಜೆಯವರ ಬಗ್ಗೆ ಶಾಸಕ ಹರೀಶ್ ಪೂಂಜ ಆಡಿರುವ ಮಾತುಗಳು ಖಂಡನೀಯವಾಗಿದೆ ಎಂದರು.

ಈ ಹಿಂದೆ ಸಮಾಜದ ಹಿರಿಯ ನಾಯಕ, ಮಾಜಿ ಶಾಸಕ ಕೆ ವಸಂತ ಬಂಗೇರರ ಬಗ್ಗೆ ಆಧಾರ ರಹಿತ ಸುಳ್ಳು ಆಪಾದನೆ ಗಳನ್ನು ಮಾಡಿದ್ದು, ನಾರಾಯಣ ಗುರುಗಳ ಪಾಠವನ್ನು ಪಠ್ಯ ಪುಸ್ತಕದಿಂದ ತೆಗೆದು ಹಾಕಿದ ರೋಹಿತ್ ಚಕ್ರತೀರ್ಥನನ್ನು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಆಹ್ವಾನಿಸಿ, ಗೌರವಿಸಿರುವುದು ಮತ್ತು ಮರಗಳ್ಳ ರಿಗೆ ಸಿಂಹಸ್ವಪ್ನರಾಗಿದ್ದ ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿಯನ್ನು ದೂರದ ಊರಿಗೆ ವರ್ಗಾವಣೆ ಮಾಡಿ ಅಧಿಕಾರ ದುರುಪಯೋಗ ಮಾಡಿದ್ದು, ಈ ರೀತಿ ಸಮಾಜದ ಹಲವಾರು ಪ್ರತಿಷ್ಠಿತ ಗಣ್ಯ ವ್ಯಕ್ತಿಗಳ ತೇಜೋವಧೆಯನ್ನು ಶಾಸಕರು ಮತ್ತು ಅವರ ಹಿಂಬಾಲಕರು ನಿರಂತರವಾಗಿ ಮಾಡಿರುತ್ತಾರೆ ಎಂದು ಅವರು ಆರೋಪಿಸಿದರು.

ಶಾಸಕರ ಮೇಲೆ ಪ್ರತಿ ಪಕ್ಷದ ನಾಯಕರುಗಳು ಭ್ರಷ್ಟಾಚಾರ ಆರೋಪ ಮಾಡಿದಾಗ ಕಾನೂನಾತ್ಮಕವಾಗಿ ಆರೋಪಗಳಿಗೆ ಉತ್ತರ ನೀಡುವ ಬದಲು ದೈವ ದೇವರ ಮೊರೆ ಹೋಗಿ ಒಂದು ಕುಟುಂಬದ ಮೇಲೆ ಮಾತ್ರ ಅಲ್ಲದೆ ಮಹಿಳೆಯರು ಸೇರಿ ದಂತೆ ಸಣ್ಣ ಮಗುವನ್ನು ಸೇರಿಸಿ ಆಣೆ ಪ್ರಮಾಣ ಮಾಡಿ, ತೆಂಗಿನಕಾಯಿ ಒಡೆದು ಕೇಡು ಬಯಸಿದ ಶಾಸಕರ ನಡೆಯನ್ನು ಸಮಸ್ತ ಬಿಲ್ಲವ ಸಮಾಜದ ಒಕ್ಕೂಟ ಬಲವಾಗಿ ರೀತಿಯಲ್ಲಿ ಖಂಡಿಸುತ್ತದೆ ಎಂದರು.

ಶಾಸಕರು ಇನ್ನಾದರೂ ಸಮಾಜದ ಹಿರಿಯರ ಹೆಸರುಗಳನ್ನು ಅನಗತ್ಯವಾಗಿ ಎಳೆದು ತಂದು ಅವರನ್ನು ನಿಂದಿಸುವ ಕಾರ್ಯ ನಿಲ್ಲಿಸಬೇಕು ಇಲ್ಲವಾದಲ್ಲಿ ಇದಕ್ಕೆ ಸಮಾಜ ಉತ್ತರನೀಡಬೇಕಾಗುತ್ತದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಸಮಾಜದ ಹಿರಿಯ ನಾಯಕ ಜನಾರ್ದನ ಪೂಜಾರಿ ಗೇರುಕಟ್ಟೆ,, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷರುಗಳಾದ ಜಯರಾಮ ಬಂಗೇರ ಹೇರಾಜೆ, ಚಿದಾನಂದ ಪೂಜಾರಿ ಎಲ್ದಕ್ಕ, ಮಾಜಿ ನಿರ್ದೇಶಕ ವಿಶ್ವನಾಥ ಪೂಜಾರಿ ಕೊಲ್ಲಾಜೆ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ , ಮುಗ್ಗ ಗುತ್ತು ಟ್ರಸ್ಟ್ ಪ್ರತಿನಿಧಿ ಪ್ರಶಾಂತ್ ಬಂಗೇರ ಕಂಡೆಂತ್ಯಾರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News