ಮುಮ್ತಾಝ್ ಅಲಿ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2024-10-08 15:59 GMT

ಮಂಗಳೂರು: ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು ಬಿ.ಎಂ. ಮುಮ್ತಾಝ್ ಅಲಿ ಅವರ ಪ್ರಕರಣಕ್ಕೆ ಸಂಬಂಧಿಸಿ  ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸುರತ್ಕಲ್ ಕೃಷ್ಣಾಪುರದ ರೆಹಮತ್ ಮತ್ತು ಆಕೆಯ ಪತಿ ಶೋಯಬ್ ಬಂಧಿತ ಆರೋಪಿಗಳು.

ಆರೋಪಿಗಳನ್ನು ಮಂಗಳವಾರ ಬಂಟ್ವಾಳದ ಮೆಲ್ಕಾರ್ ಬಳಿ ಪತ್ತೆ ಹಚ್ಚಿ ದಸ್ತಗಿರಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿಯ ಪ್ರಕಟನೆ ತಿಳಿಸಿದೆ.

ಆರೋಪಿಗಳ ಪ್ರಚೋದನೆಯ ಕಾರಣದಿಂದಾಗಿ ಮುಮ್ತಾಝ್ ಅಲಿ ಅವರು ರವಿವಾರ ಮುಂಜಾನೆ ಕೂಳೂರು ಬಳಿ ಇರುವ ಸೇತುವೆಯ ಬಳಿ ಕಾರನ್ನು ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿರುವುದಾಗಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮುಮ್ತಾಝ್ ಅಲಿ ಅವರ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿತ್ತು. ರೆಹಮತ್, ಶೋಯೆಬ್ ಸೇರಿದಂತೆ 6 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾರ್ಗದರ್ಶನದಂತೆ ಆರೋಪಿಗಳ ಬಂಧನದ ಕಾರ್ಯಾಚರಣೆಯಲ್ಲಿ ಡಿಸಿಪಿಗಳಾದ ಸಿದ್ದಾರ್ಥ್ ಗೋಯಲ್ ಮತ್ತು ದಿನೇಶ್ ಕುಮಾರ್ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಕಾಂತ್ ರವರ ನೇತೃತ್ವದಲ್ಲಿ ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಎಂ. ಬೈಂದೂರು, ಉಪ ನಿರೀಕ್ಷಕರುಗಳಾದ ಮಲ್ಲಿಕಾರ್ಜುನ ಬಿರಾದಾರ, ನಳಿನಿ ಹಾಗೂ ಸಿಬ್ಬಂದಿ ನಾಗರತ್ನ, ಸಿ. ಪ್ರವೀಣ್ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News