ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

Update: 2023-08-21 17:46 GMT

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್‍ಗೆ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರ ಆಯ್ಕೆ ಸುಸೂತ್ರವಾಗಿ ನಡೆದು, ಉಪಾಧ್ಯಕ್ಷರ ಆಯ್ಕೆ ವೇಳೆಗೆ ಅಧ್ಯಕ್ಷರ ಹೆಸರಿನಲ್ಲಿನ 2 ಮತಪತ್ರಗಳು ಪತ್ತೆಯಾಗಿ ಗೊಂದಲ ಮೂಡಿದ ಘಟನೆ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ನಡೆಯಿತು. ಬಳಿಕ ಉಪಾಧ್ಯಕ್ಷ ಸ್ಥಾನಕ್ಕೆ ಮರು ಚುನಾವಣೆ ನಡೆಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಲಾಯಿತು.

ನೆಟ್ಟಣಿಗೆ ಮುಡ್ನೂರು ಗ್ರಾಪಂನ ನೂತನ ಅಧ್ಯಕ್ಷರಾಗಿ ಫೌಝಿಯಾ ಇಬ್ರಾಹಿಂ ಮತ್ತು ಉಪಾಧ್ಯಕ್ಷರಾಗಿ ರಾಮ ಮೇನಾಲ ಅಯ್ಕೆಗೊಂಡರು. ಇವರಿಬ್ಬರೂ ಕಾಂಗ್ರೆಸ್ ಬೆಂಬಲಿತ ಸದಸ್ಯರು. ನೆ.ಮುಡ್ನೂರು ಗ್ರಾಪಂನಲ್ಲಿ ಒಟ್ಟು 22 ಸದಸ್ಯರಿದ್ದು, ಈ ಪೈಕಿ 12 ಕಾಂಗ್ರೆಸ್, 8 ಬಿಜೆಪಿ ಮತ್ತು 2 ಎಸ್‍ಡಿಪಿಐ ಬೆಂಬಲಿತರಿದ್ದಾರೆ. ನೂತನ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಮೀಸಲು ನಿಗದಿಯಾಗಿದ್ದು ಕಾಂಗ್ರೆಸ್‍ನಿಂದ ಫೌಝಿಯಾ ಇಬ್ರಾಹಿಂ ಸ್ಪರ್ಧಿಸಿದ್ದರು. ಪಕ್ಷದಿಂದ ಅವಕಾಶ ಕೇಳಿದ್ದ ಕಾಂಗ್ರೆಸ್‍ನ ಇಂದಿರಾ ಅವರೂ ನಾಮಪತ್ರ ಸಲ್ಲಿಸಿದ್ದರು. ಓರ್ವ ಕಾಂಗ್ರೆಸ್ ಸದಸ್ಯೆ ವತ್ಸಲಾ ಎಂಬವರು ಸಭೆಗೆ ಗೈರು ಹಾಜರಾಗಿದ್ದರು. ಬಂಡಾಯವಾಗಿ ಸ್ಪರ್ಧಿಸಿದ್ದ ಇಂದಿರಾ ಅವರಿಗೆ ಬಿಜೆಪಿ ಬೆಂಬಲಿತ ಸದಸ್ಯರು ಬೆಂಬಲ ಸೂಚಿಸಿ ಮತ ಚಲಾಯಿಸಿದ್ದರು. ಮತ ಎಣಿಕೆ ನಡೆದಾಗ ಫೌಝಿಯಾ ಇಬ್ರಾಹಿಂ ಅವರು 13 ಮತಗಳು ಪಡೆದು ಜಯಗಳಿಸಿದ್ದರು. ಇಂದಿರಾ ಅವರು 8 ಮತಗಳನ್ನು ಪಡೆದುಕೊಂಡಿದ್ದರು. ಎಸ್‍ಡಿಪಿಐ ಬೆಂಬಲಿತರಿಬ್ಬರೂ ಫೌಝಿಯಾ ಇಬ್ರಾಹಿಂ ಅವರನ್ನು ಬೆಂಬಲಿಸಿದ್ದರು.

ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ರಾಮ ಮೇನಾಲ ಮತ್ತು ಬಿಜೆಪಿ ಬೆಂಬಲಿತರಾಗಿ ಚಂದ್ರಹಾಸ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ಮುಗಿದು ಮತ ಎಣಿಕೆ ನಡೆಸಿದಾಗ ಗೊಂದಲವೊಂದು ಸೃಷ್ಠಿಯಾಗಿತ್ತು. ರಾಮ ಮೇನಾಲ 9 ಮತಗಳನ್ನು ಪಡೆದಿದ್ದರೆ, ಚಂದ್ರಹಾಸ್ 10 ಮತ ಪಡೆದಿದ್ದರು. ಇನ್ನೆರಡು ಮತಗಳು ಅಧ್ಯಕ್ಷೀಯ ಚುನಾವಣೆಗೆ ಬಳಸುವ ಮತಪತ್ರವಾಗಿತ್ತು. ಅದನ್ನು ತಪ್ಪಿ ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳು ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ನೀಡಿದ್ದರು. ಆದರೆ ಇದನ್ನು ಪರಿಶೀಲನೆ ನಡೆಸದ ಸದಸ್ಯರಿಬ್ಬರು ಅದರಲ್ಲಿರುವ ಅಧ್ಯಕ್ಷರ ಹೆಸರುಗಳಿಗೆ ಮತ ಚಲಾಯಿಸಿದ್ದರು. ಇದರಿಂದಾಗಿ ಎರಡೂ ಪಕ್ಷಗಳ ಬೆಂಬಲಿತರ ನಡುವೆ ವಾಗ್ವಾದ ನಡೆಯಿತು.

ಬಿಜೆಪಿ ಮತ್ತು ಪುತ್ತಿಲ ಪರಿವಾರದ ಬೆಂಬಲಿತರು ಚುನಾವಣೆಯಲ್ಲಿ ಅನ್ಯಾಯ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಚುನಾವಣಾ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಉಪಾಧ್ಯಕ್ಷರ ಆಯ್ಕೆಯಲ್ಲಿ ಅಧ್ಯಕ್ಷರ ಹೆಸರಿಗೆ ನೀಡಲಾದ 2 ಮತಗಳನ್ನು ಅಸಿಂಧು ಎಂದು ಘೋಷಿಸಿ, ಉಳಿದ ಮತಗಳನ್ನು ಪರಿಗಣಿಸಿ ಚಂದ್ರಹಾಸರನ್ನು ಉಪಾಧ್ಯಕ್ಷರೆಂದು ಘೋಷಿಸಬೇಕು ಇಲ್ಲದಿದ್ದಲ್ಲಿ ಚುನಾವಣಾ ಪ್ರಕ್ರಿಯೆನ್ನು ಮುಂದೂಡಬೇಕು ಎಂದು ಆಗ್ರಹಿಸಿದರು. ಆದರೆ ಅಧ್ಯಕ್ಷತೆಗೆ ಬಳಸುವ 2 ಮತಪತ್ರಗಳನ್ನು ಉಪಾಧ್ಯಕ್ಷೀಯ ಚುನಾವಣೆಗೆ ನೀಡಿದ್ದು ಅಧಿಕಾರಿಗಳ ತಪ್ಪು. ಅದು ಮತದಾರರ ತಪ್ಪಲ್ಲ. ಹಾಗಾಗಿ ಸರಿಯಾದ ಮತಪತ್ರ ನೀಡಿ ಉಪಾಧ್ಯಕ್ಷತೆಗೆ ಮರು ಚುನಾವಣೆ ನಡೆಸಬೇಕೆಂದು ಕಾಂಗ್ರೆಸ್ ಬೆಂಬಲಿತರು ಆಗ್ರಹಿಸಿದರು.

ಚುನಾವಣಾಧಿಕಾರಿಯಾದ ಪುತ್ತೂರು ತಹಸೀಲ್ದಾರ್ ಶಿವಶಂಕರ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಮರು ಚುನಾವಣೆ ನಡೆಸಲು ತೀರ್ಮಾನಿಸಿ ಗೊಂದಲಕ್ಕೆ ತೆರೆ ಎಳೆದರು. ಬಳಿಕ ನಡೆದ ಮರುಚುನಾವಣೆಯನ್ನು ಬಿಜೆಪಿ ಬೆಂಬಲಿತ ಸದಸ್ಯರು ಬಹಿಷ್ಕರಿಸಿ ಹೊರ ನಡೆದರು. ಕಾಂಗ್ರೆಸ್ ಅಭ್ಯರ್ಥಿ ರಾಮ ಮೇನಾಲ 12 ಮತ ಪಡೆದರು. ರಾಮ ಮೇನಾಲ ಅವರನ್ನು ವಿಜೇತರೆಂದು ಘೋಷಿಸಲಾಯಿತು.

ಪ್ರತಿಭಟನೆ ವಿಚಾರ ಅರಿತ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಗಿರೀಶ್ ನಂದನ್ ಸ್ಥಳಕ್ಕೆ ಭೇಟಿ ನೀಡಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News