ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳ ಉದ್ಘಾಟನೆ
ಮಂಗಳೂರು, ನ. 20: ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನ. 24ರಂದು ಉದ್ಘಾಟನೆಯಲಿದ್ದು, ಸ್ಥಳೀಯರ ಬೇಡಿಕೆಯಂತೆ ಈಜುಕೊಳದ ಸಮೀಪದ ಮೈದಾನದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಕಾಮಗಾರಿಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.
ಎಮ್ಮೆಕೆರೆ ಈಜುಕೊಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ ಈ ವಿಷಯತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಸ್ಮಾರ್ಟ್ ಸಿಟಿಯ ಎಮ್ಮೆಕೆರೆ ಪ್ರದೇಶದಲ್ಲಿ 24.94 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣವಾಗಿದೆ. ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮೊದಲಾವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅಂದು ರಾಷ್ಟ್ರೀಯ ಮಾಸ್ಟರ್ಸ್ ಈಜುಸ್ಪರ್ಧೆಗೂ ಚಾಲನೆ ದೊರೆಯಲಿದೆ. ಆ ನಿಟ್ಟಿನಲ್ಲಿ ಸಿದ್ಧತೆಗಳ ಕುರಿತಂತೆ ಇಂದು ಪರಿಶೀಲನೆ ನಡೆಸಲಾಗಿದೆ ಎಂದರು.
ಇಲ್ಲಿ ಹಲವಾರು ಸ್ಥಳೀಯರ ಸಮಸ್ಯೆಗಳು ಪರಿಹಾರವಾಗಬೇಕಾಗಿದೆ. ಇದು ಸಾರ್ವಜನಿಕ ಆಟದ ಮೈದಾನಾಗಿರುವುದರಿಂದ ಇಲ್ಲಿ ಫೆಡ್‌ಲೈಟ್ ಅಳವಡಿಕೆ, ಮೈದಾನವನ್ನು ಸಮತಟ್ಟುಗೊಳಿಸುವುದು, ಗ್ಯಾಲರಿ ನಿರ್ಮಾಣ ಕಾರ್ಯಕ್ಕಾಗಿ ಸ್ಥಳೀಯರು ಮನವಿ ಮಾಡಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿ 2 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುವುದು. ಪಾಲಿಕೆಯ ನೇತೃತ್ವದಲ್ಲಿ ಸಮಿತಿ ಮಾಡಿಕೊಂಡು ಮುಂದಿನ ಯೋಜನೆ ರೂಪಿಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ತಿಳಿಸಿದರು.
ಈ ಸಂದರ್ಭ ಮನಪಾ ಮುಖ್ಯ ಸಚೇತಕ ಹಾಗೂ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಥಳೀಯ ಸದಸ್ಯೆ ರೇವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಲೋಹಿತ್ ಅಮೀನ್ ಉಪಸ್ಥಿತರಿದ್ದರು.