ಮೇರಿಯಮ್ಮರನ್ನು ಜಗತ್ತೇ ತಾಯಿ ಎಂದು ಪರಿಗಣಿಸಿದೆ: ಬಿಷಪ್ ಲೋಬೊ
ಮಂಗಳೂರು, ಡಿ.10: ಯೇಸುವಿನ ತಾಯಿ ಮೇರಿಯಮ್ಮ ಜಗತ್ತಿನ ಕಷ್ಟ ದುಃಖಗಳಲ್ಲಿರುವ ಮಂದಿಗೆ ತಾಯಿಯಾಗಿ ನೆರವು ನೀಡುತ್ತಾ ಇರುವುದರಿಂದ ಅವರನ್ನು ಜಗತ್ತಿನ ತಾಯಿ ಎಂದೇ ಪರಿಗಣಿಸಲಾಗುತ್ತಿದೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೋ ಹೇಳಿದರು.
ರವಿವಾರ ನಗರದ ಲೇಡಿಹಿಲ್‌ನ ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬದ ಸಂಭ್ರಮದ ಬಲಿಪೂಜೆಯ ನೇತೃತ್ವವನ್ನು ವಹಿಸಿ ಅವರು ಮಾತನಾಡಿದರು.
ಮೇರಿಯಮ್ಮರ ಹೃದಯವು ದುಃಖ ಮತ್ತು ರೋಗದಿಂದ ಕಂಗಾಲಾದವರ ಜತೆಗೆ ಮರುಗುತ್ತಿದೆ. ದೇವರ ಮಾತನ್ನು ಚಾಚು ತಪ್ಪದೆ ಪಾಲಿಸಿಕೊಂಡು ಬಂದ ಕಾರಣ ಮಾತೆ ಮೇರಿಯಮ್ಮ ಮಹಿಳೆಯರಲ್ಲಿಯೇ ಅತೀ ಉನ್ನತ ಸ್ಥಾನದಲ್ಲಿರುವವರು ಎಂದು ಡಾ. ಜೆರಾಲ್ಡ್ ಐಸಾಕ್ ಅಭಿಪ್ರಾಯಪಟ್ಟರು.
ಈ ಸಂದರ್ಭ ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಮೊನ್ಸಿಂಜೋರ್ ಮ್ಯಾಕ್ಸಿಂ ನೊರೊನ್ಹಾ, ಉರ್ವ ಚರ್ಚಿನ ಪ್ರಧಾನ ಧರ್ಮಗುರು ಫಾ. ಬೆಂಜಮಿನ್ ಪಿಂಟೋ, ಎಪಿಸ್ಕೋಪಲ್ ವಿಕಾರ್ ಫಾ. ಡೇನಿಯಲ್ ಸಂಪತ್ ವೇಗಸ್, ಉರ್ವ ಚರ್ಚಿನ ಫಾ. ಹೆನ್ರಿ ಸಿಕ್ವೇರಾ, ಸಹಾಯಕ ಧರ್ಮಗುರು ಫಾ.ಜಾನ್ಸನ್ ಪಿರೇರಾ ಸಹಿತ ಆಸುಪಾಸಿನ ಚರ್ಚ್‌ಗಳ ಸರಿಸುಮಾರು 60ಕ್ಕೂ ಅಧಿಕ ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗವಹಿಸಿದ್ದರು. ಬಲಿಪೂಜೆಯ ಬಳಿಕ ಪರಮ ಪ್ರಸಾದದ ಮೆರವಣಿಗೆ ನಡೆಯಿತು.