ಕಟ್ಟಡ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆಯ ದೂರು: ತ್ವರಿತ ಕ್ರಮಕ್ಕೆ ಲೋಕಾಯುಕ್ತರ ಸೂಚನೆ

Update: 2023-12-16 20:39 IST
ಕಟ್ಟಡ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆಯ ದೂರು: ತ್ವರಿತ ಕ್ರಮಕ್ಕೆ ಲೋಕಾಯುಕ್ತರ ಸೂಚನೆ
  • whatsapp icon

ಮಂಗಳೂರು: ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಿಸುವಾಗ ನಿಯಮ ಉಲ್ಲಂಘಿಸಿ ಸೆಟ್ ಬ್ಯಾಕ್ ಮತ್ತು ರೋಡ್ ಮಾರ್ಜಿನ್ ಬಿಡದೆ ಕಟ್ಟಡ ನಿರ್ಮಿಸುವುದರ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಅವರು ಶನಿವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿಯಮ ಉಲ್ಲಂಘಿಸಿ ವಾಣಿಜ್ಯ ಸಂಕೀರ್ಣ ಹಾಗೂ ವಸತಿ ಕಟ್ಟಡಗಳನ್ನು ನಿರ್ಮಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಬರುತ್ತಿವೆ. ಕಟ್ಟಡ ಅಡಿಪಾಯ ಹಂತದಲ್ಲಿರುವಾಗಲೇ ಇಂತಹ ಉಲ್ಲಂಘನೆಗಳ ಬಗ್ಗೆ ಕ್ರಮ ಕೈಗೊಂಡು, ತಕ್ಷಣವೇ ಕಾಮಗಾರಿಯನ್ನು ನಿಲ್ಲಿಸಬೇಕು. ಅಗತ್ಯವಿದ್ದಲ್ಲಿ ಪೊಲೀಸ್ ನೆರವು ಪಡೆಯುವಂತೆ ಲೋಕಾಯುಕ್ತ ನ್ಯಾಯಮೂರ್ತಿಗಳು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದರು.

ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡು ವೈಜ್ಞಾನಿ ಕವಾಗಿ ತ್ಯಾಜ್ಯ ನಿರ್ವಹಣೆ ಮಾಡಬೇಕು. ಸ್ಥಳೀಯ ಸಂಸ್ಥೆಗಳು ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು. ಸಾಂಕ್ರಾಮಿಕ ರೋಗಗಳಿಗೆ ಸ್ವಚ್ಛತೆಯ ಕೊರತೆಯೇ ಮೂಲ ಕಾರಣವಾಗಿದೆ. ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕು ಎಂದು ಅವರು ಹೇಳಿದರು.

ಕೆರೆಗಳು ನೀರಿನ ಅತ್ಯುನ್ನತ ಮೂಲವಾಗಿದ್ದು, ಇವುಗಳನ್ನು ಸಂರಕ್ಷಿಸಲು ಆದ್ಯತೆ ನೀಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 636 ಕೆರೆಗಳು ಇದ್ದು ಇವುಗಳನ್ನು ಅಳತೆ ಮಾಡಿ ದಾಖಲೆಗಳನ್ನು ನಿರ್ವಹಿಸಿರುವುದು ಶ್ಲಾಘನೀಯ ಎಂದು ನ್ಯಾಯಮೂರ್ತಿಗಳು ಹೇಳಿದರು.

ಸರಕಾರಿ ಆಸ್ಪತ್ರೆಗಳಿಗೆ ಬರುವ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯುವಂತಾಗಬೇಕು. ಲಭ್ಯವಿರುವ ವೈದ್ಯರು ಸಿಬ್ಬಂದಿಗಳು ಹಾಗೂ ಮೂಲಸೌಕರ್ಯಗಳನ್ನು ಬಳಸಿಕೊಂಡು ಉತ್ತಮ ಸೇವೆ ನೀಡುವಂತೆ ಅವರು ಆರೋಗ್ಯ ಇಲಾಖೆಗೆ ತಿಳಿಸಿದರು.

ತಾಲೂಕು ಕಚೇರಿಗಳಲ್ಲಿ ಸಿಬ್ಬಂದಿಗಳಿಗೆ ಸರಿಯಾಗಿ ಕರ್ತವ್ಯ ಹಂಚಿಕೆ ಮಾಡಬೇಕು. ಕಚೇರಿಗೆ ಬರುವ ಸಾರ್ವಜನಿಕ ರೊಂದಿಗೆ ಗೌರವದಿಂದ ವರ್ತಿಸುವಂತಹ ವಾತಾವರಣ ಇರಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್.ಕೆ, ಪೊಲೀಸ್ ಆಯುಕ್ತ ಅನುಪಮ ಅಗರ್‌ವಾಲ್ , ಜಿಲ್ಲಾ ಎಸ್ಪಿ ಸಿ.ಬಿ ರಿಶ್ಯಂತ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸೈಮನ್ ಮತ್ತಿತರರು ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್ ಸ್ವಾಗತಿಸಿ, ಮಹಾನಗರಪಾಲಿಕೆ ಆಯುಕ್ತ ಆನಂದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News