ಗಾಂಧಿಯನ್ನು ಓದಿದಾಗ ಮಾತ್ರ ಅರಿಯಲು ಸಾಧ್ಯ: ಜಬ್ಬಾರ್ ಸಮೋ
ಮಂಗಳೂರು, ಜ.30: ತನ್ನ ಸ್ವಂತ ಆಲೋಚನೆಯನ್ನು ಇತರ ಮೇಲೆ ಹೇರದ, ಸತ್ಯ, ನ್ಯಾಯ, ಧರ್ಮವನ್ನು ತನ್ನ ಕಾಯಕದ ಮೂಲಕ ವಿಶ್ವ ವ್ಯಾಪಕವಾಗಿರುವ ಮಹಾತ್ಮ ಗಾಂಧಿಯನ್ನು ಓದಿದಾಗ ಮಾತ್ರವೇ ಅರಿಯಲು ಸಾಧ್ಯ ಎಂದು ರಂಗ ಕಲಾವಿದ ಜಬ್ಬಾರ್ ಸಮೋ ಸಂಪಾಜೆ ಅಭಿಪ್ರಾಯಿಸಿದ್ದಾರೆ.
ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಟಾಗೋರ್ ಪಾರ್ಕ್ ನಲ್ಲಿರುವ ಪ್ರತಿಷ್ಠಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಗಾಂಧಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಹೆಚ್ಚು ಹೆಚ್ಚು ಓದಿನಿಂದ ಗ್ರಹಿಕೆ, ವಿದ್ಯಮಾನ ಮನದಟ್ಟಾಗುವ ಜತೆಗೆ ಪುರಾತನ ವಿಷಯ ವರ್ತಮಾನದಲ್ಲಿ ಜೀವಂತವಾಗಿರಲು ಸಾಧ್ಯವಾಗುತ್ತದೆ ಎಂದು ಹೇಳಿದ ಅವರು, ರವೀಂದ್ರ ನಾಥ ಟಾಗೋರ್ ಅವರಿಂದ ಮಹಾತ್ಮ ಎಂದು ಕರೆಸಿಕೊಂಡ, ಸುಭಾಷ್ ಚಂದ್ರ ಬೋಸ್ ಅವರೇ ಪಿತಾಮಹ ಎಂದು ಒಪ್ಪಿಕೊಂಡ ಮಹಾತ್ಮಾ ಗಾಂಧಿ ಅವರ ಬಗ್ಗೆ ಪ್ರಸಕ್ತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಯನ್ನು ನೋಡಿದರೆ ಭಯವಾಗುತ್ತದೆ. ಚರ್ಚೆ, ವಾದ ವಿವಾದಗಳು ಸಂವಾದ ರೂಪದಲ್ಲಿರಬೇಕೇ ಹೊರತು ಆಲೋಚನೆಗಳು, ಸಿದ್ಧಾಂತಗಳು ಹೇರಿಕೆ ಆಗಬಾರದು ಎಂದು ಅವರು ಅಭಿಪ್ರಾಯಿಸಿದರು.
ಮಹಾತ್ಮ ಗಾಂಧಿ ಬಗ್ಗೆ ಮಾತನಾಡುವುದು ಕ್ಲೀಷೆ, ಕಠಿಣ ಕಾಯಕ. ಅವರು ಪ್ರತಿಪಾದಿಸಿದ ಸಂಗತಿ ಭೌತಿಕವಾಗಿ ನಮ್ಮಿಂದ ಕಣ್ಮರೆಯಾಗಿದ್ದರೂ, ನಮ್ಮಿಂದ ಹೊರಗೆ ಕಳುಹಿಸಲ್ಪಟ್ಟಿದ್ದರೂ, ಗಾಂಧೀಜಿ ನಿತ್ಯ ಅಸ್ತಿತ್ವ ಹಾಗೂ ನಿತ್ಯ ಸತ್ಯ ಎಂದು ಜಬ್ಬಾರ್ ಸಮೋ ಪ್ರತಿಪಾದಿಸಿದರು.
ಚಾರಿತ್ರ ಇಲ್ಲದ ಶಿಕ್ಷಣ, ದುಡಿಮೆ ಇಲ್ಲದ ಸಂಪತ್ತು, ಆತ್ಮ ಸಾಕ್ಷಿ ಇಲ್ಲದ ಸಂತಸ, ನೀತಿ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ಜ್ಞಾನ, ತ್ಯಾಗವಿಲ್ಲದ ಪೂಜೆಯನ್ನು ಗಾಂಧೀಜಿ ವಿರೋಧಿಸಿದ್ದರು. ಆದರೆ ಇಂದು ಅವೆಲ್ಲಾ ಸಾರ್ವತ್ರಿಕವಾಗಿವೆ. ತಮ್ಮ ಆತ್ಮಾನ್ವೇಷಣೆಯಲ್ಲಿಯೂ ನನ್ನ ಸ್ವಂತ ಆಲೋಚನೆ ನಿಮ್ಮ ಮೇಲೆ ಹೇರಲಾರೆ ಎಂದು ಹೇಳಿದ್ದ ಗಾಂಧಿ ತತ್ವ, ಸ್ವತ್ವ ಹಾಗೂ ಸತ್ವ ಚಿರಾಯುಗಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಪ್ಪು ಸೈಂಟ್ ರೀಟಾ ಚರ್ಚ್ನ ಮುಖ್ಯ ಧರ್ಮಗುರು ರೆ.ಫಾ. ಎರಿಕ್ ಕ್ರಾಸ್ತಾ ಮಾತನಾಡಿ, ಗಾಂಧೀಜಿ ಕಲ್ಪಿಸಿದ ಭಾರತದ ಕನಸು, ಸ್ವತಂತ್ರಭಾರತ ಅಹಿಂಸೆಯಿಂದ ಕೂಡಿದ್ದಾಗಿದೆ. ಅವರ ಅಹಿಂಸಾ ವಿಧಾನ ಜಗತ್ತಿಗೆ ಪ್ರೇರಣೆಯಾಗಿದ್ದು, ವಿವಿಧತೆಯಲ್ಲಿ ಏಕತೆ ಅವರ ಪ್ರತಿಪಾದನೆಯಾಗಿತ್ತು. ನಮ್ಮ ಧರ್ಮದ ಬಗ್ಗೆ ಸರಿಯಾಗಿ ತಿಳಿದುಕೊಂಡು ಇತರ ಧರ್ಮಗಳ ಅರಿವು ಇರುವ ಸಮನ್ವಯದ ಭಾರತಕ್ಕೆ ಗಾಂಧೀಜಿ ಎಂದಿಗೂ ಪ್ರೇರಣೆ ಎಂದರು.
ಪ್ರತಿಷ್ಠಾನದ ಅದ್ಯಕ್ಷ ಡಾ.ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ.ಇಸ್ಮಾಯೀಲ್ ಎನ್. ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಕಲ್ಲೂರು ನಾಗೇಶ ಕಾರ್ಯಕ್ರಮ ನಿರೂಪಿಸಿದರು. ಸಹ ಕೋಶಾಧಿಕಾರಿ ಪ್ರೇಮ್ ಚಂದ್ ವಂದಿಸಿದರು.