ಗ್ಯಾರಂಟಿ ಯೋಜನೆಗಳಿಗೆ ‘ಮಾರ್ಗಸೂಚಿ’| ಇಲಾಖಾ ಯೋಜನೆಗಳ ಮಾದರಿಯಲ್ಲಿ ಕ್ರಮಕ್ಕೆ ಚಿಂತನೆ

Update: 2024-09-24 13:37 GMT

ಮಂಗಳೂರು, ಸೆ. 24: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ರಾಜ್ಯ ಸರಕಾರದ ಕಾಂಗ್ರೆಸ್ ಆಡಳಿತವು ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಆದರೆ, ಗೃಹಲಕ್ಷ್ಮಿ, ಯುವನಿಧಿಯಂತಹ ಗ್ಯಾರಂಟಿಗಳನ್ನು ತಲುಪಿಸುವಲ್ಲಿ ಎದುರಾಗುತ್ತಿರುವ ತೊಂದೆರಗಳ ನಿವಾರಣೆಗೆ ಮಾರ್ಗಸೂಚಿ (ಗೈಡ್‌ಲೈನ್ಸ್)ಯ ಅಗತ್ಯವನ್ನು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ ಮನಗಂಡಿದೆ. ಹಾಗಾಗಿ ಸರಕಾರದ ವಿವಿಧ ಇಲಾಖೆಗಳ ಮೂಲಕ ನೀಡಲಾಗುವ ಯೋಜನೆ ಗಳಂತೆ ಗ್ಯಾರಂಟಿ ಯೋಜನೆಗಳಿಗೂ ಮಾರ್ಗಸೂಚಿ ಅನ್ವಯಕ್ಕೆ ಚಿಂತನೆ ನಡೆದಿದೆ.

ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ದ.ಕ. ಜಿಲ್ಲಾ ಮಟ್ಟದ ಸಮಿತಿ ಈಗಾಗಲೇ ರೂಪುಗೊಂಡು ಕಾರ್ಯಾ ರಂಭಿಸಿದೆ. ರಾಜ್ಯದಲ್ಲಿಯೇ ಪ್ರಥಮವಾಗಿ ದ.ಕ. ಜಿಲ್ಲೆಯ ಅನುಷ್ಠಾನ ಸಮಿತಿ ಕಚೇರಿಯೊಂದಿಗೆ ಕಾರ್ಯಾರಂಭಿಸಿರುವುದು ಮಾತ್ರವಲ್ಲದೆ, ಜಿ.ಪಂ. ಸಿಇಒರನ್ನು ಈ ಸಮಿತಿಯ ನೋಡಲ್ ಅಧಿಕಾರಿಯನ್ನಾಗಿಯೂ ನೇಮಕ ಮಾಡಲಾಗಿದೆ. ರಾಜ್ಯದ ಇತರ ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಸಮಿತಿ ಇನ್ನಷ್ಟೇ ರಚನೆಯಾಗಬೇಕಿದೆ. ರಾಜ್ಯ ಅನುಷ್ಠಾನ ಸಮಿತಿಯ ಮೈಸೂರು ವಿಭಾಗದ ಉಪಾಧ್ಯಕ್ಷರೂ ಆಗಿರುವ ಡಾ. ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಇತ್ತೀಚೆಗೆ ಜಿ.ಪಂ. ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತಂತೆ ಪ್ರಗತಿ ಪರಿಶೀಲನೆ ನಡೆಸಿ ಗ್ಯಾರಂಟಿಗಳ ಅನುಷ್ಟಾನದಲ್ಲಿನ ನ್ಯೂನ್ಯತೆಗಳ ಪಟ್ಟಿಯನ್ನೂ ಮಾಡಲಾಗಿದೆ.

‘ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ ಹೊಸತಾಗಿ ಆಗಿರುವುದರಿಂದ ಮಾರ್ಗಸೂಚಿ ಆಗಿಲ್ಲ. ಕಳೆದ ಒಂದು ವರ್ಷದಿಂದೀಚೆಗೆ ಯೋಜನೆಗಳ ಅನುಷ್ಟಾನದಲ್ಲಿನ ನ್ಯೂನ್ಯತೆಗಳನ್ನು ಜಿಲ್ಲಾ ಮಟ್ಟದಲ್ಲಿ ಪರಿಶೀಲನೆ ನಡೆಸುವ ಕಾರ್ಯ ಆರಂಭಗೊಂಡಿದೆ. ಬೆಳಗಾವಿ, ಗುಲ್ಬರ್ಗ, ಬೆಂಗಳೂರು ಹಾಗೂ ಮೈಸೂರು ಸೇರಿ ನಾಲ್ಕು ವಿಭಾಗಗಳ ಮೂಲಕ ಈ ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಈ ಕಾರ್ಯ ಆರಂಭಗೊಂಡಿದೆ’ ಎಂದು ಮೈಸೂರು ವಿಭಾಗದ ಅನುಷ್ಟಾನ ಸಮಿತಿಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಅಭಿಪ್ರಾಯಿಸಿದ್ದಾರೆ.

ಗೃಹ ಲಕ್ಷ್ಮಿಗೆ ಆದಾಯ ತೆರಿಗೆ ಎನ್‌ಒಸಿ ಸವಾಲು

ಗೃಹ ಲಕ್ಷ್ಮಿ ಯೋಜನೆಯಡಿ ರಾಜ್ಯಾದ್ಯಂತ ಫಲಾನುಭವಿಗಳಿಗೆ ಆದಾಯ ತೆರಿಗೆಯ ಎನ್‌ಒಸಿ ಪಡೆಯುವುದು ಸವಾಲಾ ಗಿದೆ. ಕೆಲ ಫಲಾನುಭವಿಗಳು ಗೃಹಸಾಲಕ್ಕಾಗಿ ಆಧಾರ್, ರೇಶನ್ ಹಾಗೂ ಪಾನ್ ಕಾರ್ಡ್ ದಾಖಲೆ ಜೋಡಿಸಿದ್ದ ಕಾರಣ ಆದಾಯ ತೆರಿಗೆ ಪಾವತಿದಾರರು ಎಂಬ ಕಾರಣಕ್ಕೆ ಅನರ್ಹರಾಗಿದ್ದು, ಅಂತಹವರಿಗೆ ಜಿಎಸ್‌ಟಿದಾರರಿಗೆ ನೀಡಲಾಗುವ ಎನ್‌ಒಸಿಯನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದ್ದರೆ, ಇನ್ನು ಅರ್ಜಿ ಹಾಕಲು ಆಸಕ್ತಿಯನ್ನೇ ತೋರದವರಿಗೆ ಜಿಲ್ಲಾ ಮಟ್ಟದ ಸಮಿತಿಯ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ಕೆ ಅನುಷ್ಠಾನ ಸಮಿತಿ ಮುಂದಾಗಿದೆ.

ದ.ಕ. ಜಿಲ್ಲೆಯಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ ಪಡಿತರ ಚೀಟಿಯ ಮೂಲಕ 403333 ಫಲಾನುಭವಿಗಳನ್ನು ಗುರುತಿಸ ಲಾಗಿದೆ. ಸೆ. 13ರ ವೇಳೆಗೆ ಒಟ್ಟು 3,69,292 ಮಂದಿ ನೋಂದಾಯಿಸಿಕೊಂಡಿದ್ದಾರೆ. ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗದಿರುವ 4189 ಫಲಾನುಭವಿಗಳು, ಐಟಿಯಿಂದ ತಿರಸ್ಕೃತ ಗೊಂಡ 5296, ಜಿಎಸ್‌ಟಿಯಿಂದ ತಿರಸ್ಕೃತ ಗೊಂಡ 3227 ಮಂದಿಯನ್ನು ಗುರುತಿಸಲಾಗಿದೆ.

ಯುವ ನಿಧಿಯಡಿ ದ.ಕ. 21ನೆ ಸ್ಥಾನ

ರಾಜ್ಯಾದ್ಯಂತ ಯುವನಿಧಿ ಯೋಜನೆಯಡಿ ಆಗಸ್ಟ್ 31ರವರೆಗೆ ಒಟ್ಟು 1,69,310 ಮಂದಿ ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ ದ.ಕ. ಜಿಲ್ಲೆಯ ಫಲಾನುಭವಿಗಳ ಸಂಖ್ಯೆ 4023 ಆಗಿದ್ದು, ಜಿಲ್ಲೆ 21ನೆ ಸ್ಥಾನದಲ್ಲಿದೆ. ಬೆಳಗಾವಿಯಲ್ಲಿ ಅತೀ ಹೆಚ್ಚು ಅಂದರೆ 15,275 ಮಂದಿ ನೋಂದಾಯಿಸಿಕೊಂಡಿದ್ದರೆ, ಕೊಡಗಿನಲ್ಲಿ ಅತೀ ಕಡಿಮೆ 1170 ಮಂದಿ ಫಲಾನುಭವಿಗಳು ನೋಂದಾಯಿಸಿದ್ದಾರೆ.

ಗೃಹ ಜ್ಯೋತಿಗೆ ಉತ್ತಮ ಪ್ರತಿಕ್ರಿಯೆ

ಅತೀ ಹೆಚ್ಚು ಫಲಾನುಭವಿಗಳನ್ನು ಹೊಂದಿರುವ ಗ್ಯಾರಂಟಿಗಳಲ್ಲಿ ಗೃಹಜ್ಯೋತಿ ಪ್ರಮುಖವಾಗಿದ್ದು, ಈ ಯೋಜನೆಗೆ ಫಲಾ ನುಭವಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುವುದು ಅನುಷ್ಟಾನ ಸಮಿತಿಯ ಅಭಿಪಾಯ. ಗೃಹ ಜ್ಯೋತಿಯಡಿ ಮೆಸ್ಕಾಂ ಮಂಗಳೂರು ವೃತ್ತ ವ್ಯಾಪ್ತಿಯ 561321 ಅರ್ಹ ಫಲಾನುಭವಿಗಳಲ್ಲಿ 551093 ನೋಂದಣಿಯಾಗಿ ಶೇ. 98.18 ಸಾಧನೆ ದಾಖಲಾಗಿದೆ.

-‘ವಿವಿಧ ಇಲಾಖೆಗಳ ಯೋಜನೆಗಳಿಗೆ ಅನ್ವಯವಾಗುವ ಮಾರ್ಗಸೂಚಿಯನ್ನು ಗ್ಯಾರಂಟಿ ಯೋಜನೆಗಳಿಗೂ ಅಳವಡಿ ಸುವ ಬಗ್ಗೆ ಚಿಂತನೆ ನಡೆದಿದೆ. ಈಗಾಗಲೇ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗಳು ಕಾರ್ಯಾರಂಭಿಸಿದ್ದು, ದ.ಕ. ಜಿಲ್ಲೆ ಯಲ್ಲಿ ಜಿ.ಪಂ. ಸಿಇಒರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮುಂದೆ ಗ್ರಾ.ಪಂ. ಮಟ್ಟದಲ್ಲಿಯೂ ನೋಡಲ್ ಅಧಿಕಾರಿ ನೇಮಕ ಮಾಡಿ ಗ್ಯಾರಂಟಿಗಳನ್ನು ಕಟ್ಟಕಡೆಯ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಗುರಿ ಹೊಂದಲಾಗಿದೆ.’

*-ಡಾ. ಪುಷ್ಪಾ ಅಮರನಾಥ್, ಉಪಾಧ್ಯಕ್ಷರು, ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ, ಮೈಸೂರು ವಿಭಾಗ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News