ಮುಲ್ಕಿ: ಐಕ್ಯ ವೇದಿಕೆ ಕೊಡಾಜೆ ವತಿಯಿಂದ ಸರ್ವ ಧರ್ಮೀಯ ಕಾರ್ಯಕ್ರಮ

Update: 2024-09-29 14:55 GMT

ಮುಲ್ಕಿ: ಐಕ್ಯ ವೇದಿಕೆ ಕೊಡಾಜೆ ಇದರ ವತಿಯಿಂದ ಸರ್ವ ಧರ್ಮೀಯ ಕಾರ್ಯಕ್ರಮ, ಯಕ್ಷಗಾನ ಬಯಲಾಟ ಸಮಿತಿ ಪದ್ಮನ್ನೂರು - ಕಿನ್ನಿಗೋಳಿ ಇದರ ಅಧ್ಯಕ್ಷರು ಹಾಗೂ ಸರ್ವ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ರವಿವಾರ  ನಡೆಯಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ವಿಶ್ವೇಶ್ವರ ಭಟ್ ಅವರು, ಸನ್ನಡತೆಯೊಂದಿಗೆ ನಾವು ಜೀವನ ನಡೆಸಿದರೆ ನಮ್ಮ‌ ಜೀವನದಲ್ಲೂ ಉತ್ತಮ ಘಟನೆಗಳೇ ನಡೆಯುತ್ತದೆ ಎಂಬುವುದಕ್ಕೆ ಈ ಕಾರ್ಯಕ್ರಮ ನಿದರ್ಶನ. ಸರ್ವಧರ್ಮೀಯರು‌ ನಡೆಸುತ್ತಿರುವ ಇಂತಹಾ ಸೌಹಾರ್ದ ಕಾರ್ಯಕ್ರಮಗಳು ಹೆಚ್ಚಾದಂತೆ ಕೋಮುಭಾವನೆಗಳು ಅಳಿದು ಸೌಹಾರ್ದ, ಸಹಬಾಳ್ವೆ ಹೆಚ್ಚಾಗುತ್ತದೆ ಎಂದು ನುಡಿದರು.

ಯಾವುದೇ ಧರ್ಮದ ಧಾರ್ಮಿಕ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕರಿಸುವ ಕೆಲಸಗಳನ್ನು ಮಾಡಬೇಕು. ಇಂತಹಾ ಸಾಮರಸ್ಯದ ಕಾರ್ಯಕ್ರಮಗಳು ಎಲ್ಲೆಡೆಯೂ ನಡೆಯುವಂತಾಗಬೇಕು ಎಂದು ಎಸ್ ಕೋಡಿ ಅಲ್ ಇಖ್ಲಾಸ್ ಜುಮಾ ಮಸೀದಿಯ ಖತೀಬ್ ಫಾರೂಕ್ ಸಖಾಫಿ ಅವರು ನುಡಿದರು.

ಇದೇ‌ ಸಂದರ್ಭ ಐಕ್ಯ ವೇದಿಕೆ ಕೊಡಾಜೆಯ ವತಿಯಿಂದ ಊರಿನ ಧಾರ್ಮಿಕ ಮುಖಂಡರಾದ ಸುರಗಿರಿ ದೇವಸ್ಥಾನದ ಅರ್ಚಕ ವಿಶ್ವೇಶ್ವರ ಭಟ್, ಪದ್ಮನೂರು ಜುಮಾ ಮಸೀದಿಯ ಖತೀಬ್ ಫಾರೂಕ್ ಸಖಾಫಿ ಎಸ್ ಕೋಡಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ ಸ್ವಾಗತಿಸಿದರು. ಐಕ್ಯವೇದಿಕೆ ಕೊಡಾಜೆ ಇದರ ಮುಖಂಡರಾದ ಲತೀಫ್ ನೇರಳಕಟ್ಟೆ ಪ್ರಾಸ್ತಾವಿಕ ಮಾತನಾಡಿದರು‌.

ಸಮಾರಂಭದಲ್ಲಿ ಕಿನ್ನಿಗೋಳಿ ಚರ್ಚ್ ‌ನ ವಂ. ಫಾ. ಸ್ಟಿವನ್ ಜೊಯಿಲ್ ಕುಟಿನ್ಹೊ, ಭುವನಾಭಿರಾಮ ಉಡುಪ, ಲತೀಫ್ ಸಾರ್ವಜನಿಕ ಯಕ್ಷಗಾನ ಸಮಿತಿಯ ರಾಘು ಬಂಡಾರಿ, ಜೊಸೆಫ್ ಕ್ವಾಡ್ರಸ್, ಕೊಡಾಜೆ ಐಕ್ಯ ವೇದಿಕೆಯ ಅಬ್ದುಲ್ ಮಜೀದ್ ಮಣಿಪುರ, ಅಶ್ರಫ್ ಭಾರತ್ಕಾರ್, ಅಬ್ದುಲ್ ರಝಾಕ್ ಅನಂತಾಡಿ, ಶರೀಫ್ ಅನಂತಾಡಿ ಮೊದಲಾದವರು ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News