ಪೊಲೀಸರು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸಬಾರದು: ನಜ್ಮಾ ಫಾರೂಕಿ
ಮಂಗಳೂರು: ಪೊಲೀಸರು ಯಾವ ಕಾರಣಕ್ಕೂ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಪ್ರತಿದಿನ ವ್ಯಾಯಾಮಕ್ಕೆ, ಪೌಷ್ಠಿಕಾಂಶಭರಿತ ಆಹಾರ ಸೇವನೆಗೆ ಆದ್ಯತೆ ನೀಡಬೇಕು ಎಂದು ಮಂಗಳೂರು ಪೊಲೀಸ್ ಕಮಿಷನರೆಟ್‌ನ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ ಸಲಹೆ ನೀಡಿದ್ದಾರೆ.
ಆ್ಯಂಟಿ ಪೊಲ್ಯೂಶನ್ ಡ್ರೈವ್ ಫೌಂಡೇಶನ್ (ಎಪಿಡಿಎಫ್)ನ ನೇತೃತ್ವದಲ್ಲಿ ಎಜೆ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್‌ನ ಸಹಭಾಗಿತ್ವದಲ್ಲಿ ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ರವಿವಾರ ನಡೆದ ಸಂಚಾರ ಪೊಲೀಸರ ಶ್ವಾಸಕೋಶದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೃತ್ತಿ ಬದುಕಿನ ನಡುವೆ ಆರೋಗ್ಯಕ್ಕೂ ಗಮನ ಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆಗಳೂ ಇರುತ್ತವೆ. ಶ್ವಾಸಕೋಶದ ಆರೋಗ್ಯಕ್ಕೆ ಪೂರಕವಾಗಿ ಯೋಗದಂತಹ ಚಟುವಟಿಕೆಗಳನ್ನು ನಡೆಸಬಹುದು. ಪ್ರತಿ ದಿನ ವಾಕಿಂಗ್ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ನಜ್ಮಾ ಫಾರೂಕಿ ಹೇಳಿದರು.
ಎಜೆ ಆಸ್ಪತ್ರೆಯ ಶ್ವಾಸಕೋಶ ಚಿಕಿತ್ಸಾ ವಿಭಾಗದ ಡಾ. ಆದರ್ಶ್ ಮಾತನಾಡಿ, ಸಂಚಾರ ಪೊಲೀಸರು ಧೂಳು, ಹೊಗೆಯ ನಡುವೆ ಕೆಲಸ ಮಾಡುವ ಅನಿವಾರ್ಯತೆ ಇರುತ್ತದೆ. ಇದು ಕೂಡ ಶ್ವಾಸಕೋಶದ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಆದರೆ ಇದಕ್ಕಿಂತಲೂ ಹೆಚ್ಚಾಗಿ ಧೂಮಪಾನ ಶ್ವಾಸಕೋಶದ ಮೇಲೆ ಗಂಭೀರ ದುಷ್ಪರಿಣಾಮ ಉಂಟು ಮಾಡುತ್ತದೆ. ಅಂತಹ ಚಟವಿದ್ದರೆ ತ್ಯಜಿಸುವುದು ಒಳ್ಳೆಯದು. ಪ್ರತಿದಿನ ಕನಿಷ್ಠ ಅರ್ಧ ಗಂಟೆ ವ್ಯಾಯಾಮಕ್ಕೆ ಸಮಯ ಮೀಸಲಿಡಬೇಕು. ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ಪ್ರತೀ ವರ್ಷ ಶ್ವಾಸಕೋಶದ ತಪಾಸಣೆ ಕೂಡ ಮಾಡಿಸಿಕೊಳ್ಳಬೇಕು ಎಂದರು.
ಕದ್ರಿ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆನಂದ್, ಎಎಸ್‌ಐ ಸುಧಾಕರ್, ಎಜೆ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್‌ನ ಆಡಳಿತಾಧಿಕಾರಿ ಡಾ. ಜಯರಾಜ್, ಎಪಿಡಿಎಫ್ ಯೋಜನಾ ಸಂಯೋಜಕಿ ಗೀತಾ ಸೂರ್ಯ, ಸಾರ್ವಜನಿಕ ಸಂಪರ್ಕಾಧಿಕಾರಿ ಭಾಸ್ಕರ ಅರಸ್ ಉಪಸ್ಥಿತರಿದ್ದರು.