ಆಸ್ಪತ್ರೆಗಳು ಜನಜಾಗೃತಿಯ ಕೇಂದ್ರವಾಗಲಿ: ಸ್ಪೀಕರ್ ಯು.ಟಿ.ಖಾದರ್

Update: 2024-09-29 14:38 GMT

ಮಂಗಳೂರು: ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆಯ ಕೇಂದ್ರಗಳಾಗಿರಬಹುದು. ಆದರೆ ಅವುಗಳು ರೋಗ ಬಾರದಂತೆ ತಡೆಗಟ್ಟುವ ಚಿಕಿತ್ಸಾ ಕೇಂದ್ರವೂ ಆಗಬೇಕಾಗಿದೆ ಎಂದು ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ನಗರದ ಪಡೀಲ್-ಕೊಡಕ್ಕಲ್‌ನಲ್ಲಿ ನಿರ್ಮಾಣಗೊಂಡಿರುವ ಱಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಆಸ್ಪತ್ರೆಗಳನ್ನು ಸ್ಥಾಪಿಸಲು ಅದೆಷ್ಟು ಕಷ್ಟವಿದೆ ಎಂದು ಅದರ ಸ್ಥಾಪಕರಿಗೆ ಮಾತ್ರ ತಿಳಿದಿರುವ ವಿಚಾರ. ಆಸ್ಪತ್ರೆ ಸಹಿತ ಯಾವುದೇ ಉದ್ಯಮಗಳು ಸ್ಥಾಪನೆಯಾದಾಗ ಸ್ಥಳೀಯರು ಎಲ್ಲಾ ರೀತಿಯ ಸಹಕಾರವನ್ನು ನೀಡಬೇಕಿದೆ. ಇದರಿಂದ ಪರೋಕ್ಷವಾಗಿ ಸ್ಥಳೀಯರಿಗೆ ಕೂಡಾ ಲಾಭವಿದೆ. ಇಲ್ಲಿನ ಜಮೀನಿನ ದರದಲ್ಲೂ ಹೆಚ್ಚಳವಾಗಲಿದೆ ಎಂದ ಯು.ಟಿ.ಖಾದರ್ ಈ ಆಸ್ಪತ್ರೆಯಲ್ಲಿ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ನೀಡಲು ಆಸ್ಪತ್ರೆಯ ಸ್ಥಾಪಕರು ಕಟಿಬದ್ಧರಾಗಿದ್ದಾರೆ. ಅಲ್ಲದೆ ಆಸ್ಪತ್ರೆಯ ಸ್ಥಾಪಕ ಡಾ. ಅಬ್ದುಲ್ ಬಶೀರ್ ಅವರ ಸಾಹಸಮಯ ಬದುಕು ಯುವ ವೈದ್ಯರಿಗೆ ಸ್ಫೂರ್ತಿಯಾಗಬಹುದು ಎಂದರು.

ತಾಯಿ ಮತ್ತು ಮಗುವಿನ ವಿಶೇಷ ಆರೈಕೆ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ರುದ್ರಪ್ಪಪಾಟೀಲ್ ಮಂಗಳೂರು ಹೆಲ್ತ್ ಹಬ್ ಆಗಿವೆ. ಆದಾಗ್ಯೂ ಡಾ. ಅಬ್ದುಲ್ ಬಶೀರ್ ಧೈರ್ಯ ವಹಿಸಿ ಇಲ್ಲಿ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ. ಹಣ ಗಳಿಕೆಯ ಉದ್ದೇಶಕ್ಕಿಂತ ಸೇವಾ ಮಾನೋಭಾವವನ್ನು ಅವರು ಹೊಂದಿ ದ್ದಾರೆ. ಟ್ರೀಟ್‌ಮೆಂಟ್ ಫಸ್ಟ್ ಮತ್ತು ಪೇಮೆಂಟ್ ನೆಕ್ಸ್ಟ್ ಎಂದು ಆರಂಭದಲ್ಲೇ ಅವರು ಹೇಳಿದ್ದಾರೆ. ಹಾಗಾಗಿ ಎಲ್ಲರೂ ಅವರನ್ನು ಪ್ರೋತ್ಸಾಹಿಸಬೇಕಿದೆ ಎಂದರು.

ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷ ಡಾ.ಅಬ್ದುಲ್ ಬಶೀರ್ ವಿ.ಕೆ. ನಮ್ಮೀ ಆಸ್ಪತ್ರೆಯಲ್ಲಿ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ತುರ್ತು ಪರಿಹಾರ ಒದಗಿಸಲು ನುರಿತ ವೈದ್ಯಕೀಯ ತಜ್ಞರು ಸಿದ್ದರಿದ್ದಾರೆ. 130 ಬೆಡ್ ವ್ಯವಸ್ಥೆಯನ್ನು ಹೊಂದಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಿನದ ೨೪ ಗಂಟೆಯ ಸೇವೆಗಳು ಲಭ್ಯವಿದೆ ಎಂದರು.

ಮುಖ್ಯ ಅತಿಥಿಗಳಾಗಿ ಹಾಸನ ಸಂಸದ ಶ್ರೇಯಸ್ ಪಾಟೀಲ್, ಶಾಸಕರಾದ ಅಶೋಕ್ ಕುಮಾರ್ ರೈ, ಎ.ಕೆ.ಎಂ.ಅಶ್ರಫ್, ಐವನ್ ಡಿಸೋಜ, ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹೀಂ, ರಾಜ್ಯದ ಮಾಜಿ ಸಚಿವರಾದ ಬಿ. ರಮಾನಾಥ ರೈ, ವಿನಯಕುಮಾರ್ ಸೊರಕೆ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮಾಜಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು, ಡಾ. ಯೂಸುಫ್ ಕುಂಬಳೆ, ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರೇರಣಾ ತರಬೇತುದಾರ ರಫೀಕ್ ಮಾಸ್ಟರ್, ಕಾಂಗ್ರೆಸ್ ಮುಖಂಡರಾದ ಎಂ.ಎಸ್.ಮುಹಮ್ಮದ್, ಎನ್.ಎಸ್.ಕರೀಂ, ಉದ್ಯಮಿ ಅಬ್ದುಲ್ಲಾ ಮಾದುಮೂಲೆ ಭಾಗವಹಿಸಿದ್ದರು.

ವೇದಿಕೆಯಲ್ಲಿ ಡಾ. ನುಮಾನ್, ಡಾ.ಶಾರೂಕ್ ಅಬ್ದುಲ್ಲಾ, ನಸ್ರೀನ್ ಬಶೀರ್, ಅಬ್ದುಲ್ ಖಾದರ್ ಹಾಜಿ, ಡಾ. ಸಂಶೀರ್, ಡಾ. ಶಾಮಿಲ್, ಡಾ. ನಫ್ಸೀರ್, ಡಾ. ಮೋಹನ್, ಶಾಕಿರ್ ಹಾಜಿ, ಅರ್ಜುನ್ ಭಂಡಾರ್ಕರ್ ಮತ್ತಿತರರು ಉಪಸ್ಥಿತರಿದ್ದರು.

ಆಸ್ಪತ್ರೆಯ ನಿರ್ದೇಶಕ ಮತ್ತು ಸಿಇಒ ಡಾ. ಕಿರಾಶ್ ಪರ್ತಿಪ್ಪಾಡಿ ಅವರು ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷ ಡಾ.ಅಬ್ದುಲ್ ಬಶೀರ್ ವಿ.ಕೆ. ಅವರನ್ನು ಪರಿಚಯಿಸಿದರು. ಇರ್ಶಾದ್ ಮತ್ತು ಸೈಫ್ ಕಿರಾಅತ್ ಪಠಿಸಿದರು. ಶರ್ಮಿಳಾ ಕಾರ್ಯಕ್ರಮ ನಿರೂಪಿಸಿದರು.









Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News