ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಅಂಟಿರುವುದರಲ್ಲಿ ಅರ್ಥವಿಲ್ಲ: ಸಂಸದ ಬ್ರಿಜೇಶ್ ಚೌಟ
ಮಂಗಳೂರು: ಮೈಸೂರು ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದು ಒಳಿತು. ಇನ್ನೂ ಕೂಡ ಅವರು ಕುರ್ಚಿಗೆ ಅಂಟಿಕೊಂಡು ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.
ಬುಧವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನಂತವರು ಸಿಎಂ ಖುರ್ಚಿಯಲ್ಲಿ ಕುಳಿತರೆ ಯಾವರೀತಿ ಪಾರದರ್ಶಕ ಆಡಳಿತ ನಿರೀಕ್ಷಿಸಲು ಸಾಧ್ಯ ಎಂದು ಚೌಟ ಪ್ರಶ್ನಿಸಿದರು.
ಕಳೆದ ಒಂದೂವರೆ ವರ್ಷದಿಂದ ರಾಜ್ಯ ಸರಕಾರ ಗೊತ್ತುಗುರಿ ಇಲ್ಲದ ರೀತಿಯಲ್ಲಿ ಆಡಳಿತ ನಡೆಸಿಕೊಂಡು ಬಂದಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ರಾಜ್ಯದ ಬೊಕ್ಕಸ ಕೊಳ್ಳೆ ಹೊಡೆಯುವ ಪ್ರಯತ್ನವಷ್ಟೇ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್‌ಗೆ ಅಧಿಕಾರ ಬೇಕೇ ವಿನಃ ಅಭಿವೃದ್ಧಿ ಬೇಕಿಲ್ಲ. ರಾಜ್ಯದಲ್ಲಿ ಪಾರದರ್ಶಕ ಆಡಳಿತ ಮರೀಚಿಕೆಯಾಗಿದೆ. ಬಾಂಗ್ಲಾ ಮಾದರಿಯ ಹೋರಾಟ ಮಾಡುತ್ತೇವೆ ಎನ್ನುವ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ವಿರುದ್ಧ ಕೇಸು ದಾಖಲಿಸಲು ಠಾಣೆಗೆ ತೆರಳಿದರೆ, ಪೊಲೀಸರು ದೂರು ದಾಖಲಿಸಲು ಹಿಂದೇಟು ಹಾಕುತ್ತಾರೆ. ಇದು ಕಾಂಗ್ರೆಸ್ ಸರ್ಕಾರದ ಆಡಳಿತ ಹೇಗೆ ಎಂಬುದನ್ನು ರಾಜ್ಯದ ಜನತೆಗೆ ತೋರಿಸಿಕೊಟ್ಟಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕ ಡಾ.ಭರತ್ ಶೆಟ್ಟಿ ವೈ, ಬಿಜೆಪಿ ಯುವ ಮೋಚಾ ಅಧ್ಯಕ್ಷ ನಂದನ್ ಮಲ್ಯ, ಬಿಜೆಪಿ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ರಾಕೇಶ್‌ರೈ ಕೆಡೆಂಜಿ, ಯತೀಶ್ ಆರ್ವರ್ ಉಪಸ್ಥಿತರಿದ್ದರು.