ವಿಶ್ವಕ್ಕೆ ಶಾಂತಿ ಬೋಧಿಸಿದ ಮಹಾಚೇತನ ಮಹಾತ್ಮ ಗಾಂಧಿ: ದ.ಕ. ಜಿಲ್ಲಾಧಿಕಾರಿ
ಮಂಗಳೂರು: ಮಹಾತ್ಮ ಗಾಂಧಿ ಎಂದರೆ ಕೇವಲ ಒಂದು ವ್ಯಕ್ತಿ ಅಥವಾ ವ್ಯಕ್ತಿತ್ವ ಅಲ್ಲ ಇಡೀ ವಿಶ್ವಕ್ಕೆ ಅಹಿಂಸೆ ಮತ್ತು ಶಾಂತಿಯ ತತ್ವ ಬೋಧಿಸಿದ ಮಹಾ ಚೇತನ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ. ಪಿ ಅವರು ಹೇಳಿದ್ದಾರೆ.
ದ. ಕ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಅವರು ಬುಧವಾರ ನಗರ ಕುದ್ಮುಲ್ ರಂಗರಾವ್ ಪುರಭವನದ ಎದುರು ಗಾಂಧಿ ಪ್ರತಿಮೆಯ ಬಳಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು
ಇಂದು ನಾವು ಬದುಕುತ್ತಿರುವ ಸಮಾಜವನ್ನು ದೇಶವನ್ನು ಮುಂದಿನ ಪೀಳಿಗೆಗೂ ನೀಡಬೇಕಾದರೆ ನಾವು ಗಾಂಧೀಜಿ ಯವರ ಬದುಕು ಅವರ ಚಿಂತನೆಗಳಿಂದ ಪ್ರೇರೇಪಣೆ ಆಗಬೇಕು ವಿಶ್ವದ ಪ್ರತಿ ನಾಯಕನ ಹಿಂದೆ ಗಾಂಧೀಜಿಯ ಚಿಂತನೆ, ಆತ್ಮವಿಶ್ವಾಸದ ಮತ್ತು ಒಗ್ಗಟ್ಟಿನ ತತ್ವಗಳು ಅಡಕವಾಗಿದೆ ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್ ಆನಂದ್, ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಪೊಲೀಸ್ ಅಧೀಕ್ಷಕ ಯತೀಶ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಭಾರತ ಸೇವಾದಳದ ಜಯರಾಮ ರೈ, ಬಶೀರ್ ಬೈಕಂಪಾಡಿ, ಮಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಡೆದ ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಸ್ವಚ್ಛತಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭ ಸ್ವಚ್ಛತಾ ಪ್ರಮಾಣವಚನ ಸ್ವೀಕರಿಸಲಾಯಿತು.