ಬಿಜೆಪಿಯ ಕಿಶೋರ್ ಕುಮಾರ್‌ಗೆ ಭಾರೀ ಅಂತರದಲ್ಲಿ ಗೆಲುವು ಖಚಿತ: ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು: ವಿಧಾನ ಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರಕ್ಕೆ ಅ.21ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರು ಭಾರೀ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಹಾಗೂ ಕ್ಷೇತ್ರದ ಚುನಾವಣಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ನಗರ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಿಶೋರ್ ಕುಮಾರ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಯೋಜನೆ, ಯೋಚನೆ ಮತ್ತು ಚಟುವಟಿಕೆಯನ್ನು ಈಗಾಗಲೇ ತಯಾರಿ ಆರಂಭಿಸಲಾಗಿದೆ ಎಂದರು.
ಹಿಂದುಳಿದ ವರ್ಗ ಮತ್ತು ಸಣ್ಣ ಸಮುದಾಯಕ್ಕೆ ಸೇರಿದ ಯುವಕ ಕಿಶೋರ್ ಕುಮಾರ್ ಅವರು ಮುಂದೆ ವಿಧಾನ ಪರಿಷತ್ ಸದಸ್ಯನಾಗಿ ಅತ್ಯಂತ ಅರ್ಥಗರ್ಭಿತವಾಗಿ ಕೆಲಸ ಮಾಡುತ್ತಾರೆ. ಜನಸಾಮಾನ್ಯರ ಮತ್ತು ಬಡವರ ಪರ ಕೆಲಸ ಮಾಡು ತ್ತಾರೆ. ಅವರು ಕ್ರಾಂತಿಕಾರಿ ಶಕ್ತಿಯಾಗಿ ಮೂಡಿಬರಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದರು.
2008ರಲ್ಲಿ ತಾನು ಅವಳಿ ಜಿಲ್ಲೆಯ ವಿಧಾನ ಪರಿಷತ್ ಸದಸ್ಯನಾಗಿ ಮೊದಲ ಬಾರಿ ಪ್ರವೇಶಿಸಿ ಗ್ರಾಮ ಪಂಚಾಯತ್ ಸದಸ್ಯರ ಗೌರವಧನವನ್ನು ರೂ .2 ಸಾವಿರಕ್ಕೆ ಏರಿಸುವಲ್ಲಿ ಶ್ರಮಿಸಿರುವುದಾಗಿ ತಿಳಿಸಿದರು. ಕ್ಷೇತ್ರದಲ್ಲಿ 6037 ಮತದಾರರು ಇದ್ದಾರೆ. ಈ ಪೈಕಿ ಬಿಜೆಪಿಯೂ ಮೂರುವರೆ ಸಾವಿರಕ್ಕೂ ಅಧಿಕ ಮತದಾರರರನ್ನು ಹೊಂದಿದೆ. ಕಿಶೋರ್ ನಾಮಪತ್ರ ಹಾಕಿರುವುದನ್ನು ಉಭಯ ಜಿಲ್ಲೆಯ ಮತದಾರರು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಇದರಿಂದ ಬಿಜೆಪಿ ಗೆಲುವು ಖಚಿತ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಸರಕಾರ ಆರೋಪಗಳ ಸರಮಾಲೆಯನ್ನು ಎದುರಿಸುತ್ತಿದೆ.ಒಂದು ರೀತಿಯಲ್ಲಿ ಆತಂತಕದ ಸ್ಥಿತಿಯನ್ನು ಎದುರಿಸುತ್ತಿದೆ ಎಂದರು.
ಮುಡಾ ಸೈಟ್‌ಗಳನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಪತ್ನಿ ವಾಪಸ್ ಮಾಡಿದ್ದಾರೆ. ಹಿಂದೆ ಇದೇ ರೀತಿ ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ವಾಪಸ್ ನೀಡಿದ್ದರು. ಆಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ‘ಭೂಮಿ ವಾಪಸ್ ಕೊಟ್ಟದ್ದು ತಪ್ಪು ಮಾಡಿದಕ್ಕೆ ಒಂದು ಆಧಾರವಲ್ಲವೆ. ಹೀಗಾಗಿ ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದರು. ಆಗ ಸಿದ್ದರಾಮಯ್ಯ ನೀಡಿದ ಹೇಳಿಕೆಯ ವೀಡಿಯೊ ತುಣುಕುಗಳು ಈಗ ಹರಿದಾಡುತ್ತಿದೆ. ಅದೇ ನ್ಯಾಯವನ್ನು ಸಿದ್ದರಾಮಯ್ಯನವರು ಒಪ್ಪಿದರೆ ಸಹಜವಾಗಿ ಪದತ್ಯಾಗ ಮಾಡಬೇಕಾಗುತ್ತದೆ. ಅದನ್ನು ಬಿಟ್ಟು ಆತ್ಮ ಸಾಕ್ಷಿ ಎಂಬ ನ್ಯಾಯಕ್ಕೆ ಬಿಟ್ಟರೆ , ಮೂಲನ್ಯಾಯಕ್ಕೆ ಏನು ಎನ್ನುವುದು ಸಿದ್ದರಾಮಯ್ಯ ಉತ್ತರ ಕೊಡಬೇಕಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ಕಿಶೋರ್ ಕುಮಾರ್, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಬಿಜೆಪಿ ಧುರೀಣ ಸಂಜಯ್ ಪ್ರಭು ಸುದ್ದಿಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.