ಪಕ್ಷ ನನಗೆ ದೊಡ್ಡ ಜವಾಬ್ದಾರಿ ನೀಡಿದೆ: ಕಿಶೋರ್ ಕುಮಾರ್

Update: 2024-10-03 13:39 GMT

ಮಂಗಳೂರು: ಬಡ ಕೃಷಿ ಕುಟುಂಬದ ನನಗೆ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ. ಆ ಮೂಲಕ ನನಗೆ ಪಕ್ಷ ದೊಡ್ಡ ಜವಾಬ್ದಾರಿ ನೀಡಿದೆ ಎಂದು ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅಭಿಪ್ರಾಯಪಟ್ಟಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಕಿಶೋರ್ ಕುಮಾರ್ ವಿಧಾನ ಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ತೆರಳುವ ಮೊದಲು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಪಡೆಯಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ನಮ್ಮ ಕುಟುಂಬ ಸಂಘಕ್ಕಾಗಿ ಕೆಲಸ ಮಾಡಿತ್ತು ಎಂದು ಹೇಳಿದರು.

ನನಗೆ ಅವಕಾಶ ಸಿಗಬೇಕಾದರೆ ಹಲವರು ತ್ಯಾಗ ಮಾಡಿದ್ದಾರೆ. ನನಗೆ ರಾಜಕೀಯದಲ್ಲಿ ಹೆಚ್ಚು ಏನು ಅನುಭವ ಇಲ್ಲ. ಮುಂದೆ ವಿಧಾನ ಪರಿಷತ್ ಸದಸ್ಯನಾದರೆ ಅದನ್ನು ಒಂದು ಜವಾಬ್ದಾರಿ ಎಂದು ತಿಳಿದುಕೊಂಡು ಹಿರಿಯರ ಮಾರ್ಗ ದರ್ಶನ ಪಡೆದುಕೊಂಡು ಪಕ್ಷಕ್ಕೆ ಕಪ್ಪುಚುಕ್ಕೆ ಬಾರದಂತೆ ಕೆಲಸ ಮಾಡುವುದಾಗಿ ಹೇಳಿದರು.

ಬಿಜೆಪಿ ಕಾರ್ಯಕರ್ತ ಆಧಾರಿತ ಪಕ್ಷ : ಕಿಶೋರ್ ಕುಮಾರ್ ಪುತ್ತೂರು ಅವರಿಗೆ ದಕ್ಷಿಣ ಕನ್ನಡ ವಿಧಾನ ಪರಿಷತ್ ಉಪಚುನಾವಣೆಯ ಟಿಕೆಟ್ ನೀಡುವುದರ ಮೂಲಕ ಬಿಜೆಪಿ ಕಾರ್ಯಕರ್ತ ಆಧಾರಿತ ಪಕ್ಷ ಎನ್ನುವುದನ್ನು ತೋರಿಸಿ ಕೊಟ್ಟಿದೆ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹೇಳಿದರು.

ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸಿದ ತಂಡದ ಸದಸ್ಯರಲ್ಲಿ ಒಬ್ಬರಾಗಿದ್ದ ಕಿಶೋರ್ ಕುಮಾರ್ ಅವರಿಗೆ ವಿಧಾನ ಪರಿಷತ್ ಉಪಚುನಾವಣೆಗೆ ಪಕ್ಷದ ಟಿಕೆಟ್ ಸಿಕ್ಕಿದೆ. ಕಿಶೋರ್ ಕುಮಾರ್ ಹಿಂದುತ್ವದ ಕೆಲಸ ಮಾಡಿಕೊಂಡು ಬಂದವರು. ಬಜರಂಗದಳ, ಎರಡು ಅವಧಿಗೆ ದ.ಕ. ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರಾಗಿ ಕೆಲಸ ಮಾಡಿದವರು. ನಾನು ಚುನಾವಣೆಯಲ್ಲಿ ನಿಂತಾಗ ನನ್ನ ಪರ ಕೆಲಸ ಮಾಡಿದ್ದಾರೆ ಎಂದರು.

ಈ ಚುನಾವಣೆಯಲ್ಲಿ ಬಿಜೆಪಿ ಗೆಲುವಿನಲ್ಲಿ ಯಾವುದೇ ಸಂಶಯ ಇಲ್ಲ. ಆದರೆ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಅವಕಾಶ ನೀಡಿರುವುದು ಖುಶಿ ನೀಡಿದೆ . ಸೂಕ್ತ ಅಭ್ಯರ್ಥಿಯನ್ನು ಕೊಟ್ಟಿದೆ ಎಂದರು.

ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ,ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್, ಶಾಸಕರಾದ ಡಾ.ವೈ ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ರಾಜೇಶ್ ನಾಯಕ್, ಯಶ್ಪಾಲ್ ಸುವರ್ಣ, ಉಮನಾಥ್ ಕೋಟ್ಯಾನ್, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಮಂಗಳೂರು ಮೇಯರ್ ಮನೋಜ್ ಕುಮಾರ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ದ.ಕ.ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News