ಮುಲ್ಕಿ: ಜಮೀನು ಮಾರಾಟ ಮಾಡಿ ವಂಚನೆ ಆರೋಪ; ಪ್ರಕರಣ ದಾಖಲು
ಮುಲ್ಕಿ: ಜಮೀನು ಮಾರಾಟ ಮಾಡಿ 14 ಲಕ್ಷ ರೂ. ವಂಚಿಸಿರುವ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರೆ ಕೆ.ಎಸ್. ರಾವ್ ನಗರ ಬಳಿಯ ನಿವಾಸಿ ಶಾಹಿದಾ ಎಂಬವರು ಕೆ.ಎಸ್. ರಾವ್ ನಗರ ಸರಕಾರಿ ಶಾಲೆ ಬಳಿಯ ನಿವಾಸಿ ವಿಠಲ ಎಂಬವರಿಂದ 2021ರಲ್ಲಿ ಜಮೀನು ಖರೀಸಿದ್ದರು. ಆದರೆ, ಜಾಗದ ಮೂಲ ಯಜಮಾನಿ ಲಲಿತಾ ಎಂಬವರ ಜಾಗವನ್ನು ಆರೋಪಿಗಳಾದ ಕಾರ್ನಾಡು ಅಂಬಿಕಾ ಟಿಂಬರ್ಸ್ ನಿವಾಸಗಳಾ ಅಮಿತಾ ವಿ. ಅಮೀನ್ ಅಮೀನ್, ರೋನಿತ್ ಸಚಿನ್ ಸುವರ್ಣ, ಕಾರ್ನಾಡು ಹರಿಹರ ದೇವಸ್ಥಾನ ಬಳಿಯ ನಿವಾಸಿ ದೇವರಾಜ್ ಹಾಗೂ ಕೆ.ಎಸ್. ರಾವ್ ನಗರ ಸರಕಾರಿ ಶಾಲೆ ಬಳಿಯ ನಿವಾಸಿ ಅಪ್ಪಿ ಯಾನೆ ಯಮುನಾ ಎಂಬವರು ಸೇರಿಕೊಂಡು ವಂಚಿಸಿದ್ದಾರೆ ಎಂದು ಶಾಹಿದಾ ತನ್ನ ದೂರುನಲ್ಲಿ ತಿಳಿಸಿದ್ದಾರೆ.
ಆರೋಪಿಗಳು ಜಾಗದ ಮೂಲ ಮಾಲಕಿ ಲಲಿತಾ ಎಂಬವರನ್ನು ವಂಚಿಸಿ ಅವರ ಪಡಿತರ ಚೀಟಿಗೆ ಅಪ್ಪಿ ಯಾನೆ ಯಮುನಾ ಅವರ ಫೊಟೊ ಬಳಸಿ ಆರೋಪಿಗಳ ಪೈಕಿ ಕಾರ್ನಾಡು ಹರಿಹರ ದೇವಸ್ಥಾನ ಬಳಿಯ ನಿವಾಸಿ ದೇವರಾಜ್ ಎಂಬವರ ತಂದೆ ವಿಠಲ ಎಂಬವರಿಗೆ ಮಾರಾಟ ಮಾಡಿರುವಂತೆ ದಾಖಲೆಗಳನ್ನು ತಯಾರು ಮಾಡಿಕೊಂಡಿದ್ದರು. ಇದನ್ನು ಅಮಿತಾ ವಿ. ಅಮೀನ್ , ರೋನಿತ್ ಸಚಿನ್ ಸುವರ್ಣ ಅವರು ದೂರುದಾರೆ ಶಾಹಿದಾ ಅವರಿಗೆ 14ಲಕ್ಷ ರೂ. ಗೆ ಮಾರಾಟ ಮಾಡಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶಾಹಿದಾ ಅವರು ತನ್ನ ಜಾಗವನ್ನು ಮಾರಾಟ ಮಾಡಲೆಂದು ಪ್ರಯತ್ನಿಸಿದಾಗ ಆರೋಪಿಗಳ ವಂಚನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಿಸಲು ಮುಲ್ಕಿ ಪೊಲೀಸರಿಂದ ನಿರಾಕರಣೆ: ಅಬ್ದುಲ್ ರಝಾಕ್ ಆರೋಪ
ಆರೋಪಿಗಳು ವಂಚಿಸಿರುವ ಪ್ರಕರಣ ದೂರುದಾರೆ ಶಾಹಿದಾ ಅವರಿಗೆ 2024ರ ಸೆ.7ರಂದು ತಿಳಿದು ಅದೇ ದಿನ ಮುಲ್ಕಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಆರೋಪಿಗಳ ವಿರುದ್ಧ ದೂರು ನೀಡಿ ವಂಚಿಸಲಾಗಿರುವ 14 ಲಕ್ಷ ರೂ. ಹಿಂದಿರುಗಿಸು ವಂತೆ ಮನವಿ ಮಾಡಿಕೊಂಡಿದ್ದರು. ದೂರು ಪಡೆದುಕೊಂಡಿದ್ದ ಮುಲ್ಕಿ ಪೊಲೀಸರು, ಸೆ.13ರಂದು ಈ ಪ್ರಕರಣ ಸಿವಿಲ್ ವ್ಯಾಜ್ಯವಾಗಿದ್ದು, ಇಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದಿಲ್ಲ ಎಂದು ಹೇಳಿ ದೂರುದಾರರನ್ನು ಹಿಂದೆ ಕಳುಹಿದ್ದರು. ಅಲ್ಲದೆ, ಮುಲ್ಕಿ ಪೊಲೀಸ್ ಠಾಣೆಗೆ ಹಲವು ಬಾರಿ ಭೇಟಿ ನೀಡಿ ಪೊಲೀಸರಿಗೆ ಪ್ರಕರಣ ಸಂಬಂಧ ವಿವರಿಸಲು ಮುಂದಾದಾಗಲೂ ಪೊಲೀಸರು ಸಿವಿಲ್ ವ್ಯಾಜ್ಯ ಎಂದು ಹೇಳಿ ಹಿಂದೆ ಕಳುಹಿಸಿದ್ದರು ಎಂದು ಶಾಹಿದಾರ ಪತಿ ಅಬ್ದುಲ್ ರಝಾಕ್ ದೂರಿದ್ದಾರೆ.
ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಕಾರಣ ದೂರುದಾರೆ ಶಾಹಿದಾ ಅವರು ಅ.2ರಂದು ಪಣಂಬೂರು ಉಪ ವಿಭಾಗದ ಪೊಲೀಸ್ ಉಪಾಯುಕ್ತ ಮನೋಜ್ ಕುಮಾರ್ ಅವರನ್ನು ಭೇಟಿ ಮಾಡಿ ದೂರು ಸಹಿತ ದಾಖಲೆಗಳನ್ನು ಸಲ್ಲಿಸಿದ್ದರು. ಎಸಿಪಿಯವರ ಮಧ್ಯಪ್ರವೇಶದ ಬಳಿಕ ಅವರ ಸೂಚನೆಯ ಮೇರೆಗೆ ಅ.3ರಂದು ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡರು ಎಂದು ದೂರುದಾರೆಯ ಪತಿ ಅಬ್ದುಲ್ ರಝಾಕ್ ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.