ವಿಧಾನ ಪರಿಷತ್ ಉಪ ಚುನಾವಣೆ ಸಿದ್ಧತೆ: ವೀಕ್ಷಕರಿಂದ ಪರಿಶೀಲನೆ

Update: 2024-10-07 13:00 GMT

ಮಂಗಳೂರು: ವಿಧಾನ ಪರಿಷತ್ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆಯುವ ಉಪಚುನಾವಣೆಯ ಸಿದ್ಧತೆಗಳನ್ನು ಚುನಾವಣಾ ಆಯೋಗದ ವೀಕ್ಷಕರಾದ ಪಂಕಜ್ ಕುಮಾರ್ ಪಾಂಡೆ ಅವರು ಸೋಮವಾರ ಪರಿಶೀಲಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಅವರು ಮತಗಟ್ಟೆಗಳ ಸಿದ್ಧತೆ, ಚುನಾವಣಾ ಸಿಬ್ಬಂದಿಗಳ ನೇಮಕ, ಮತ ಪತ್ರಗಳ ಮುದ್ರಣ, ಮತದಾರರ ಪಟ್ಟಿ ಹಾಗೂ ಇತರ ಚುನಾವಣೆ ಸಿದ್ಧತೆಗಳ ಮಾಹಿತಿ ಪಡೆದರು.

ಮತಗಟ್ಟೆ ಸಿಬ್ಬಂದಿಗಳಿಗೆ ತರಬೇತಿ ಹಾಗೂ ಮತ ಎಣಿಕೆ ಕೇಂದ್ರದಲ್ಲಿ ಕೈಗೊಳ್ಳಬೇಕಾದ ವ್ಯವಸ್ಥೆಗಳ ಬಗ್ಗೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಚುನಾವಣಾ ವೀಕ್ಷಕರಿಗೆ ಸಿದ್ಧತೆಗಳ ಮಾಹಿತಿಯನ್ನು ನೀಡಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 392 ಮತಗಟ್ಟೆಗಳಿದ್ದು 6032 ಮತದಾರರಿದ್ದಾರೆ. ಈ ಪೈಕಿ 3127 ಮಹಿಳಾ ಮತದಾರರು ಹಾಗೂ 2905 ಪುರುಷ ಮತದಾರರು ಇದ್ದಾರೆಂದು ವಿವರ ನೀಡಿದರು.

ಮತ ಎಣಿಕೆ ಮಂಗಳೂರಿನ ಸಂತ ಅಲೋಷಿಯಸ್ ಪದವಿ ಪೂರ್ವಕಾಲೇಜಿನಲ್ಲಿ ನಡೆಯಲಿದೆ ಎಂದು ಹೇಳಿದರು.

ಸಭೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ., ದಕ್ಷಿಣಕನ್ನ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್. ಎನ್, ಉಡುಪಿ ಪೊಲೀಸ್ ಅಧೀಕ್ಷಕ ಅರುಣ್, ದ.ಕ ಅಪರ ಜಿಲ್ಲಾಧಿಕಾರಿ ಡಾ.ಜಿ ಸಂತೋಷ್ ಕುಮಾರ್, ಉಡುಪಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News