ಗುಂಡುಕಲ್ಲು: ಮಸೀದಿಯ ಆಡಳಿತ ಸಮಿತಿಗೆ ಶಾಂತಿಯುತ ಮತದಾನ

Update: 2024-10-07 15:39 GMT

ಮೂಡುಬಿದಿರೆ: ಮುಂದೂಡಲ್ಪಟ್ಟಿದ್ದ ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಮುಹಿಯುದ್ದೀನ್‌ ಜುಮಾ ಮಸೀದಿಯ ಆಡಳಿತ ಸಮಿತಿಗೆ ಸೋಮವಾರ ಶಾಂತಿಯುತವಾಗಿ ಮತದಾನ ನಡೆಯಿತು.

ಗುಂಡುಕಲ್ಲು ಮುಹಿಯುದ್ದೀನ್‌ ಜುಮಾ ಮಸೀದಿಯಲ್ಲಿ ಎರಡು ತಂಡಗಳ ನಡುವೆ ಆಡಳಿತ ಸಮಿತಿಯ ಚುಕ್ಕಾಣಿಗಾಗಿ ಪೈಪೋಟಿ ನಡೆದಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾ ವಕ್ಫ್‌ ಸಮಿತಿ ಮಧ್ಯ ಪ್ರವೇಶಿಸಿ ಸೆ.29ರಂದು ಚುನಾವಣೆಗೆ ತಯಾರಿ ನಡೆಸಿತ್ತು. ಆದರೆ, ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಅ.3ರಂದು ಚುನಾವಣೆ ನಡೆಸುವಂತೆ ಆದೇಶಿಸಿ ತಹಶಿಲ್ದಾರ್‌ ಆದೇಶಿಸಿದ್ದರು. ಬಳಿಕ ಅ.2ರಂದು ಮರು ಆದೇಶ ಮಾಡಿದ್ದ ತಹಶೀಲ್ದಾರ್‌ ಅವರು, ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಉಪ ಚುನಾವಣೆ ಸಂಬಂಧ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮತ್ತು ಚುನಾವಣೆ ನಡೆದರೆ ಶಾಂತಿ ಸುವ್ಯವಸ್ಥೆ ಹದಗೆಡುವ ಬಗ್ಗೆ ಮತ್ತು ಮೂಡುಬಿದಿರೆ ಪೊಲೀಸರು ವರದಿ ನೀಡಿದ್ದ ಪರಿಣಾಮ ವಾಗಿ ಅ.3ರಂದು ನಡೆಯಬೇಕಿದ್ದ ಚುನಾವಣೆಯನ್ನೂ ಮುಂದೂಡಿ ಆದೇಶಿಸಿದ್ದರು.

ಜಿಲ್ಲಾ ವಕ್ಫ್ ಸಮಿತಿಯು ಅ.7ರ ಸೋಮವಾರ ಚುನಾವಣೆ ನಡೆಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಎರಡೂ ವಿಭಾಗ ಗಳ ಸದಸ್ಯರು ಬೆಳಗ್ಗೆಯೇ ಮಸೀದಿಯಲ್ಲಿ ಜಮಾಯಿಸಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಸೀದಿಯ ಪರಿಸರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಚುನಾವಣೆ ಸಂಬಂಧ ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಅವರು ಎರಡೂ ತಂಡಗಳ ಮುಖಂಡರು ಮತ್ತು ಸದಸ್ಯರ ಜೊತೆ ಅ.6ರಂದು ಮಾತುಕತೆ ನಡೆಸಿ ಶಾಂತಿಯುತ ಮತದಾನ ನಡೆಸುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇತ್ತಂಡಗಳ ಮುಖಂಡರು ಮಾತುಕತೆ ನಡೆಸಿ ಎಲ್ಲಾ ಸದಸ್ಯರ ಅನುಮತಿ ಪಡೆದ ಬಳಿಕ ಶಾಂತಿಯುತವಾಗಿ ಚುನಾವಣೆ ನಡೆಯಿತು.

ಚುನಾವಣೆ ಸಂದರ್ಭ ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಮತ್ತು ಉಪನಿರೀಕ್ಷಕ ಕೃಷ್ಣಪ್ಪ ಅವರು ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News