ಮಂಗಳೂರಿನ ಇತಿಹಾಸದಲ್ಲೇ ಅತೀ ದೊಡ್ಡ ಡ್ರಗ್ಸ್ ದಂಧೆ ಬಯಲಿಗೆ!

Update: 2024-10-07 10:06 GMT

ವಶಪಡಿಸಿಕೊಂಡ ಡ್ರಗ್ಸ್‌ ಮತ್ತು ಬಂಧಿತ ಆರೋಪಿ

ಕಸ ಎಸೆಯೋ ಜಾಗದಲ್ಲಿ ಬಿಸ್ಕಿಟ್ ಪ್ಯಾಕೆಟ್, ಗುಟ್ಕ, ಚಿಪ್ಸ್ ನ ಪ್ಯಾಕೆಟ್ ಗಳಲ್ಲಿ ಡ್ರಗ್ಸ್‌!

ಮಂಗಳೂರು: ಬರೋಬ್ಬರಿ 6 ಕೋಟಿ ರೂ. ಮೌಲ್ಯದ ಆರು ಕೆ.ಜಿಗೂ ಅಧಿಕ ಎಂಡಿಎಂಎ ಡ್ರಗ್ಸ್‌ ವಶಪಡಿಸಿಕೊಂಡಿರುವ ಮಂಗಳೂರು ಸಿಸಿಬಿ ಪೊಲೀಸರು, ನೈಜೀರಿಯಾ ಪ್ರಜೆಯನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿದ ನೀಡಿದ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್, ʼಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಇತಿಹಾಸದಲ್ಲೇ ದೊಡ್ಡ ಮೌಲ್ಯದ ಡ್ರಗ್ ದಂಧೆ ಬಯಲಿಗೆಳೆದ ಪ್ರಕರಣ ಇದಾಗಿದೆʼ ಎಂದು ಹೇಳಿದರು.

ಬರೋಬ್ಬರಿ ಆರು ಕೆ.ಜಿ.ಯ ಆರು ಕೋಟಿ ಮೌಲ್ಯದ ಎಂಡಿಎಂ ಡ್ರಗ್ ವಶಕ್ಕೆ ಪಡೆಯಲಾಗಿದೆ. ವಾರದ ಹಿಂದೆ ಹೈದರ್ ಅಲಿ ಎಂಬಾತನನ್ನು ವಶಕ್ಕೆ ಪಡೆದು 15 ಗ್ರಾಂ ಎಂಡಿಎಂ ವಶಕ್ಕೆ ಪಡೆಯಲಾಗಿತ್ತು. ಈತನನ್ನ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಮಾಹಿತಿ ಲಭ್ಯವಾಗಿದೆ.

ಒಂದು ಬ್ಯಾಂಕ್ ವಿವರದಡಿ ಅಳವಾಗಿ ತನಿಖೆ ನಡೆಸಿದಾಗ ನೈಜೀರಿಯನ್ ಪ್ರಜೆಯ ಕೈವಾಡ ಇರುವುದು ಬೆಳಕಿಗೆ ಬಂದಿತ್ತು. ಆತನ ಜಾಡು ಹಿಡಿದು ಬೆಂಗಳೂರಿಗೆ ತೆರಳಿ ಆತನನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಪೊಲೀಸರ ಅತ್ಯುತ್ತಮ ಕಾರ್ಯಾಚರಣೆ ಇದಾಗಿದೆ ಎಂದು ಕಮಿಷನರ್ ಹೇಳಿದ್ದಾರೆ.

35 ಡೆಬಿಟ್ ಕಾರ್ಡ್ ಗಳು, 10 ಬ್ಯಾಂಕ್ ಪಾಸ್ ಪುಸ್ತಕಗಳು, 17 ಇನ್ ಆಕ್ಟಿವ್ ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಅತನ ಪಾಸ್‌ಪೋರ್ಟ್ ಸಹಿತ ಎಲ್ಲಾ ದಾಖಲೆ ವಶಕ್ಕೆ ಪಡೆಯಲಾಗಿದೆ. ಸಣ್ಣ ಸಣ್ಣ ಪ್ಯಾಕೆಟ್ ಗಳ ಮೂಲಕ ರಾಜ್ಯದ ಹಲವಡೆ ಆತ ಡ್ರಗ್ ಪೂರೈಕೆ ಮಾಡುತ್ತಿದ್ದ. ನಗರದಲ್ಲಿ ಬಿಸ್ಕಿಟ್ ಪ್ಯಾಕೆಟ್, ಗುಟ್ಕ, ಚಿಪ್ಸ್ ನ ಪ್ಯಾಕೆಟ್ ಗಳಲ್ಲಿ ಕಸ ಎಸೆಯೋ ಜಾಗದಲ್ಲಿ ಎಸೆದು, ಬಳಿಕ ಪೆಡ್ಲರ್ ಅದರ ಫೋಟೊ ತೆಗೆದು ಪೂರೈಕೆದಾರನಿಗೆ ಮಾಹಿತಿ ರವಾನೆಯಾಗುತ್ತದೆ. ಅ ಬಳಿಕ ಅವರು ಅಲ್ಲಿಂದ ಅದನ್ನು ತೆಗೆದುಕೊಂಡು ಗ್ರಾಹಕರಿಗೆ ಪೂರೈಕೆ ಮಾಡಲಾಗುತ್ತಿರುವುದು ಪತ್ತೆಯಾಗಿದೆ ಎಂದು ಕಮಿಷನರ್ ವಿವರ ನೀಡಿದರು.

ಹೀಗೆ ಮಂಗಳೂರು ನಗರದಲ್ಲಿ ಐವತ್ತಕ್ಕೂ ಅಧಿಕ ಪ್ಯಾಕೆಟ್ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಯ ವಿಸಾ ಅವಧಿ ಮುಕ್ತಾಯ ಆಗಿದೆ. ಸಿಸಿಬಿ ತಂಡಕ್ಕೆ ಡಿಜಿಪಿ ಒಂದು ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಕಮಿಷನರೇಟ್ ನಿಂದ ಪ್ರತ್ಯೇಕ ಒಂದು ಲಕ್ಷ ರೂ. ಬಹುಮಾನ ಘೋಷಿಸುತ್ತಿರುವುದಾಗಿ ಅನುಪಮ್ ಅಗರ್‌ವಾಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News