ಸಾಮಾನ್ಯ ರಿಕ್ಷಾ ಚಾಲಕ- ಮಾಲಕರಿಂದ ಅನಿದಿಷ್ಟಾವಧಿ ಧರಣಿ ಆರಂಭ

Update: 2024-10-14 12:42 GMT

ಮಂಗಳೂರು, ಅ. 14: ಬ್ಯಾಟರಿ ಚಾಲಿತ ಇ ರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚಾರ ಅವಕಾಶ ನೀಡುವ ಮೂಲಕ ಅನಗತ್ಯ ಗೊಂದಲ ಸೃಷ್ಟಿಸಲಾಗಿದೆ ಎಂದು ಆರೋಪಿಸಿ ದ.ಕ. ಜಿಲ್ಲಾ ಆಟೋ ರಿಕ್ಷಾ ಚಾಲಕರ ಸಂಘ ಮತ್ತು ಸಮಾನ ಮನಸ್ಕರ ವೇದಿಕೆ ಮಂಗಳೂರು ವತಿಯಿಂದ ಅನಿರ್ಧಿಷ್ಠಾವಧಿ ಧರಣಿ ಸೋಮವಾರ ಆರಂಭಗೊಂಡಿದೆ.

ಮಂಗಳೂರು ಆರ್‌ಟಿಒ ಕಚೇರಿ ಮುಂಭಾಗದಲ್ಲಿ ಆರಂಭಗೊಂಡ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಕಾನೂನು ವಿರುದ್ಧವಾಗಿ ಪರ್ಮಿಟ್ ರಹಿತವಾಗಿ ಬ್ಯಾಟರಿ ರಿಕ್ಷಾಗಳಿಗೆ ಅವಕಾಶ ನೀಡಿದ ಕೇಂದ್ರ ಸರಕಾರದ ಒಡೆದು ಆಳುವ ನೀತಿ ಅನುಸರಿಸಿದೆ ಎಂದು ಆರೋಪಿಸಿದರು.

ರಾಜ್ಯ ಸರಕಾರ ತಮಿಳುನಾಡಿನಂತೆ ರಾಜ್ಯದಲ್ಲಿಯೂ ನಿಯಮದಲ್ಲಿ ತಿದ್ದುಪಡಿ ಮಾಡಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯ ಬೇಕು. ಜಿಲ್ಲೆಯಾದ್ಯಂತ ಬ್ಯಾಟರಿ ರಿಕ್ಷಾಗಳ ಸಂಚಾರಕ್ಕೆ ಜಿಲ್ಲಾಡಳಿತ ನೀಡಿರುವ ಅನುಮತಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಸಮನ್ವಯ ಸಮಿತಿಯ ಸ್ಥಾಪಕ ಅಧ್ಯಕ್ಷ ಅಲಿ ಹಸನ್, ರಿಕ್ಷಾ ಚಾಲಕರ ಮೇಲಿನ ನಿರಂತರ ದಬ್ಬಾಳಿಕೆ ಕೊನೆಯಾಗಬೇಕು. ರಿಕ್ಷಾ ಚಾಲಕರನ್ನು ಒಡೆದು ಆಳುವ 2018ರ ನೀತಿ ರದ್ದುಗೊಳ್ಳಬೇಕು ಎಂದು ಒತ್ತಾಯಿಸಿದರು.

ದ. ಕ. ಜಿಲ್ಲೆಯಾದ್ಯಂತ ಇಲೆಕ್ಟ್ರಿಕ್ ಅಟೋರಿಕ್ಷಾಗಳಿಗೆ ಸಂಚರಿಸಲು ಅನುಮತಿ ನೀಡಿರುವ ಆದೇಶವನ್ನು ಹಿಂಪಡೆಯ ಬೇಕು. ನಗರದಲ್ಲಿ 390ಕ್ಕೂ ಅಧಿಕ ರಿಕ್ಷಾ ಪಾರ್ಕ್‌ಗಳಿದ್ದವು. ಪ್ರಸ್ತುತ 115ರಷ್ಟು ಮಾತ್ರ ಇವೆ. 8000ಕ್ಕೂ ಅಧಿಕ ಸಾಮಾನ್ಯ ಆಟೋರಿಕ್ಷಾಗಳಿದ್ದು, 2000 ಎಲೆಕ್ಟ್ರಿಕ್ ರಿಕ್ಷಾಗಳು ಬಂದಿವೆ. ಇದೀಗ ಇ ಆಟೋಗಳಿಗೆ ಜಿಲ್ಲೆಯಾದ್ಯಂತ ಸಂಚಾರ ಹಾಗೂ ಪಾರ್ಕಿಂಗ್‌ಗೆ ಅವಕಾಶ ನೀಡುವ ಮೂಲಕ ಬಡವರ ಹೊಟ್ಟೆಗೆ ಹೊಡೆಯುವ ಪ್ರಯತ್ನ ನಡೆದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತ ಜೆರಾಲ್ಡ್ ಟವರ್ಸ್ ಮಾತನಾಡಿ, ಇ ಆಟೋಗಳಿಗೆ ಸಂಬಂಧಿಸಿ ಕೇಂದ್ರ ಸರಕಾರ ತನ್ನ ನಿಲುವನ್ನು ಪುನರ್ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಮಂಗಳಾದೇವಿ, ದ.ಕ. ಜಿಲ್ಲಾ ಆಟೋ ಚಾಲಕರ ಸಂಘದ ಅಧ್ಯಕ್ಷ ವಿಷ್ಣುಮೂರ್ತಿ, ಪ್ರಮುಖರಾದ ಅರುಣ್ ಕುಮಾರ್, ದಯಾನಂದ್ ಶೆಟ್ಟಿ, ಹಿರಿಯ ರಿಕ್ಷಾ ಚಾಲಕ ಉಣ್ಣಿಕೃಷ್ಣನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News