ಮಂಗಳೂರಿನಲ್ಲಿ ಹೈಕೋರ್ಟ್ ಪೀಠ| ಪ್ರಬಲ ಹೋರಾಟಕ್ಕೆ ಸಜ್ಜು: ಸಿಎಂ ಭೇಟಿಯಾಗಲಿರುವ ನಿಯೋಗ

Update: 2024-10-14 15:58 GMT

ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹಿಸಿ ಜನಪ್ರತಿನಿಧಿಗಳನ್ನು ಒಳಗೊಂಡ ನಿಯೋಗ ರಾಜ್ಯದ ಮುಖ್ಯಮಂತ್ರಿ ಮತ್ತು ಕಾನೂನು ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸುವ ಬಗ್ಗೆ ಹೈಕೋರ್ಟ್ ಪೀಠ ಹೋರಾಟ ಸಮಿತಿ ನಿರ್ಧಾರ ಕೈಗೊಂಡಿದೆ.

ಹೈಕೋರ್ಟ್ ಪೀಠ ಹೋರಾಟ ಸಮಿತಿ ಸಭೆಯು ಸೋಮವಾರ ನಗರದ ಎಸ್‌ಡಿಎಮ್ ಕಾನೂನು ಕಾಲೇಜಿನ ಸಭಾಂಗಣ ದಲ್ಲಿ ನಡೆಯಿತು.

ಹೈಕೋರ್ಟ್ ಕೋರ್ಟ್ ಪೀಠಕ್ಕೆ ಸಾಧ್ಯವಾದರೆ ಮಂಗಳೂರು ನಗರದೊಳಗೆ ಅಥವಾ ಮಂಗಳೂರು ಉಡುಪಿ ಮಧ್ಯದಲ್ಲಿ ಜಾಗ ನಿಗದಿ ಪಡಿಸಲು ಪ್ರಯತ್ನ, ಮಂಗಳೂರಿನ ಸರ್ಕ್ಯೂಟ್ ಹೌಸ್ ಹತ್ತಿರದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸೇರಿರುವ ಜಾಗವನ್ನು ಹೈ ಕೋರ್ಟ್ ಪೀಠಕ್ಕೆ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡುವುದು, ಹೋರಾಟದ ಭಾಗ ವಾಗಿ ಜನಾಭಿಪ್ರಾಯ ಮೂಡಿಸಲು ಮುಲ್ಕಿಯಿಂದ ಮಂಗಳೂರಿಗೆ ಪಾದಯಾತ್ರೆ , ಪೀಠ ಸ್ಥಾಪನೆ ಗೆ ಅಗ್ರಹಿಸಿ ಮಂಗಳೂರು ಬಂದ್, ಮುಂಬರುವ ರಾಜ್ಯ ಬಜೆಟ್‌ನಲ್ಲಿ ಹೈ ಕೋರ್ಟ್ ಪೀಠ ಸ್ಥಾಪನೆಗೆ 25 ಕೋಟಿ ರೂ. ಅನುದಾನ ಒದಗಿಸುವಂತೆ ಸರಕಾರವನ್ನು ಅಗ್ರಹಿಸುವುದು.

ಕಲಬುರಗಿ ಮತ್ತು ಧಾರಾವಾಡ ಪೀಠಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ತಯಾರಿ ಮತ್ತಿತರರ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಸಭೆಯಲ್ಲಿ ದ. ಕ ಜಿಲ್ಲೆಯ ಎಲ್ಲ ವಕೀಲರ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ, ಉಪಾಧ್ಯಕ್ಷರು, ಖಜಾಂಜಿ ಸೇರಿದಂತೆ ಕೋರ್ ಕಮಿಟಿ ರಚಿಸಲಾಯಿತು.

ಸಭೆಯಲ್ಲಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಸಂಚಾಲಕ ಐವನ್ ಡಿ ಸೋಜ, ಹೈಕೋರ್ಟ್ ಪೀಠ ಹೋರಾಟ ಸಮಿತಿ ಅಧ್ಯಕ್ಷರು ಮತ್ತು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ, ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಧ್ಯಾಪಕ ಮಹೇಶ್ಚಂದ್ರ, ಹಿರಿಯ ವಕೀಲರಾದ ಎಂ. ಪಿ ನೊರೊನ್ಹಾ , ಟಿ. ಎನ್ ಪೂಜಾರಿ, ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರುಗಳಾದ ಎಂ. ಆರ್ ಬಳ್ಳಾಲ್, ಪ್ರಥ್ವಿರಾಜ್ ರೈ, ಮಾಜಿ ಕಾರ್ಯದರ್ಶಿ ಶ್ರೀಧರ್ ಎಣ್ಮಕಜೆ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ಕಾರ್ಯದರ್ಶಿ ಚಿನ್ಮಯ್ ರೈ, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚಾರ್ಡ್ ಕ್ರಾಸ್ತ, ಮೂಡಬಿದ್ರೆ ವಕೀಲರ ಸಂಘದ ಕಾರ್ಯದರ್ಶಿ ಜಯಪ್ರಕಾಶ್ ಮತ್ತು ಇತರ ಹಿರಿಯ ನ್ಯಾಯವಾದಿಗಳು ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News