ಸುರತ್ಕಲ್: ನಾಡದೋಣಿ ಮೀನುಗಾರರು ಪ್ರತಿಭಟನೆ

Update: 2024-10-14 16:49 GMT

ಸುರತ್ಕಲ್: ಇಲ್ಲಿನ ಕುಳಾಯಿ ಜಟ್ಟಿಯನ್ನು ಅವೈಜ್ಞಾನಿಕ ಕಾಮಗಾರಿ ಎಂದು ಮೀನುಗಾರಿಕ ಸಚಿವರೇ ಸ್ಥಗಿತಗೊಳಿಸಿ ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆಗಳನ್ನು ನಡೆಸಿದ ಬಳಿಕ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದ್ದರು. ಆದರೂ ಕಾಮಗಾರಿಯ ನೇತೃತ್ವ ವಹಿಸಿರುವ ಎನ್.ಎಂ.ಪಿ.ಎ. ಚೇರ್‌ಮೆನ್ ಎಲ್ಲರ ಮನವಿ, ಸೂಚನೆಗಳನ್ನು ದಿಕ್ಕರಿಸಿ ಕಾಮಗಾರಿ ಮುಂದುರಿಸಿದ್ದಾರೆ ಎಂದು ಆರೋಪಿಸಿ ನಾಡದೋಣಿ ಮೀನುಗಾರರು ಸೋಮವಾರ ಜಟ್ಟಿ ಬಳಿ  ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಅಭಿಪ್ರಾಯ ಹಂಚಿಕೊಂಡ ಮೀನುಗಾರರು, ಸ್ಥಳೀಯ ಶಾಸಕ ಭರತ್ ಶೆಟ್ಟಿ ಮತ್ತು ಸಂಸದ ಬೃಜೇಶ್ ಚೌಟ ಅವರಿಗೆ ಮತ ನೀಡಿದ್ದೇವೆ. ಅವರು ಇಲ್ಲಿಗೆ ಬಂದು ನಮ್ಮ ಕಷ್ಟಗಳನ್ನು ಕೇಳುತ್ತಿಲ್ಲ. ಬೃಜೇಶ್ ಚೌಟ ಅವರು ಸಂಸದರಾಗಿ ಆಯ್ಕೆಯಾದ ಬಳಿಕ ಒಂದು ಬಾರಿಯೂ ಅವೈಜ್ಞಾನಿಕ ಜಟ್ಟಿ ಕಾಮಗಾರಿಯ ವೀಕ್ಷಣೆಗೂ ಬಂದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ನಮ್ಮ ಬೇಡಿಕೆಗಳಿಗೆ ಸ್ಪಂದನೆ ನೀಡಿದಿದ್ದರೆ ಮುಂದಿನ ದಿನಗಳಲ್ಲಿ ನಡೆಯ ಲಿರುವ ಎಲ್ಲಾ ಚನಾವಣೆಗಳನ್ನು ಮೀನುಗಾರ ಸಮಾಜವು ಬಹಿಷ್ಕರಿಸುವುದಾಗಿ ಎಚ್ಚರಿಸಿದರು. ಸಭೆಯ ಬಳಿಕ ಸಾಂಕೇತಿಕ ಪ್ರತಿಭಟನೆ ನಡೆಸುವುದಾಗಿ ತೀರ್ಮಾನಿಸಿ ಜಟ್ಟಿಗೆ ಜಲ್ಲಿಕಲ್ಲು ಸಾಗಾಟ ಮಾಡುವ ಲಾರಿಗಳಿಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ವಸಂತ ಸುವರ್ಣ, ಇಲ್ಲಿನ ಅವೈಜ್ಞಾನಿಕ ಜಟ್ಟಿಗೆ ಕರ್ನಾಟಕ ರಾಜ್ಯದ ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಅವರು ಭೇಟಿ ನೀಡಿದ್ದರು. ಈ ವೇಳೆ ಅವರಲ್ಲಿ ಇಲ್ಲಿನ ಅವೈಜ್ಞಾನಿಕ ಕಾಮಗಾರಿಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದೆವು. ಹಾಗಾಗಿ ಅವರು ಕಾಮಗಾರಿ ಸ್ಥಗಿತ ಗೊಳಿಸಿ ಮೀನುಗಾರರು, ಇಂಜಿನಿಯರ್ಗಳು, ಸಚಿವರು, ಸಂಸದರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಾಧಕ ಬಾದಕಗಳ ಬಗ್ಗೆ ಚರ್ಚಿಸಿ ಬಳಿಕ ಕಾಮಗಾರಿ ನಡೆಸುವಂತೆ ಸೂಚಿದ್ದರು. ಆದರೆ, ಎನ್‌ಎಂಪಿಎ ಚೇ‌ರ್ ಮ್ಯಾನ್ ಇದ್ಯಾವುದನ್ನೂ ಮಾಡದೇ ಮೀನುಗಾರರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತನಗೆ ಇಷ್ಟಬಂದಂತೆ ಕಾಮಗಾರಿ ಮುಂದುವರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಮೀನುಗಾರಿಕಾ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಮೀನುಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದ್ದರು. ಈ ಬಗ್ಗೆ ಎನ್‌ಎಂಪಿಎ ಚೇರ್ ಮ್ಯಾನ್ ಅವರಲ್ಲಿ ವಿಚಾರರಿಸಿದರೆ ಅವರು ನೇರವಾಗಿ ಸಚಿವರೊಂದಿಗೆ ಮಾತನಾಡುವಂತೆ ಉಡಾಫೆಯಾಗಿ ಮಾತನಾಡುತ್ತಿದ್ದಾರೆ. ಶಾಸಕರು ಸಂಸದರು ನಮ್ಮೊಂದಿಗೆ ಇದ್ದು, ನಮಗೆ ಮಾರ್ಗದರ್ಶನ ನೀಡುವ ಜೊತೆಗೆ ಸರಕಾರಕ್ಕೆ ಅಧಿಕಾರಿಗಳಿಗೆ ಒತ್ತಡ ಹೇರುವ ಕೆಲಸ ಮಾಡಬೇಕಿತ್ತು. ಆದರೆ, ಅವರು ನೀವೇ ಸಚಿವರನ್ನು ಭೇಟಿಯಾಗಿ, ಕೆಲಸ ಮಾಡಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ನಾವು ಅವರನ್ನು ಓಟು ನೀಡಿ ಗೆಲ್ಲಿಸಿದವರು. ಹಾಗಾದರೆ ನಮ್ಮ ಮತಗಳಿಗೆ ಬೆಲೆಯೇ ಇಲ್ಲಾ ಎಂದು ನಾಡದೋಣಿ ಮೀನುಗಾರರ ಸಂಘದ ಸುರೇಶ್ ಶ್ರೀಯಾನ್ ಆಕ್ರೋಶ ವ್ಯಕ್ತ ಪಡಿಸಿದರು.

ಮೂಲ ನಾಡದೋಣಿ ಸಂಘದ ಅಧ್ಯಕ್ಷ ಅಶ್ವತ್ ಕಾಂಚನ್, ಪ್ರಧಾನ ಕಾರ್ಯದರ್ಶಿ ಚಂದ್ರ ಶೇಖರ್ ಶ್ರಿಯಾನ್, ನಾಡದೋಣಿ ಮೀನುಗಾರರು ಮತ್ತು ಮೂಲ ನಾಡದೋಣಿ ಮೀನುಗಾರರ ಸಂಘದ ಪದಾಧಿಕಾರಿಗಳಾದ ದಿವಾಕರ್, ಉದಯ, ಸುಧೀರ್, ಯಾದವ, ಮಧುಕರ ಪೂಜಾರಿ, ಪ್ರವೀಣ್ ಎಸ್.‌ಸಾಲ್ಯಾನ್ ಹಾಗೂ ನೂರಾರು ನಾಡದೋಣಿ ಮೀನುಗಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.




 



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News