ಬಾಬು ಪಿಲಾರ್ ನಿಸ್ವಾರ್ಥ ಸೇವೆಗೆ ಉಳ್ಳಾಲ ಪ್ರೆಸ್ ಕ್ಲಬ್ ಗೌರವ

Update: 2024-10-23 15:20 GMT

ಉಳ್ಳಾಲ: ಹಣದ ಆಸೆಯಿಂದ ಹೆಣ ಸುಡುವವರಿಬ್ಬರ ಗಲಾಟೆ ತಾರಕಕ್ಕೇರಿತ್ತು, ಉಳ್ಳಾಲ ಭಾಗದಲ್ಲಿ ಹಿಂದು ಅಂತಿಮ ಸಂಸ್ಕಾರ ನಡೆಸಲು ಆರ್ಥಿಕವಾಗಿ ದುರ್ಬಲರಿಗೆ ವಿಧಿಯೇ ಇಲ್ಲ ಅಂದಾಗ ಎಲ್ಲರಿಗೆ ಎದುರಾಗಿ ನಿಂತು ಧೈರ್ಯ ತೋರಿ ಉಚಿತ ಅಂತಿಮ ಸಂಸ್ಕಾರ ನಡೆಸಿದವರು ಬಾಬು ಪಿಲಾರ್. 2024ರ ಅ.20ಕ್ಕೆ ಜೀವನದುದ್ದಕ್ಕೂ ಸೇವೆ ನಡೆಸಿದ 4,500 ಮೃತದೇಹಗಳಾಗಿದೆ ಅನ್ನುವುದು ಅವರು ಬರೆದಿಟ್ಟ ಕ್ಯಾಲೆಂಡರಿನಲ್ಲಿ ದಾಖಲಾಗಿದೆ. ಶ್ರೇಷ್ಟ ಮಾನವೀಯತೆ ಮೈಗೂಡಿಸಿದ ಸರಳ ವ್ಯಕ್ತಿತ್ವದ ವ್ಯಕ್ತಿ ಬಾಬು ಪಿಲಾರ್ ಅವರಿಗೆ ಇಂದು ಉಳ್ಳಾಲ ಪ್ರೆಸ್ ಕ್ಲಬ್ ವತಿಯಿಂದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಅಸೈಗೋಳಿ ಅಭಯಾಶ್ರಮದ ಸ್ಥಾಪಕಾಧ್ಯಕ್ಷ ಶ್ರೀನಾಥ್ ಹೆಗ್ಡೆ ಗೌರವಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿ, ಎಸ್ ಎಸ್ ಎಲ್ ಸಿ ನಂತರ ಪೈಂಟಿಂಗ್ ವೃತ್ತಿ ಆರಂಭಿಸಿದವರು, ಅನಿವಾರ್ಯ ವಾಗಿ ಪೈಂಟಿಂಗ್ ನಲ್ಲಿ ಹೊಸಮನೆಗಳೆರಡರ ನಾಮಫಲಕಗಳನ್ನು ಬರೆಯಲು ಗುತ್ತಿಗೆದಾರರು ಸೂಚಿಸಿದಂತೆ ಬರೆದ ಬರವಣಿಗೆ ಅವರ ವೃತ್ತಿ ಜೀವನ ಬದಲಾಯಿಸಿತು. ಬಟ್ಟೆ ಬ್ಯಾನರ್ ಬರೆಯುವ ಕಾಯಕವನ್ನು ಮುಂದುವರಿಸಿದ ಬಾಬಣ್ಣ ತೊಕ್ಕೊಟ್ಟುವಿನಲ್ಲಿ ಗೋಡೆಯಲ್ಲಿ ಬಟ್ಟೆಗಳನ್ನು ನೇತುಹಾಕುತ್ತಾ 2ಮೀ ಬ್ಯಾನ್ರಿಗೆ 30 ರೂ. ನಲ್ಲಿ ಗ್ರಾಹಕರಿಗೆ ನೀಡಲು ಆರಂಭಿಸಿದ್ದರು. ಸ್ಥಳದಲ್ಲಿ 60 ರೂ. ಇದ್ದರೂ ತನ್ನ ಸೇವಾ ಭಾಗವಾಗಿ ಕಲೆಯನ್ನು ಮಾರಾಟದ ಭಾಗವಾಗಿ ಇರಿಸಬಾ ರದು ಅನ್ನುವ ಮನಸ್ಸಿನಿಂದ ಕಡಿಮೆಯಲ್ಲಿ ಬ್ಯಾನರ್ ಬರೆಯುವುದು ಇತರೆರೆ ಕೆಂಗಣ್ಣಿಗೂ ಗುರಿಯಾಗಿದ್ದರು. 1982 ರಲ್ಲಿ ಉಳ್ಳಾಲಬೈಲ್ ನಲ್ಲಿ ಹೆಣ ಸುಡುವ ವಿಚಾರಕ್ಕೆ ಸಂಬಂಧಿಸಿ ಅಂದಿನ ಕಾಲದಲ್ಲಿ ರೂ.400 ಪಡೆಯಲೆಂದೇ ಇಬ್ಬರ ನಡುವೆ ನಡೆಯುತ್ತಿದ್ದ ಗಲಾಟೆಯಿಂದ ಸಾವನ್ನಪ್ಪಿದವರ ಮನೆಮಂದಿಗಿದ್ದ ಅಸಮಾಧಾನವನ್ನು ದೂರ ಮಾಡಿಸಿ, ಚೆಂಬುಗುಡ್ಡೆಯಲ್ಲಿ ಕಟ್ಟಿಗೆಯನ್ನು ಇಟ್ಟು ಉಚಿತವಾಗಿ ಸೇವೆಗೈದವರು ಬಾಬಣ್ಣ. ಇದರಿಂದಾಗಿ ಮೃತದೇಹ ಸುಡಲು ಅಸಾಧ್ಯವಾಗದ ಆರ್ಥಿಕ ವಾಗಿ ಹಿಂದುಳಿದ ಮನೆಯವರು ನಂತರ ಬಾಬಣ್ಣನನ್ನು ಹುಡುಕುತ್ತಲೇ ಅಂತಿಮ ಸಂಸ್ಕಾರ ನಡೆಸಲು ಆರಂಭಿಸಿದ್ದರು. ಕೊಣಾಜೆಯಿಂದ ಕೇರಳದ ಕುಂಬ್ಳೆವರೆಗೂ ದು:ಖಿತರ ಮನೆಯಲ್ಲಿ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗುತ್ತಿದ್ದ ಅವರು ಚೆಂಬುಗುಡ್ಡೆ ಹಿಂದೂ ರುದ್ರಭೂಮಿ ಅಭಿವೃದ್ಧಿ ಹೊಂದಿದ ನಂತರ ಕಟ್ಟಿಗೆಯನ್ನು ಇಡುವ ಕಾಯಕ ಬಿಟ್ಟು, ಅಂತಿಮ ಸಂಸ್ಕಾರವಿರುವ ಮನೆಗಳಲ್ಲಿ ಮೃತದೇಹವನ್ನು ಸ್ನಾನ ಮಾಡುವುದರಿಂದ ಹಿಡಿದು ಅಲಂಕಾರಗೊಳಿಸಿ, ಚಟ್ಟ ಏರಿಸು ವವರೆಗೆ ಸೇವೆ ನಡೆಸಲು ಆರಂಭಿಸಿದ್ದಾರೆ. ಹೀಗೆ ಎಲ್ಲಿ ಮರಣವಾದರೂ ಬಾಬಣ್ಣನನ್ನು ಕರೆಯುವವರು ಈಗಲೂ ಅನೇಕ ರಿದ್ದಾರೆ. ಅಂತಿಮ ಸಂಸ್ಕಾರದ ಸೇವೆ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಬೀಡಿ ಸ್ಕಾಲರ್ ಶಿಪ್ ಉಳ್ಳಾಲ ಭಾಗದಲ್ಲಿ ಪರಿಚ ಯಿಸಿದ್ದೇ ಬಾಬಣ್ಣ ನೇತೃತ್ವದ ತಂಡ. ದೇಶದಾದ್ಯಂತ 1977ರಲ್ಲಿ ವಿದ್ಯಾರ್ಥಿಗಳಿಗೆ ಬೀಡಿ ಸ್ಕಾಲರ್ ಶಿಪ್ ಜಾರಿಯಾ ದರೂ, ಶಿಕ್ಷಣದ ಕೊರತೆಯಿಂದ ಕರಾವಳಿ ಭಾಗದಲ್ಲಿ ಸ್ಕಾಲರ್ ಶಿಪ್ ಪಡೆಯಲಾಗುತ್ತಿರಲಿಲ್ಲ. 1986 ರಲ್ಲಿ ಬಾಬಣ್ಣ ಅವರು ಸ್ಕಾಲರ್ ಶಿಪ್ ಕುರಿತು ತಿಳಿದು ಕರಾವಳಿ ಭಾಗಗಳಲ್ಲಿ ಇರುವ ಬೀಡಿ ಕಾರ್ಮಿಕರ ಮಕ್ಕಳ ಅರ್ಜಿಯನ್ನು ಭರ್ತಿಗೊಳಿಸಿ ಸರಕಾರಕ್ಕೆ ತಲುಪಿಸುವ ವ್ಯವಸ್ಥೆಯನ್ನು ಆರಂಭಿಸಿದರು. ಅದರಲ್ಲಿಯೂ ಒಂದು ವರ್ಷದಲ್ಲಿ 6,500 ವಿದ್ಯಾರ್ಥಿಗಳಿಗೆ ಬೀಡಿ ಸ್ಕಾಲರ್ ಶಿಪ್ ದೊರಕಿಸಿಕೊಟ್ಟವರು. ಇದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕುವಂತೆ ಮಾಡಿದ ಶ್ರೇಷ್ಟ ಮನುಷ್ಯ. 2016ರಿಂದ ಸ್ಕಾಲರ್ ಶಿಪ್ ಅನ್ನು ಡಿಜಿಟಲೀಕರಣದಡಿ ತರಲಾಯಿತು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಿಗುವ ಹಲ ವಾರು ಸ್ಕಾಲರ್ ಶಿಪ್ ಗಳು ನಿಂತೇ ಹೋಯಿತು. ಇದು ಬಡ ವಿದ್ಯಾರ್ಥಿಗಳ ಶಿಕ್ಷಣದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ ಅನ್ನುವುದು ಅವರ ಆರೋಪವಾಗಿದೆ. ಏನೂ ಇಲ್ಲದವರಿಗೂ ಮರಣ ಬರುತ್ತದೆ ಅನ್ನುವಂತೆ ಮನೆಯಲ್ಲಿ ಕಾರ್ಯಕ್ಕೆ ಸಹೋದರಿ, ಪತ್ನಿ ಎಲ್ಲರೂ ಸ್ಪೂರ್ತಿ ತುಂಬಿಸಿದ್ದಾರೆ. ಸಾಹಿತ್ಯ ಲೋಕದಲ್ಲಿಯೂ ಅಭಿರುಚಿ ಹೊಂದಿರುವವರು ಮುಂಗಾರು ಸಹಿತ ಮಂಗಳೂರಿನ ಇತರೆ ಪತ್ರಿಕೆಗಳಿಗೂ ಸಮಸ್ಯೆಗಳನ್ನು ಬರೆದು ಸಾರ್ಥಕತೆ ಕಂಡವರು. ಯು.ಬಿ ಲೋಕಯ್ಯ ಜೀವನಚರಿತ್ರೆ , ತನ್ನ ತರವಾಡು ವಿಚಾರಗಳಲ್ಲಿ ಎರಡು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಸಿಐಟಿಯು ರಾಜ್ಯ ಸಮಿತಿ ಸದಸ್ಯರು, ಜಿಲ್ಲಾ ಸಮಿತಿ ಸದಸ್ಯರು, ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ಜಾಯಿಂಟ್ ಸೆಕ್ರಟೆರಿಯಾಗಿ ಪಕ್ಷದಲ್ಲಿಯೂ ನಿರಂತರವಾಗಿ ದುಡಿದು ಬಡ ಕಾರ್ಮಿಕರಿಗೆ ಒಡನಾಡಿಯಾಗಿದ್ದರು. ಮರಣದ ಮನೆಗಳಲ್ಲಿ ಪತಿ ಮರಣವನ್ನಪ್ಪಿದ ಮಹಿಳೆಯರ ಮೇಲೆ ಆಗುತ್ತಿದ್ದ ಮೌಢ್ಯಗಳನ್ನು ಕ್ರಾಂತಿಕಾರಿಯಾಗಿ ನಿಲ್ಲಿಸಿ, ಅಂತಿಮ ಸಂಸ್ಕಾರ ದಲ್ಲಿಯೂ ಸರಳ ವಿಚಾರಗಳನ್ನು ಎತ್ತಿಹಿಡಿದು ಸೇವೆ ಸಲ್ಲಿಸುತ್ತಾ ಬಂದಿರುವರು.

ಅಭಿನಂದನೆ ಸಲ್ಲಿಸಿದ ಅಸೈಗೋಳಿ ಅಭಯಾಶ್ರಯದ ಸ್ಥಾಪಕಾಧ್ಯಕ್ಷ ಶ್ರೀನಾಥ್ ಹೆಗ್ಡೆ ಮಾತನಾಡಿ, ಬಾಬು ಪಿಲಾರ್ ಅವರು ತಮ್ಮ ಜೀವಿತಾವಧಿಯಲ್ಲಿ ದೊರೆತಂದಹ ಯೋಗವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ತಾನು ಬಂಟ ಸಮುದಾಯದವರು ಸಾವನ್ನಪ್ಪುವ ಸಂದರ್ಭ ಕ್ರಿಯೆಗಳನ್ನು ಸೂಚಿಸಲು ತೆರಳುತ್ತಿದ್ದವನು. ಆದರೂ ಬಾಬಣ್ಣನಷ್ಟು ಅಂತಿಮ ಸಂಸ್ಕಾರಗಳಲ್ಲಿ ಭಾಗಿಯಾದವನಲ್ಲ. ವಿವಿಧ ಭಾಗಗಳಲ್ಲಿ ಅವರವರ ಜಾತಿಗೆ ಅನುಗುಣವಾಗಿ ಅಂತಿಮ ಸಂಸ್ಕಾರಗಳು ನಡೆಯುತ್ತದೆ. ಪಾರ್ಸಿ ಸಮಾಜದಲ್ಲಿ ಹಕ್ಕಿಗಳಿಗೆ ಹೆಣವನ್ನಿಡುವ ಸಂಸ್ಕಾರವಿದೆ. ಎಂತಹ ಕಾರ್ಯವೇ ಇರಲಿ ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡುವುದೇ ಜೀವನ. ಕಾಲ ಬದಲಾದಂತೆ ವಿಧಿವಿಧಾನಗಳನ್ನು ಬದಲಿಸು ವುದು ಅನಿವರ‍್ಯವಾಗಿದೆ. ಕೋವಿಡ್ ಸಂದರ್ಭ ಮೃತದೇಹವನ್ನು ಮುಟ್ಟದೆ ಅಂತಿಮ ಸಂಸ್ಕಾರಗಳು ನಡೆಯುತ್ತಿತ್ತು. ಆದರೆ ತನ್ನ ಆಶ್ರಮಕ್ಕೆ ಸಹಕಾರಿಯಾಗಿದ್ದ ವೈದ್ಯರೊಬ್ಬರು ಕೋವಿಡ್ ಸಂದರ್ಭ ಮೃತಪಟ್ಟ ಹಿನ್ನೆಲೆಯಲ್ಲಿ ತಾನೇ ಮೃತದೇಹ ವನ್ನು ಸ್ನಾನ ಮಾಡಿಸಿದ್ದೆ. ನಂತರ 15 ದಿನಗಳ ಬಳಿಕ ತನಗೂ ಕೋವಿಡ್ ಆವರಿಸಿತ್ತು. ಇದರಿಂದ ಆರೋಗ್ಯ ಕ್ಷೀಣಿಸಿದೆ. ಹೆತ್ತವರಿಬ್ಬರೂ 100ರ ಮೇಲ್ಪಟ್ಟ ವಯಸ್ಸಿನಲ್ಲಿ ಮೃತಪಟ್ಟವರು. ಅವರಿಂದ ದೊರೆತ ಸ್ಫೂರ್ತಿಯಿಂದ ಮುಂಬೈನಲ್ಲಿ ಇನ್ಶುರೆನ್ಸ್ ಕಂಪೆನಿಯ ಪ್ರಬಂಧಕನ ಉದ್ಯೋಗವನ್ನು ಬಿಟ್ಟು ಸೇವಾ ಕಾರ್ಯದಲ್ಲಿ ಭಾಗಿಯಾಗಿರುವೆನು. ಅಂತಿಮವಾಗಿ ಬೇಕಾಗಿರುವುದು ಸೇವಾ ಸಂತೃಪ್ತಿ ಅನ್ನುವ ಉದ್ದೇಶದಿಂದ ಕರ‍್ಯಾಚರಿಸುತ್ತಿರುವೆನು. ಆಶ್ರಮದಲ್ಲಿ ಸ್ಥಾಪಿಸಿದ ಧ್ಯಾನ ಮಂದಿರದ ಸದುಪಯೋಗವನ್ನು ನಿಬಂಧನೆಗಳೊಂದಿಗೆ ಬಳಸಬಹುದು ಅಲ್ಲದೆ 140 ಆಶ್ರವiವಾಸಿಗಳ ಜೊತೆಗೆ ಒಂದು ದಿನವನ್ನಾದರೂ ವಿಶೇಷ ದಿನಗಳಲ್ಲಿ ಕಳೆದರೆ ಅವರ ಮನಸ್ಸು ಉಲ್ಲಾಸದಾಯಕವಾಗುವುದರೊಂದಿಗೆ ತಮ್ಮ ಜೀವನವೂ ಸಂತೃಪ್ತಿಯಿಂದ ಕೂಡಬಹುದು ಅನ್ನುವುದು ಅನುಭವದಿಂದ ಅರಿತಿರುವೆನು ಎಂದರು.

ಕಾರ್ಯಕ್ರಮದಲ್ಲಿ ಉಳ್ಳಾಲ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್ ಕೊಣಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರನೇ ತಿಂಗಳ ಅತಿಥಿ ಕಾರ್ಯಕ್ರಮ ವಿಭಿನ್ನವಾಗಿ ಮೂಡಿಬಂದಿದೆ. ವರ್ಷಗಳಿಂದ ನಿಸ್ವಾರ್ಥವಾಗಿ ಸೇವೆ ನಡೆಸುತ್ತಿರುವ ಬಾಬು ಪಿಲಾರ್ ಅವರು ಜಿಲ್ಲಾ, ರಾಜ್ಯ, ರಾಷ್ಟ್ರಪ್ರಶಸ್ತಿಗೆ ಅರ್ಹರು. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ, ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗುವ ಮನೋಭಾವ ಹಾಗೂ ಸಾಹಿತ್ಯಾತ್ಮಕ ಜಗತ್ತಿನಲ್ಲಿ ತೊಡಗಿಸಿ ಕೊಂಡಿರುವ ಕಾರ್ಯ ಶ್ಲಾಘನೀಯ. ಜೊತೆಗೆ ಶ್ರೀನಾಥ್ ಹೆಗ್ಡೆಯವರು ಸಮಾಜದಲ್ಲಿ ನಿರಾಶ್ರಿತರ ಸೇವೆಯನ್ನು ದಶಕ ಗಳಿಂದಾ ನಡೆಸುತ್ತಾ , ಅವರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದುಕೊಂಡು ಕೊಣಾಜೆ ಪರಿಸರದಲ್ಲೇ ಉತ್ತಮವಾದ ವಾತಾವರಣ ಸ್ಥಾಪಿಸಿದವರು ಎಂದರು.

ಈ ಸಂದರ್ಭ ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಬಶೀರ್ ಕಲ್ಕಟ್ಟ, ಉಪಾಧ್ಯಕ್ಷ ಆರೀಫ್ ಯು.ಆರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಆಸೀಫ್ ಬಬ್ಬುಕಟ್ಟೆ, ಅಶ್ವಿನ್ ಕುತ್ತಾರ್, ಪತ್ರಕರ್ತರುಗಳಾದ ರಜನಿಕಾಂತ್ ಬಬ್ಬುಕಟ್ಟೆ, ಗಂಗಾಧರ್ ಕೊಣಾಜೆ ಉಪಸ್ಥಿತರಿದ್ದರು.

ಉಪಾಧ್ಯಕ್ಷ ದಿನೇಶ್ ನಾಯಕ್ ತೊಕ್ಕೊಟ್ಟು ಸ್ವಾಗತಿಸಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮೋಹನ್ ಕುತ್ತಾರ್ ಅತಿಥಿ ವಿವರ ನೀಡಿದರು. ಪ್ರಧಾನ ಕರ‍್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ವಜ್ರ ಗುಜರನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News