ಉಳ್ಳಾಲದ ಬಟಪಾಡಿ-ಸಸಿಹಿತ್ಲು ಬೀಚ್ ನಕ್ಷೆ ತಯಾರಿಗೆ ಡಾ. ರಾಜೇಂದ್ರ ನಿರ್ದೇಶನ

Update: 2024-10-23 13:11 GMT

ಮಂಗಳೂರು: ಪ್ರವಾಸೋದ್ಯಮ ಅಭಿವೃದ್ಧಿಯ ಪ್ರಯತ್ನದ ಭಾಗವಾಗಿ ಉಳ್ಳಾಲದ ಬಟಪಾಡಿ ಬೀಚ್‌ನಿಂದ ಸಸಿಹಿತ್ಲು ಬೀಚ್‌ವರೆಗಿನ ಕರಾವಳಿ ಪ್ರದೇಶದ ನಕ್ಷೆ ತಯಾರಿಸುವಂತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ವ್ಯವಸ್ಥಾಪಕ ನಿರ್ದೇಶಕ ಡಾ. ರಾಜೇಂದ್ರ ಕೆ.ವಿ.ಯವರು ದ.ಕ. ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಅವರು ಬುಧವಾರ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ (ಕೆಟಿಎಸ್) ವತಿಯಿಂದ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾದ ‘ಕನೆಕ್ಟ್ - 2024’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉಳ್ಳಾಲದ ಬಟ್ಟಂಪಾಡಿಯಿಂದ ಸಸಿಹಿತ್ಲು ವರೆಗಿನ ಬೀಚನ್ನು ಮ್ಯಾಪಿಂಗ್ ಮಾಡಿ, ವಿವಿಧ ವಲಯಗಳನ್ನಾಗಿಸಿ ಪೂರಕ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಯೋಜನೆ ರೂಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಕರಾವಳಿಯುದ್ದಕ್ಕೂ ಸುಸ್ಥಿರ ಅಭಿವೃದ್ಧಿಯನ್ನು ಖಾತ್ರಿ ಪಡಿಸುವ ಉದ್ದೇಶದಿಂದ ಭೂಭಾಗಗಳನ್ನು ಗುರುತಿಸಿ ಅಲ್ಲಿ ಅನುಮತಿ ಹೊಂದಿದ ಹಾಗೂ ಅನು ಮತಿ ಹೊಂದಿರದ ಚಟುವಟಿಕೆಗಳನ್ನು ಗುರುತಿಸಲಾಗುವುದು. ಈ ಪ್ರಕ್ರಿಯೆಗಳಿಗೆ ಅಗತ್ಯವಿರುವ ಅನುಮತಿಯನ್ನು ರಾಜ್ಯ ಮಟ್ಟದಿಂದ ಒದಗಿಸಲಾಗುವುದು ಎಂದು ಅವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಈಗಾಗಲೇ ಕರಾವಳಿ ಕರ್ನಾಟಕ ಪ್ರವಾಸೋ ದ್ಯಮ ಅಭಿವೃದ್ಧಿ ಪರಿಷತ್ ರಚಿಸಲಾಗಿದ್ದು, ಕೆಟಿಎಸ್ ಸಹಯೋಗದಲ್ಲಿ ಇದರ ಕಾರ್ಯಚಟುವಟಿಕೆಗಳನ್ನು ಮುಂದುವರಿ ಸಲು ಉದ್ದೇಶಿಸಲಾಗಿದೆ ಎಂದರು.

ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಮಾತನಾಡಿ, ಕೇಂದ್ರ ಸರಕಾರದ ಯೋಜನೆಗೆ ಉಡುಪಿ ಆಯ್ಕೆಯಾಗಿದ್ದು, 10 ಕೋ.ರೂ. ಮೊತ್ತದ ಯೋಜನೆ ಕೈಗೊಳ್ಳಲು ಇದರಿಂದ ಅವಕಾಶವಾಗಲಿದೆ ಎಂದರು.

ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಕಾರ್ಯಕಾರಿ ಸದಸ್ಯ ಅಯ್ಯಪ್ಪ ಸೋಮಯ್ಯ ಅವರು ಸೊಸೈಟಿಯ ಕಾರ್ಯ ಚಟುವಟಿಕೆಗಳ ಕುರಿತು ವಿವರಿಸಿದರು.

ಜಿಲ್ಲಾ ಪಂಚಾಯತ್ ಸಿಇಒ ಡಾ.ಆನಂದ್ ಕೆ., ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಾಣಿಕ್ಯ, ದ.ಕ. ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉಡುಪಿ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ಮನೋಹರ್ ಶೆಟ್ಟಿ, ದಕ್ಷಿಣ ಕನ್ನಡ ಟೂರಿಸಂನ ಗೌರವ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕಾರಿ ಸದಸ್ಯ ಪಿ.ಸಿ.ರಾವ್ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರವಾಸೋ ದ್ಯಮದ ವಿವಿಧ ಪಾಲುದಾರರ ಜತೆ ಸಂವಾದ ನಡೆಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News