ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರಕಾರದಿಂದ ರೂ. 79 ಕೋಟಿ ಅನುದಾನ: ಶಾಸಕ ಅಶೋಕ್ ರೈ

Update: 2024-10-23 12:15 GMT

ಪುತ್ತೂರು: 2024-25ನೇ ಸಾಲಿನಲ್ಲಿ ಕಳೆದ ಎಪ್ರಿಲ್‌ನಿಂದಿಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರಕಾರದಿಂದ ರೂ. 79 ಕೋಟಿ ಅನುದಾನ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 65 ಕೋಟಿ ರೂ. ಅನುದಾನ ಬರಲಿದೆ. ಈ ವರ್ಷದ ಆರಂಭದಿಂದ ಸಂಸದೀಯ ಚುನಾವಣೆ, ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆಗಳ ಕಾರಣದಿಂದ ಅನೇಕ ತಿಂಗಳುಗಳ ಕಾಲ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಲು ಸಾಧ್ಯವಾಗಲಿಲ್ಲ. ಮಂದಿನ ದಿನಗಳಲ್ಲಿ ಒಂದೊಂದೇ ಕಾಮಗಾರಿಗಳ ಶಂಕುಸ್ಥಾಪನೆ ನಡೆಯಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರಿನಲ್ಲಿ ನೂತನ ಸಿಂಥೆಟಿಕ್ ಟ್ರಾಕ್‌ ನ ಸುಸಜ್ಜಿತ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈಗಿರುವ ಕೊಂಬೆಟ್ಟು ತಾಲೂಕು ಕ್ರೀಡಾಂಗಣವನ್ನು ವಿಸ್ತರಿಸಲು ಅವಕಾಶವಿಲ್ಲ. ಈ ಹಿನ್ನಲೆಯಲ್ಲಿ ನೂತನ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕಾಗಿ ನಗರದ ಹೊರ ವಲಯದ ಮುಂಡೂರು ಪ್ರದೇಶದಲ್ಲಿ 20 ಎಕ್ರೆ ಜಾಗವನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ತಾಲೂಕು ಕ್ರೀಡಾಂಗಣದ ಹೆಸರಿಗೆ ನೋಂದಾಯಿಸುವ ಕಾರ್ಯ ಮಾಡಲಾಗುವುದು ಎಂದರು.

ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಡಿಕೆಎಂಯು)ಕ್ಕೆ ಪುತ್ತೂರು ಹೊರವಲಯದಲ್ಲಿ 15 ಎಕರೆ ಜಮೀನು ಮಂಜೂರು ಮಾಡಿಸಿ ಕೊಡಲಾಗಿದೆ. ಅಲ್ಲಿ ನೂತನ ಕೆಎಂಎಫ್ ಡೇರಿ ನಿರ್ಮಾಣವಾಗಲಿದೆ. ಹಾಲು ಒಕ್ಕೂಟದ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ನಿರ್ಮಾಣ ಕಾರ್ಯ ನಡೆಯಲಿದೆ. ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಉದ್ಯೊಗ ಸೃಷ್ಟಿಸಲು ಪುತ್ತೂರಿನಲ್ಲಿ ಉದ್ಯಮ ಸ್ಥಾಪನೆಗೆ ಪ್ರೋತ್ಸಾಹ, ಬಹುಗ್ರಾಮ ಕುಡಿಯುವ ನೀರು ಯೋಜನೆಯ ಅಡಿಯಲ್ಲಿ 2 ಕಿಂಡಿ ಅಣೆಕಟ್ಟು ನಿರ್ಮಾಣ ಮತ್ತು ಮಾಣಿಯಿಂದ ಪುತ್ತೂರುವರೆಗೆ ಚತುಷ್ಪಥ ಹೆದ್ದಾರಿ ನಿರ್ಮಾಣ- ಈ 5 ಮೆಗಾ ಯೋಜನೆಗಳು ನನ್ನ ದುರಗಾಮಿ ಯೋಜನೆಯಲ್ಲಿ ಸೇರಿದೆ ಎಂದು ಹೇಳಿದರು.

ಪುತ್ತೂರು- ಉಪ್ಪಿನಂಗಡಿ ನಡುವಿನ 11 ಕಿ.ಮೀ. ರಸ್ತೆ ಪೂರ್ತಿಯಾಗಿ ಚತುಷ್ಪಥ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ 20 ಕೋಟಿ ರೂ. ಇದಕ್ಕಾಗಿ ಮಂಜೂರಾಗಿದೆ. ಬೊಳುವಾರಿನಿಂದ ಹಾರಾಡಿ, ಸೇಡಿಯಾಪುವಿನಿಂದ ಕೋಡಿಂಬಾಡಿ ಮತ್ತು ನೆಕ್ಕಿಲಾಡಿಯಿಂದ ಉಪ್ಪಿನಂಗಡಿ ಹೆದ್ದಾರಿ ಸಂಪರ್ಕದವರೆಗೆ ಚತುಷ್ಪಥ ನಡೆಯಲಿದೆ ಎಂದು ಶಾಸಕರು ನುಡಿದರು.

ಪುತ್ತೂರು ನಗರದ ಬೀರಮಲೆ ಬೆಟ್ಟವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಈಗಾಗಲೇ ಅರಣದ್ಯ ಇಲಾಖೆಯಿಂದ ಅಲ್ಲಿ ಸಸ್ಯವನ ನಿರ್ಮಿಸಲಾಗಿದೆ. ಇದಲ್ಲದೆ 2 ಕೋಟಿ ರೂ. ಮಂಜೂರು ಮಾಡಿದ್ದು, ಇನ್ನಷ್ಟು ಕಾಮಗಾರಿಗಳು ನಡೆಯಲಿವೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News