ಜೆಬಿಎಫ್ ಕಂಪೆನಿಗೆ ಭೂಮಿ ಹಸ್ತಾಂತರ| ಗೈಲ್ ಕಂಪೆನಿಯಲ್ಲಿ ಉದ್ಯೋಗ ಪತ್ರ ವಿತರಿಸಿದ ಸಂಸದ ಬ್ರಿಜೇಶ್ ಚೌಟ

Update: 2024-10-25 16:35 GMT

ಮಂಗಳೂರು, ಅ.25: ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿ ಜೆಬಿಎಫ್ ಕಂಪೆನಿ ಸ್ಥಾಪನೆಗೆ ಜಮೀನು ಬಿಟ್ಟುಕೊಟ್ಟ ನಿರ್ವಸತಿಗರಿಗೆ ಉದ್ಯೋಗ ದೊರಕುವ ಕಠಿಣ ಸಮಸ್ಯೆಯು ಇತ್ಯರ್ಥವಾಗಿದೆ ಎಂದು ದ.ಕ. ಸಂಸದ  ಬ್ರಿಜೇಶ್ ಚೌಟ ಹೇಳಿದ್ದಾರೆ.

ಮಂಗಳೂರಿನ ವಿಶೇಷ ಆರ್ಥಿಕ ವಲಯ (ಎಂಎಸ್‌ಇಝೆಡ್)ದಲ್ಲಿ ಜೆಬಿಎಫ್ ಕಂಪೆನಿ ಸ್ಥಾಪನೆಗೆ ಜಮೀನು ಬಿಟ್ಟುಕೊಟ್ಟಿದ್ದವರ ಪೈಕಿ 69 ಮಂದಿಗೆ ಜಿಎಂಪಿಎಲ್ (ಗೈಲ್ ಇಂಡಿಯಾ) ಕಂಪೆನಿಯಲ್ಲಿ ಉದ್ಯೋಗ ಕಲ್ಪಿಸುವ ನೇಮ ಕಾತಿ ಪತ್ರಗಳನ್ನು ಬಜಪೆಯ ಎಂಎಸ್‌ಇಝೆಡ್‌ನ ಜಿಎಂಪಿಎಲ್ ಕಂಪೆನಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಉದ್ಯೋಗ ಪತ್ರ ವಿತರಿಸಿ ಅವರು ಮಾತನಾಡಿದರು.

ದ.ಕ. ಜಿಲ್ಲೆಯ ಉದ್ಯೋಗಿಗಳು ಬಹಳ ಶಿಸ್ತಿನ, ಉತ್ತಮ ಗುಣ ಸ್ವಭಾವದವರು, ವಿದ್ಯಾವಂತರು, ಕೌಶಲ್ಯವಂತರು ಹಾಗೂ ಹೆಚ್ಚು ಉತ್ಪಾದನಾ ಶೀಲತೆ ಪ್ರವೃತಿ ಬೆಳೆಸಿಕೊಂಡಿರುವವರು ಎಂಬ ಹೊಗಳಿಕೆಯ ಮಾತು ಇದೆ. ಹೀಗಾಗಿ ದೇಶದ ಬೇರೆ ಬೇರೆ ಕಡೆಯಿಂದ ಇಲ್ಲಿಗೆ ಬರುವ ಉದ್ಯೋಗಿಗಳಿಗೆ ನಮ್ಮ ನಡವಳಿಕೆಗಳು ಮಾದರಿಯಾಗಬೇಕು. ಭವಿಷ್ಯದಲ್ಲಿ ಮಂಗಳೂರಿಗೆ ಇನ್ನಷ್ಟು ಸಂಸ್ಥೆಗಳು ಬರಬೇಕು. ಇಲ್ಲಿನ ಯುವ ಜನತೆಗೆ ಹೆಚ್ಚಿನ ಉದ್ಯೊಗಾವಕಾಶಗಳು ಸೃಷ್ಟಿಯಾಗ ಬೇಕೆಂಬ ಆಶಯ ನನ್ನದು ಎಂದು ಔಟ ಹೇಳಿದರು.

*ಗೈಲ್ ಇಂಡಿಯಾವು ಜೆಬಿಎಫ್ ಪೆಟ್ರೋಕೆಮಿಕಲ್ಸ್‌ನ ಪಿಟಿಎ ಸ್ಥಾವರವನ್ನು ಸ್ವಾಧೀನಪಡಿಸಿಕೊಂಡು ಗೈಲ್ ಮಂಗಳೂರು ಪೆಟ್ರೋ ಕೆಮಿಕಲ್ಸ್ ಸ್ಥಾಪಿಸಿತ್ತು. ಆಗ ಜಿಎಂಪಿಎಲ್ ಕಂಪೆನಿಯು ಜೆಬಿಎಫ್‌ನ ಪ್ರಾಜೆಕ್ಟ್ ಡಿಸ್ಪ್ಲೇಸ್ಡ್ ಫ್ಯಾಮಿಲೀಸ್‌ಗೆ ಗುತ್ತಿಗೆ ಆಧಾರಿತ ಉದ್ಯೋಗ ಮಾತ್ರ ನೀಡಲು ಪರಿಗಣಿಸಿತ್ತು. ಇದರಿಂದ ಜೆಬಿಎಫ್ ಉದ್ಯೋಗಸ್ಥರು ಅತಂತ್ರ ಸ್ಥಿತಿಯಲ್ಲಿದ್ದರು. ಹೀಗಿರುವಾಗ ಪ್ರಥಮ ಬಾರಿಗೆ ಸಂಸದರಾಗಿ ಆಯ್ಕೆಯಾದ ತಕ್ಷಣ ತಾನು ದ.ಕ.ಜಿಲ್ಲೆಯ ಪಿಡಿಎಫ್ ಕುಟುಂಬಸ್ಥರ ಬಹು ದಿನಗಳಿಂದ ಈಡೇರದೆ ಬಾಕಿಯಾಗಿದ್ದ ಈ ಪ್ರಮುಖ ಸಮಸ್ಯೆಯನ್ನು ಕೇಂದ್ರ ಸರಕಾರದ ಗಮನಕ್ಕೆ ತಂದಿದ್ದೆ. ಖುದ್ದು ಪೆಟ್ರೋಲಿಯಂ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರನ್ನು ಭೇಟಿಯಾಗಿ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದೆ. ಈ ಮೂಲಕ ಜೆಬಿಎಫ್ ಕಂಪೆನಿ ಸಂತ್ರಸ್ತರಿಗೆ ಜಿಎಂಪಿಎಲ್ ಕಂಪೆನಿಯಲ್ಲಿ ಉದ್ಯೋಗ ಪಡೆಯುವಲ್ಲಿ ಯಶಸ್ವಿ ಯಾಗಿದ್ದಾರೆ ಎಂದು ಚೌಟ ತಿಳಿಸಿದ್ದಾರೆ.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News