ನಗರ ಪಾಲಿಕೆ ವಸತಿ ಯೋಜನೆ: ವಂತಿಗೆ ಪಾವತಿಸಲು ಸೂಚನೆ

Update: 2024-10-25 13:25 GMT

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಇಡ್ಯಾ ಗ್ರಾಮದ ಸರ್ವೆ ನಂ.16ಪಿ1ರಲ್ಲಿ ಜಿ+3 ಮಾದರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಸತಿ ಸಂಕೀರ್ಣ ಯೋಜನೆಗೆ ಆಯ್ಕೆ ಗೊಂಡಿರುವ ಫಲಾನುಭವಿಗಳಲ್ಲಿ ವಂತಿಗೆ ಪಾವತಿಸದಿರುವವರು, ವಸತಿ ಪಡೆಯಲು ಆಸಕ್ತಿ ಇಲ್ಲದ ಫಲಾನುಭವಿಗಳು ಮತ್ತು ದಾಖಲೆಗಳನ್ನು ಸಲ್ಲಿಸದ ಫಲಾನುಭವಿಗಳನ್ನು ರದ್ದುಪಡಿಸಿ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡುವ ಬಗ್ಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ನಗರಾಶ್ರಯ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಹಾಗಾಗಿ ವಂತಿಗೆ ಪಾವತಿಸದ ಹಾಗೂ ದಾಖಲೆಗಳನ್ನು ನೀಡದ ಫಲಾನುಭವಿಗಳು ನವೆಂಬರ್ 30ರೊಳಗೆ ಮಂಗಳೂರು ಮಹಾನಗರ ಪಾಲಿಕೆ ಲಾಲ್‌ಭಾಗ್ ಕಚೇರಿಯ ನಗರ ಬಡತನ ನಿರ್ಮೂಲನ ಕೋಶ, ವಸತಿ ವಿಭಾಗದಲ್ಲಿ ಕಚೇರಿಯ ಅವಧಿಯ ವೇಳೆ ಮೂಲ ಅರ್ಜಿ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ (60,000ಕ್ಕೆ ಮೇಲ್ಪಟ್ಟು) ಪಡಿತರಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ (ಕುಟುಂಬದ ಎಲ್ಲಾ ಸದಸ್ಯರ), ಬಾಡಿಗೆ ಕರಾರು ಪತ್ರ, ಪೋಟೋ,ಕೆನರಾ ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್, ವಂತಿಗೆ ವಾವತಿಸಿದ ಬ್ಯಾಂಕ್‌ಚಲನ್ ಪ್ರತಿಯನ್ನು ನೀಡಬೇಕು.

ವಂತಿಗೆ ಪಾವತಿಸದಿದ್ದಲ್ಲಿ ಮತ್ತು ದಾಖಲೆಗಳನ್ನು ಕಚೇರಿಗೆ ನಿಗದಿತ ಸಮಯದಲ್ಲಿ ಸಲ್ಲಿಸದಿದ್ದಲ್ಲಿ ಈಗಾಗಲೇ ಆಯ್ಕೆಗೊಂಡಿ ರುವ ಫಲಾನುಭವಿಗಳಿಗೆ ಆಸಕ್ತಿ ಇಲ್ಲವೆಂದು ಪರಿಗಣಿಸಿ ಅವರ ಹೆಸರನ್ನು ಯೋಜನೆಯ ಆಯ್ಕೆ ಪಟ್ಟಿಯಿಂದ ರದ್ದುಪಡಿಸಿ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News