ಮಂಗಳೂರಿನಲ್ಲಿ ಇಟಲಿಯ ಮೀರ್ ಗ್ರೂಪ್ ಘಟಕ ಎಂಎಸ್ಇಝೆಡ್ನೊಂದಿಗೆ ಒಪ್ಪಂದ
ಮಂಗಳೂರು: ಬಂದರು ನಗರಿ ಮಂಗಳೂರಿನಲ್ಲಿರುವ ಮೂಲಸೌಕರ್ಯ ಇದೀಗ ವಿದೇಶಿಯರನ್ನು ಆಕರ್ಷಿಸಿದ್ದು, ಈಗಾಗಲೇ , ಸ್ವಿಝರ್ಲ್ಯಾಂಡ್, ದುಬೈನಲ್ಲಿ ತನ್ನ ಜಾಲವನ್ನು ವಿಸ್ತರಿಸಿಕೊಂಡಿರುವ ಇಟಲಿ ಮೂಲದ ಕಟ್ಟಡ ಮತ್ತು ವಿನ್ಯಾಸ ಸಾಮಗ್ರಿಗಳ ಉತ್ಪಾದನಾ ಕಂಪೆನಿ ಮೀರ್ ಇದೀಗ ಮಂಗಳೂರಿನಲ್ಲಿ ತನ್ನ ಘಟಕವನ್ನು ಸ್ಥಾಪನೆಗೆ ಚಿಂತನೆ ನಡೆಸಿದೆ.
ಮಂಗಳೂರಿಗೆ ಇಟಲಿಯ ಮೀರ್ ಗ್ರೂಪ್ ತನ್ನ ವ್ಯವಹಾರ ಜಾಲವನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ ಲಿಮಿಟೆಡ್ (ಎಂಎಸ್ಇಝೆಡ್)ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ನಗರದ ಓಶಿಯನ್ ಪರ್ಲ್ನಲ್ಲಿ ನಡೆದ ಸಮಾರಂಭದಲ್ಲಿ ಇಟಲಿಯ ಮೀರ್ ಗ್ರೂಪ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್ಚ್ ರಫೆಲ್ ಮರ್ರಾರೆ ಮತ್ತು ಮಂಗಳೂರು ವಿಶೇಷ ಆರ್ಥಿಕ ವಲಯ ಲಿಮಿಟೆಡ್ (ಎಂಎಸ್ಇಝೆಡ್) ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ಸೂರ್ಯನಾರಾಯಣ ಅವರು ಒಪ್ಪಂದಕ್ಕೆ ಸಹಿ ಮಾಡಿದರು.
ಈ ಸಂದರ್ಭ ಮಾತನಾಡಿದ ಎಂಎಸ್ಇಝೆಡ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂರ್ಯನಾರಾಯಣ ವಿ ಅವರು ಇಟಲಿಯ ಮೀರ್ ಸಮೂಹ ಸಂಸ್ಥೆಯು ತನ್ನ ಕಟ್ಟಡ ಸಾಮಗ್ರಿಗಳು ಮತ್ತು ಇತರ ವಿನ್ಯಾಸ ಸಾಮಗ್ರಿಗಳ ಉತ್ಪಾದ ನೆಯ ಘಟಕವನ್ನು ಮಂಗಳೂರಿನಲ್ಲಿ ಆರಂಭಿಸಲು ಆಸಕ್ತಿ ವಹಿಸಿದೆ. ಇಲ್ಲಿ ಲಭ್ಯವಿರುವ ಮೂಲಸೌಕರ್ಯ ಮತ್ತು ಬಂದರಿಗೆ ಸಂಪರ್ಕ ಸೌಲಭ್ಯ ಅವರನ್ನು ಆಕರ್ಷಿಸಿದ್ದು, ಘಟಕ ಸ್ಥಾಪನೆಯ ಉದ್ದೇಶಕ್ಕಾಗಿ 10 ಎಕ್ರೆ ಜಮೀನು ದೊರಕಿಸಿಕೊಡುವಂತೆ ಮನವಿ ಮಾಡಿದೆ ಎಂದು ಹೇಳಿದರು.
ಮೀರ್ ಗ್ರೂಪ್ ಸಿಇಒ ಆರ್ಚ್ ರಫೆಲ್ ಮರ್ರಾರೆ ಮಾತನಾಡಿ‘ ಮಂಗಳೂರಿನಲ್ಲಿ ನಮ್ಮ ವ್ಯವಹಾರವನ್ನು ವಿಸ್ತರಿಸಲು ಬಯಸುತ್ತೇವೆ. ಮುಂದೆ ಮಂಗಳೂರಿನಿಂದಲೇ ಯುಎಇ, ಆಫ್ರಿಕನ್ ದೇಶಗಳಿಗೆ ನಮ್ಮ ಸರಕುಗಳನ್ನು ರಫ್ತು ಮಾಡಲು ಅಗತ್ಯದ ಸೌಕರ್ಯ ಮಂಗಳೂರಿನಲ್ಲಿದೆ. ಈ ಕಾರಣದಿಂದಾಗಿ ನಾವು ನಮ್ಮ ಸಂಸ್ಥೆಯ ಘಟಕವನ್ನು ಇಲ್ಲಿ ಆರಂಭಿಸಲಿ ದ್ದೇವೆ. ಈ ಯೋಜನೆಯು 2026 ರ ವೇಳೆಗೆ ಕಾರ್ಯಗತವಾಗುವುದನ್ನು ನಿರೀಕ್ಷಿಸಲಾಗಿದೆ ಎಂದರು.
ಮೀರ್ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಮಂಗಳೂರು ಮೂಲದ ನಿತಿಕ್ ರತ್ನಾಕರ್ ಮಾತನಾಡಿ, ಇಟಲಿಯಲ್ಲಿ ಈಗಾಗಲೇ 120 ಕಟ್ಟಡಗಳನ್ನು ಶೇಕಡಾ 80 ರಷ್ಟು ಇಂಧನ ದಕ್ಷತೆಯ ಕಟ್ಟಡಗಳಾಗಿ ಪರಿವರ್ತಿಸಲಾಗಿದೆ. ಥರ್ಮಲ್ ಇನ್ಸುಲೇಟೆಡ್ ಬಾಗಿಲುಗಳು ಮತ್ತು ಕಿಟಕಿಗಳಿಗೆ ನಮ್ಮ ಸಂಸ್ಥೆ ಪೇಟೆಂಟ್ಗಳನ್ನು ಪಡೆದಿದೆ. ಮಂಗಳೂರಿನಲ್ಲಿ ನಮ್ಮ ಯೋಜನೆಯನ್ನು ಪರಿಚಯಿಸಲಿದ್ದೇವೆ ಎಂದರು.
ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಮಂಗಳೂರಿನ ಹಲವು ಮಂದಿ ಜಗತ್ತಿನ ನಾನಾ ದೇಶಗಳಲ್ಲಿ ಜಗತ್ತಿನ ವಿವಿಧ ಉದ್ಯಮಗಳಲ್ಲಿ ಉನ್ನತ ಹುದ್ದೆಯಲ್ಲಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಂತವರನ್ನು ‘ಬ್ಯಾಕ್ ಟು ಊರು’ ಎಂಬ ತಮ್ಮ ಕನಸಿನ ಯೋಜನೆಯೊಂದಿಗೆ ತಮ್ಮ ಊರಿಗೆ ವಾಪಸಾಗಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ಮೂಡಿಸುವ ಯೋಜನೆ ನನ್ನದು. ಈ ಪ್ರಯತ್ನದಲ್ಲಿ ಮೊದಲ ಯಶಸ್ಸು ಸಿಕ್ಕಿದೆ. ಇಟಲಿಯ ಮೀರ್ ಗ್ರೂಪ್ ಕಾರ್ಯ ನಿರ್ವಾಹಕ ನಿರ್ದೇಶಕ ಮಂಗಳೂರು ಮೂಲದ ನಿತಿಕ್ ರತ್ನಾಕರ್ ಮಂಗಳೂರಿನಲ್ಲಿ ತಮ್ಮ ಸಂಸ್ಥೆಯ ಘಟಕದ ಸ್ಥಾಪನೆಗೆ ಆಸಕ್ತಿ ವಹಿಸಿದ್ದಾರೆ. ಮೀರ್ ಗ್ರೂಪ್ ಈ ಉದ್ದೇಶಕ್ಕಾಗಿ ಹಂತಹಂತವಾಗಿ 1,500 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದೆ. ಈ ನಿಟ್ಟಿನಲ್ಲಿ ಚರ್ಚಿಸಲು ಶನಿವಾರ ಹೊಸದಿಲ್ಲಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಲಿದ್ದೇವೆ ಎಂದು ತಿಳಿಸಿದರು.
ತಮ್ಮ ‘ಬ್ಯಾಕ್ ಟು ಊರು’ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಸಹಕಾರ ನೀಡುವಂತೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ಮನವಿ ಮಾಡಿದರು.
ಮೀರ್ ಗ್ರೂಪ್ನ ನಿರ್ದೇಶಕ(ಕಾನೂನು) ಕ್ಲಾಡಿಯೊ ಮಾಂಟೆಲಿಯೋನ್, ಸುಸ್ಥಿರತೆ ವಿಭಾಗದ ಮುಖ್ಯಸ್ಥ ಸಾಯಿಚಂದು ಪರ್ವತ್ ರೆಡ್ಡಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.