‘ಸುಭಿಕ್ಷಾ’ ಕೃತಿ ಬಿಡುಗಡೆ
ಮಂಗಳೂರು: ಕಥೆ ಕಾದಂಬರಿಗಳೊಂದಿಗೆ ವೈದ್ಯಲೋಕವನ್ನು ತೆರೆದಿಡುವುದು ಕೂಡ ಸಾಹಿತ್ಯವಾಗಿದೆ. ‘ಸುಭಿಕ್ಷಾ’ ದಂತ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕೃತಿಯಾಗಿದ್ದು, ಓದುಗರಲ್ಲಿ ಹಲ್ಲುಗಳ ಆರೋಗ್ಯದ ಕಾಳಜಿ ಮೂಡಿಸುತ್ತದೆ ಎಂದು ಹಿರಿಯ ಸಂಶೋಧಕ ಹಾಗೂ ಸಾಹಿತಿ ಪ್ರೊ.ಎ.ವಿ. ನಾವಡ ಹೇಳಿದರು.
ಸೋಮವಾರ ನಗರದ ಪತ್ರಿಕಾಭವನದಲ್ಲಿ ಡಾ. ಮುರಲೀ ಮೋಹನ್ ಚೂಂತಾರು ಅವರ ದಂತ ಆರೋಗ್ಯ ಮಾರ್ಗದರ್ಶಿ ‘ಸುಭಿಕ್ಷಾ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕದ ಪರಿಚಯ ನೀಡಿದರು.
ಇಂದಿನ ದಿನಗಳಲ್ಲಿ ಹಲವು ಕಾರಣಗಳಿಂದಾಗಿ ಕೃತಿಗಳ ಮುದ್ರಣ ಕಡಿಮೆಯಾಗುತ್ತಿದೆ. ಆದರೆ, ಡಾ. ಚೂಂತಾರು ಅವರ ಕೃತಿಯೊಂದು 16 ಮುದ್ರಣಗಳನ್ನು ಕಂಡಿರುವುದು ಜನರಲ್ಲಿ ಆರೋಗ್ಯದ ಕುರಿತು ಇರುವ ಜಾಗೃತಿ ವಿವರಿಸುತ್ತದೆ. ಲೇಖನದ ಕೊನೆಯ ಮಾತುಗಳು ಇಡೀ ಸಾರಾಂಶ ಹಾಗೂ ಕಿವಿಮಾತು ಹೇಳುವಂತಿದೆ. ದಂತ ಚಿಕತ್ಸೆ ಪಡೆದವರಿಗೆ ಕೃತಿಯ ಮೂಲಕ ಆರೋಗ್ಯ ಸುಧಾರಿಸಲು ಸಾಧ್ಯವಿದೆ ಎಂದರು.
ಕೃತಿಯನ್ನು ಬಿಡುಗಡೆಗೊಳಿಸಿದ ಕರ್ನಾಟಕ ಬ್ಯಾಂಕ್‌ನ ನಿವೃತ್ತ ಎಂಡಿ ಹಾಗೂ ಸಿಇಒ ಎಂ.ಎಸ್. ಮಹಾಬಲೇಶ್ವರ ಅವರು ಮಾತನಾಡಿ, ಡಾ. ಮುರಲೀ ಮೋಹನ್ ಚೂಂತಾರು ವೃತ್ತಿಯಲ್ಲಿ ವೈದ್ಯರಾಗಿದ್ದು, ಪ್ರವೃತ್ತಿಯಲ್ಲಿ ಸಮಾಜ ಸೇವಕರಾಗಿದ್ದಾರೆ. ಸಮಾಜಕ್ಕೆ ಅಗತ್ಯವಾಗುವ ಕೃತಿ ಬರೆಯುವುದು ವಿಶೇಷವಾಗಿದ್ದು, ಪ್ರತೀಯೊಬ್ಬರಿಗೂ ಉಪಯೋಗವಾಗುವಂತೆ ಕೃತಿ ಇದಾಗಿದೆ ಎಂದರು.
ಹಿರಿಯ ದಂತ ವೈದ್ಯ ಡಾ. ಗಣಪತಿ ಭಟ್ ಕುಲಮರ್ವ, ವೈದ್ಯರಾದ ಡಾ.ಗೌತಮ್ ಕುಳಮರ್ವ, ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಅಧ್ಯಕ್ಷ ಡಾ. ಮಂಜುನಾಥ ರೇವನ್ಕರ್, ಕಾರ್ಯದರ್ಶಿ ಗಣೇಶ್ ಪ್ರಸಾದ್ ಬಿ. ಉಪಸ್ಥಿತರಿದ್ದರು.