ಆಗದ ಅಭಿವೃದ್ಧಿ ಕಾಮಗಾರಿ| ಉಳ್ಳಾಲ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಏಕಾಂಗಿ ಪ್ರತಿಭಟನೆ

Update: 2024-12-30 16:31 GMT

ಉಳ್ಳಾಲ: ನಗರ ಸಭೆ ವ್ಯಾಪ್ತಿಯ 18ನೇ ಗಂಡಿ ವಾರ್ಡ್ ನ ಯಾವುದೇ ಅಭಿವೃದ್ಧಿ ಕಾಮಗಾರಿ ಆಗಲಿಲ್ಲ.ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಿಲ್ಲ ಎಂದು ಆರೋಪಿಸಿ ನಗರ ಸಭೆ ಸದಸ್ಯ ದಿನಕರ್ ಉಳ್ಳಾಲ ಅವರು ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದ ಘಟನೆ ಉಳ್ಳಾಲ ನಗರ ಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.

ನಗರ ಸಭೆ ಅಧ್ಯಕ್ಷ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಂಜೆ ನಡೆದ ಸಾಮಾನ್ಯ ಸಭೆಯಲ್ಲಿ ಅನುದಾನ ಹಾಗೂ ಅಭಿವೃದ್ಧಿ ಕಾಮಗಾರಿ ಬಗ್ಗೆ ಪ್ರಸ್ತಾಪ ಗೊಂಡ ಸಂದರ್ಭದಲ್ಲಿ ಆಕ್ರೋಶ ಗೊಂಡ ಸದಸ್ಯ ದಿನಕರ್ ಉಳ್ಳಾಲ ಅಧ್ಯಕ್ಷರ ಟೇಬಲ್ ಮುಂದೆ ಜಮಾಯಿಸಿ ಕಪ್ಪು ಪಟ್ಟಿ ಧರಿಸಿ ' ಕ್ಷಮಿಸಿ ಗಾಂಧೀಜಿ, ನಾನು ಈಗಲೂ ಗುಲಾಮ' ಎಂದು ಬರೆದ ಫಲಕ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಇಂಜಿನಿಯರ್ ತುಳಸೀದಾಸ್ ಅವರು, ದಿನಕರ್ ಉಳ್ಳಾಲ ಅವರ 18 ನೇಗಂಡಿ ವಾರ್ಡ್ ನಲ್ಲಿ 2021- 22 ಸಾಲಿನಲ್ಲಿ 4.5 ಲಕ್ಷದ ಕಾಮಗಾರಿ ಮಾಡಲಾಗಿದೆ.15 ನೇ ಹಣಕಾಸಿನಲ್ಲಿ ಪೈಪ್ ಲೈನ್ ಗೆ 4 ಲಕ್ಷ, ಚರಂಡಿ ಕಾಮಗಾರಿಗೆ 2.5 ಲಕ್ಷ ಸಹಿತ ಒಟ್ಟು 17.5 ಲಕ್ಷ ರು. ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡಲಾಗಿದೆ ಎಂದರು.

ಇದರಿಂದ ಆಕ್ರೋಶ ಗೊಂಡ ಸದಸ್ಯ ದಿನಕರ್ ಉಳ್ಳಾಲ ಅವರು ಸುಳ್ಳು ಹೇಳಲು ಗಾಂಧೀಜಿ ಕಲಿಸಲಿಲ್ಲ.ಅಷ್ಟು ಮೊತ್ತದ ಕಾಮಗಾರಿ ಮಾಡಿದ ಹಾಗೂ ಮಂಜೂರು ಮಾಡಲಾದ ಹಣದ ಬಗ್ಗೆ ದಾಖಲೆ ತೋರಿಸಿ ಎಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಶಶಿ ಕಲ ಅವರು ಇಂಜಿನಿಯರ್ ಜೊತೆ ಬಂದು ನಿಮ್ಮ ವಾರ್ಡ್ ನ ಸಮಸ್ಯೆ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದಿನಕರ್ ಉಳ್ಳಾಲ ಅವರು ಪ್ರತಿಭಟನೆ ಮುಂದುವರಿಸಿ ಅಧ್ಯಕ್ಷ ಹಾಗೂ ಪೌರಾಯುಕ್ತ ಮತಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.

ದಾರಿದೀಪ, ರಸ್ತೆ ಅಭಿವೃದ್ಧಿ ಗೆ ಹಣ ಬಿಡುಗಡೆ ಮಾಡುವಂತೆ ವಿರೋಧ ಪಕ್ಷದ ಸದಸ್ಯರು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಮತಡಿ ಅವರು 31 ವಾರ್ಡ್ ಗಳಿಗೆ ಸಾಮಾನವಾಗಿ ಅಭಿವೃದ್ಧಿ ಕಾಮಗಾರಿ ಮಾಡಲಾಗು ವುದು. ತುರ್ತು ಕಾಮಗಾರಿ ಆಗಬೇಕಾದ ವಾರ್ಡ್ ಗಳಲ್ಲಿ ಕೆಲಸ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.

ಮುಖಚೇರಿ ವಾರ್ಡ್ ನಲ್ಲಿ ರಸ್ತೆ ಧೂಳುಮಯ ವಾಗಿದೆ.ಅಭಿವೃದ್ಧಿ ಕುಂಠಿತ ಆಗಿದೆ.ಬಹಳಷ್ಟು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.ಈ ಬಗೆ ನಗರ ಸಭೆ ಯಿಂದ ಕ್ರಮ ಯಾಕಿಲ್ಲ ಎಂದು ಕೌನ್ಸಿಲರ್ ಮುಹಮ್ಮದ್ ಮುಕಚೇರಿ ಅವರು ಸಭೆಯಲ್ಲಿ ಪ್ರಶ್ನಿಸಿ ತರಾಟೆಗೈದರು.

ಈ ಸಂದರ್ಭದಲ್ಲಿ ಉತ್ತರಿಸಿದ ಪೌರಾಯುಕ್ತ ಮತಡಿ ಅವರು, ಅನುದಾನ ಕಡಿಮೆ ಇದೆ.ಸ್ಟೇಶನರಿಗೆ ಹಣ ಇಲ್ಲ.ಅನುದಾನ ಬಂದರೆ ಒದಗಿಸಲಾಗುವುದು ಎಂದರು.ಕಾರ್ಯಸೂಚಿ ಪಟ್ಟಿಯಲ್ಲಿ ರುವ ವಿಚಾರ ಮಂಡನೆ ಮತ್ತು ಚರ್ಚೆಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. 

ಈ ವೇಳೆ ಸದಸ್ಯ ಖಲೀಲ್ ಅವರು ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡದಿದ್ದರೆ ಅಭಿವೃದ್ಧಿ ಹೇಗಾಗುತ್ತದೆ ಎಂದು ಪ್ರಶ್ನಿಸಿದರು. ಸಭೆಗೆ ಅಧಿಕಾರಿಗಳು ಗೈರು ಹಾಜರಾದ ಬಗೆ ಸದಸ್ಯ ಜಬ್ಬಾರ್ ಸಭೆಯಲ್ಲಿ ಪ್ರಸ್ತಾಪಿಸಿ ಅಧ್ಯಕ್ಷರನ್ನು ತರಾಟೆಗೈದರಲ್ಲದೇ ರಸ್ತೆಯ ಡಿವೈಡರ್ ನಲ್ಲಿರುವ ವಿದ್ಯುತ್ ಕೇಬಲ್ ದುರಸ್ತಿ ಪಡಿಸಲು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಶಶಿ ಕಲ ಅವರು ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.ಬೇರೆ ಕಾರಣದಿಂದ ಗೈರು ಹಾಜರಾಗಿದ್ದಾರೆ ಎಂದು ತಿಳಿಸಿದಾಗ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

2022 ಸಾಲಿನ ಉಳ್ಳಾಲ ಉರೂಸ್ ನ ಅಭಿವೃದ್ಧಿ ಕಾಮಗಾರಿ ಗೆ 2.15 ಕೋಟಿ ಕೊಟೇಶನ್ ನೀಡಲಾಗಿದೆ.ಇದೀಗ ಸರ್ಕಾರ 2.15 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಲೆಕ್ಕಾಧಿಕಾರಿ ಬಿಂದಿಯಾ ಸಭೆಗೆ ತಿಳಿಸಿದರು.

ಉಪಾಧ್ಯಕ್ಷ ಸಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಉಪಸ್ಥಿತರಿದ್ದರು.





 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News