ಸೋಲಾರ್ ಅಳವಡಿಕೆ ಯೋಜನೆ ಹೆಚ್ಚಿಸಲು ಸಂಸದ ಬ್ರಿಜೇಶ್ ಚೌಟ ಸೂಚನೆ
ಮಂಗಳೂರು: ಮನೆಯ ಮೇಲ್ಚಾವಣಿಯಲ್ಲಿ ಸೋಲಾರ್ ಸಿಸ್ಟಮ್ ಅಳವಡಿಸಿದರೆ ಕೇಂದ್ರ ಸರಕಾರದಿಂದ ಗ್ರಾಹಕರಿಗೆ ಸಬ್ಸಿಡಿ ದೊರಕುತ್ತಿದ್ದು ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಅರಿವು ಮೂಡಿಸುವಂತೆ ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ ಸೂಚಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯ ಕಾರ್ಯಗಾರದ ಸಿದ್ಧತೆಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಯೋಜನೆಯಂತೆ ಸಾರ್ವಜನಿಕರು ತಮ್ಮ ಮನೆಯ ಮೇಲ್ಚಾವಣಿಯಲ್ಲಿ ಸೋಲಾರ್ ಸಿಸ್ಟಮ್ ಅಳವಡಿಸಿದರೆ ಸರಕಾರದಿಂದ ಸಬ್ಸಿಡಿ ದೊರಕಲಿದೆ. 1 ಕಿಲೋ ವ್ಯಾಟ್ ಗೆ 30ಸಾವಿರ ರೂ., 2 ಕಿಲೋ ವ್ಯಾಟ್ ರೂ.60ಸಾವಿರ, 3 ಕಿಲೋ ವ್ಯಾಟ್ ಮೇಲ್ಪಟ್ಟ ಸೋಲಾರ್ಗಳಿಗೆ ರೂ.78ಸಾವಿರ ವರೆಗೆ ಸಬ್ಸಿಡಿ ದೊರಕಲಿದೆ ಎಂದು ಅವರು ತಿಳಿಸಿದರು.
ಈ ಸೋಲಾರ್ ಯೋಜನೆಯಿಂದ ಉತ್ಪತ್ತಿಯಾಗುವ ವಿದ್ಯುತ್ಖ್ ಅನ್ನು ತಮ್ಮ ಮನೆಯ ಬಳಕೆಗೆ ಉಪಯೋಗಿಸಬಹುದು ಹಾಗೂ ಹೆಚ್ಚುವರಿ ವಿದ್ಯುತ್ಅನ್ನು ಮೆಸ್ಕಾಂಗೆ ಮಾರಾಟ ಮಾಡಬಹುದಾಗಿದೆ ಎಂದು ಸಂಸದರು ತಿಳಿಸಿದರು.
*ಜ.2ರಂದು ಕೇಂದ್ರ ಸಚಿವರು ಜಿಲ್ಲೆಗೆ: ಕೇಂದ್ರ ನವೀಕರಿಸಬಹುದಾದ ಇಂಧನಗಳ ಸಚಿವ ಪ್ರಹ್ಲಾದ ಜೋಶಿ ಅವರು ಜನವರಿ 2ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಪ್ರಧಾನಮಂತ್ರಿ ಸೂರ್ಯ-ಘರ್ಯೋಜನೆಯ ಕಾರ್ಯಗಾರವನ್ನು ಉದ್ಘಾಟಿಸಿ ಯೋಜನೆಯ ಅನುಷ್ಠ್ಠಾನದ ಪ್ರಗತಿ ಕುರಿತು ಮಾಹಿತಿ ಪಡೆಯಲಿದ್ದಾರೆ.ಈಗಾಗಲೇ ಸೋಲಾರ್ ಯೋಜನೆ ಅಳವಡಿಸಿರುವ ಗ್ರಾಹಕರ ಅನುಭವವನ್ನು ತಿಳಿದುಕೊಳ್ಳಲಿದ್ದಾರೆ ಎಂದು ಸಂಸದರು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು.
*675 ಸೋಲಾರ್ ಯೋಜನೆ ಅಳವಡಿಕೆ: ಮೆಸ್ಕಾಂ ವ್ಯವಸ್ಥಾಪನ ನಿರ್ದೇಶಕ ಜಯಕುಮಾರ್ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 675 ಜನರು ಸೋಲಾರ್ಯೋಜನೆ ಅಳವಡಿಸಿಕೊಂಡಿದ್ದಾರೆ.ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆ ಅಡಿಯಲ್ಲಿ ಸೋಲಾರ್ ಉಪಕರಣಗಳ ಮಾರಾಟಕ್ಕೆ 270 ಡೀಲರ್ಗಳನ್ನು ಗುರುತಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಮಾತನಾಡಿ ಸೋಲಾರ್ ಉಪಕರಣಗಳ ಖರೀದಿಗೆ ಬ್ಯಾಂಕ್ ಸಾಲ ನೀಡಲು ಬ್ಯಾಂಕುಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಶಾಸಕರಾದ ಡಾ.ವೈ. ಭರತ್ ಶೆಟ್ಟಿ, ವೇದವ್ಯಾಸ್ಕಾಮತ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್ ಆನಂದ್, ಲೀಡ್ ಬ್ಯಾಂಕ್ ಮ್ಯಾನೇಜರ್ ಕವಿತಾ ಮತ್ತಿತರರು ಉಪಸ್ಥಿತರಿದ್ದರು.