ಉಳ್ಳಾಲ ಇನ್‌ಸ್ಪೆಕ್ಟರ್ ಬಾಲಕೃಷ್ಣ ವಿರುದ್ಧ ಭ್ರಷ್ಟಾಚಾರದ ಆರೋಪ

ಮಂಗಳೂರು, ಎ.4: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಕಳವು ಪ್ರಕರಣದಲ್ಲಿ ಇನ್‌ಸ್ಪೆಕ್ಟರ್ ಬಾಲಕೃಷ್ಣ 50 ಗ್ರಾಂ ಚಿನ್ನಾಭರಣವನ್ನು ಹೆಚ್ಚುವರಿಯಾಗಿ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ. ಆ ಹಿನ್ನಲೆಯಲ್ಲಿ ಇದರ ವಿಚಾರಣೆಯ ಹೊಣೆಯನ್ನು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ನಾಯಕ್‌ಗೆ ವಹಿಸಲಾಗಿದೆ.
2024ರ ಜೂ.28ರಂದು ಉಳ್ಳಾಲದ ಮನೆಯೊಂದರಲ್ಲಿ ಚಿನ್ನಾಭರಣದ ಕಳವಾದ ಬಗ್ಗೆ ದೂರು ನೀಡಲಾಗಿತ್ತು. ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಬಾಲಕೃಷ್ಣ ಪಿಯುಸಿ ವಿದ್ಯಾರ್ಥಿ ಸೇರಿ ಇಬ್ಬರು ಅಪ್ರಾಪ್ತರು ಮತ್ತವರ ಮೂವರನ್ನು ಗೆಳೆಯರನ್ನು ಬಂಧಿಸಿ, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು.
ಈ ಮಧ್ಯೆ ಮಾ.13ರಂದು ಆರೋಪಿಯೊಬ್ಬನ ತಾಯಿ ಪೊಲೀಸ್ ಕಮಿಷನರ್ ಬಳಿ ಹೋಗಿ ಉಳ್ಳಾಲ ಇನ್‌ಸ್ಪೆಕ್ಟರ್ ಆಗಿದ್ದ ಬಾಲಕೃಷ್ಣ ಭ್ರಷ್ಟಾಚಾರ ಮತ್ತು ವಂಚನೆ ಮಾಡಿದ್ದರು ದೂರು ನೀಡಿದ್ದರು. ಅದರಂತೆ ಪ್ರಕರಣದ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೆಚ್ಚಿನ ವಿಚಾರಣೆ ಯನ್ನು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾ ನಾಯಕ್‌ಗೆ ವಹಿಸಿದ್ದಾರೆ.
ತನ್ನ ಮಗನನ್ನು ವಶಕ್ಕೆ ಪಡೆದಿದ್ದ ಪೊಲೀಸರು ಮರುದಿನ ತನ್ನನ್ನು ಕೂಡ ಠಾಣೆಗೆ ಕರೆಯಿಸಿ ಹಣದ ಬೇಡಿಕೆ ಇಟ್ಟಿದ್ದರು. ಅದನ್ನು ಕೂಡಾ ತಾನು ನೀಡಿದ್ದೆ. ಬಳಿಕ ಮಗನನ್ನು ನ್ಯಾಯಾಲಯಕ್ಕೆ ಹಾಜರುಪಡಿ ಸುವ ಸಂದರ್ಭ ಆತನ ಮೈಮೇಲಿದ್ದ 50 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದರು. ಈ ಲೆಕ್ಕವನ್ನು ಚಾರ್ಜ್ ಶೀಟ್‌ನಲ್ಲಿ ಹಾಕುತ್ತೇನೆ. ಆಮೇಲೆ ರಿಕವರಿ ಮಾಡಿ ಎಂದು ಇನ್‌ಸ್ಪೆಕ್ಟರ್ ಹೇಳಿದ್ದರು. ಆದರೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ 50 ಗ್ರಾಂ ಚಿನ್ನಾಭರಣದ ಬಗ್ಗೆ ಉಲ್ಲೇಖವೇ ಇಲ್ಲ ಎಂದು ಮಹಿಳೆ ಕಮಿಷನರ್‌ಗೆ ನೀಡಿದ ದೂರಿನಲ್ಲಿ ಆಪಾದಿಸಿದ್ದರು.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಆರೋಪಿಯ ತಾಯಿ ನನ್ನ ಬಳಿ ಬಂದು ಆರೋಪ ಮಾಡಿದ್ದು, ನಾನು ವಿಚಾರಿಸಿದ ಬಳಿಕ ಹೆಚ್ಚಿನ ವಿಚಾರಣೆಗೆ ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾ ನಾಯಕ್‌ಗೆ ಜವಾಬ್ದಾರಿ ವಹಿಸಿರುವೆ. ಅವರು ವಿಚಾರಣೆ ನಡೆಸಲಿದ್ದು, ಅದರಲ್ಲಿ ಸತ್ಯಾಂಶವಿದ್ದರೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.