"ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ"

ಮಂಗಳೂರು, ಎ. 5: ಪ್ರಸಕ್ತ ವರ್ಷ ಜಿಲ್ಲೆಯ ವಿವಿಧ ಡ್ಯಾಂಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿದ್ದು, ಮಳೆಯೂ ಸುರಿಯುತ್ತಿದ್ದರೂ ಕೂಡಾ ಮುಂದಿನ ಎರಡು ತಿಂಗಳ ಬೇಸಗೆ ಅವಧಿಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ವಹಿಸಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನಿರ್ದೇಶನ ನೀಡಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಕುಡಿಯುವ ನೀರು, ಬೇಸಿಗೆ ಸಮಸ್ಯೆ ಹಾಗೂ ಮಳೆಗಾಲವನ್ನು ಎದುರಿಸಲು ಅಗತ್ಯ ಸಿದ್ಧತೆಗಳ ಕುರಿತಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ತಿಂಗಳಲ್ಲಿ ನೀರಿನ ನಿರ್ವಹಣೆಗೆ ಅಗತ್ಯ ಕ್ರಮ ವಹಿಸಿದರೆ, ಇರುವ ನೀರನ್ನು ಮುಂದಿನ ಎರಡು ತಿಂಗಳ ಕಾಲ ಸಮರ್ಪಕವಾಗಿ ಪೂರೈಕೆ ಮಾಡಲು ಸಾಧ್ಯವಾಗಲಿದೆ. ಹಾಗಾಗಿ ನೀರಿನ ಸಂಗ್ರಹವಿದೆ, ಮಳೆ ಇದೆ ಎಂಬ ಕಾರಣಕ್ಕೆ ರಿಸ್ಕ್ ತೆಗೆದುಕೊಳ್ಳದೆ, ಕೈಗಾರಿಕೆಗಳಿಗೆ ನೀರು ಪೂರೈಕೆಯಲ್ಲಿಯೂ ಈಗಿನಿಂದಲೇ ನಿಯಂತ್ರಣಕ್ಕೆ ಕ್ರಮ ವಹಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕುರಿತ ಚರ್ಚೆಯ ವೇಳೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುವ ಕಾರಣ ಜಲಮೂಲಗಳಲ್ಲಿ ಬೇಸಿಗೆಯ ನೀರಿನ ಪೂರೈಕೆಗೆ ಅಗತ್ಯ ನೀರಿನ ಸಂಗ್ರಹವಿದೆ. ಫೆಬ್ರವರಿ ಮಾರ್ಚ್‌ನಲ್ಲಿ ಬಿಸಿಗಾಳಿಯ ಕಾರಣ ನೀರಿನ ಆವಿಯ ಪ್ರಮಾಣ ಹೆಚ್ಚಾಗಿದ್ದರೂ, ಈ ನಡುವೆ ಸುರಿದ ಮಳೆಯ ಕಾರಣ ನೀರಿನ ಸಂಗ್ರಹವಿದೆ. ಮುಂಗಾರು ಪೂರ್ವ ಮಳೆಯೂ ಈ ಬಾರಿ ಉತ್ತಮವಾಗಿ ಸುರಿಯುವ ನಿರೀಕ್ಷೆ ಇದೆ. ಮಾತ್ರವಲ್ಲದೆ, ಮೇ ತಿಂಗಳಲ್ಲೇ ಮುಂಗಾರು ಆರಂಭವಾಗುವ ನಿರೀಕ್ಷೆ ಇರುವ ಕಾರಣ ನೀರಿನ ಸಮಸ್ಯೆ ಎದುರಾಗದು ಎಂದು ಹೇಳಿದರು.
ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಹಾಗೂ ಎಎಂಆರ್ ಅಣೆಕಟ್ಟಿನಲ್ಲಿರುವ ನೀರಿನ ಸಂಗ್ರಹ ಕನಿಷ್ಟ 35ರಿಂದ 40 ದಿನಗಳಿಗೆ ಸಾಕಾಗಲಿದೆ. ಪಾಲಿಕೆ ವ್ಯಾಪ್ತಿಯ ಮೂರು ಅಣೆಕಟ್ಟುಗಳ ನೀರು ಬಳಕೆ ಮಾಡಿದರೆ ಸುಮಾರು 90 ದಿನಗಳವರೆಗೆ ಸಾಕಾಲಿದೆ ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದರು.
ನಗರಕ್ಕೆ ತುಂಬೆಯಿಂದ ಪ್ರತಿನಿತ್ಯ 160 ಎಂಎಲ್‌ಡಿ ನೀರು ನಗರಕ್ಕೆ ಪೂರೈಕೆಯಾಗುತ್ತಿದ್ದು, ಅದರಲ್ಲಿ ಸುಮಾರು 20 ಎಂಎಲ್‌ಡಿ ನೀರು ಸೋರಿಕೆಯಾಗುತ್ತಿದೆ ಎಂದು ಸಚಿವರ ಪ್ರಶ್ನೆಯೊಂದಕ್ಕೆ ಪಾಲಿಕೆ ಆಯುಕ್ತರು ಪ್ರತಿಕ್ರಿಯಿಸಿದರು.
ಸೋಮೇಶ್ವರ, ಉಳ್ಳಾಲ, ಕೋಟೆಕಾರು ಪ್ರದೇಶದಲ್ಲಿ ನೀರಿನ ಸಮಸ್ಯೆ ಇದ್ದು, ಪರ್ಯಾಯ ಕ್ರಮ ವಹಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ಸುರತ್ಕಲ್‌ನಲ್ಲಿ ನೀರಿನ ಸಮಸ್ಯೆ ಇದ್ದು, 156 ಬೋರ್‌ವೆಲ್‌ಗಳ ವ್ಯವಸ್ಥೆ ಇದೆ. 16 ಟ್ಯಾಂಕರ್‌ಗಳನ್ನು ಕೂಡಾ ನೀರು ಪೂರೈಕೆಗಾಗಿ ಮೀಸಲಿರಿಸಲಾಗಿದೆ. ಬಂಟ್ವಾಳದ ಪಾಣೆಮಂಗಳೂರಿನ ನಾಲ್ಕೈದು ವಾರ್ಡ್‌ಗಳಿಗೆ 2018ರಿಂದ ನೀರಿನ ಸಮಸ್ಯೆ ಇದೆ. ಹಳೆಯ ನೀರು ಪೂರೈಕೆ ಜಾಲ ಹೊಸ ಜಾಲಕ್ಕೆ ಸಂಪೂರ್ಣವಾಗಿ ಬದಲಾದ ಬಳಿಕ ಸಮಸ್ಯೆ ಬಗೆಹರಿಯಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ನೇತ್ರಾವತಿ ನದಿಗೆ ಕೊಳಚೆ ನೀರು: ಡಿಪಿಆರ್ ಸಿದ್ಧತೆ
ಬಂಟ್ವಾಳದಲ್ಲಿ ನೇತ್ರಾವತಿ ನದಿಗೆ ಕೊಳಚೆ ನೀರು ಸೇರುತ್ತಿರುವ ವರದಿಗಳ ಬಗ್ಗೆ ಸಭೆಯಲ್ಲಿ ಉಲ್ಲೇಖಿ ಸಿದ ಸಚಿವ ದಿನೇಶ್ ಗುಂಡೂರಾವ್, ಈ ಬಗ್ಗೆ ಕೈಗೊಂಡ ಕ್ರಮದಬಗ್ಗೆ ಅಧಿಕಾರಿಗಳಿಂದ ವಿವರ ಕೇಳಿದರು.
ಬಂಟ್ವಾಳದ ಐದು ಕಡೆ ಒಳಚರಂಡಿ ನೀರು ನದಿಗೆ ಸೇರುತ್ತಿರುವುದು ಪತ್ತೆಯಾಗಿದ್ದು, ಅದನ್ನು ಸರಿಪಡಿ ಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ ಎಂದು ಬಂಟ್ವಾಳ ತಾ.ಪಂ. ಸಿಇಒ ಮಾಹಿತಿ ನೀಡಿದರು.
ನೀರಿನ ಸಮಸ್ಯೆ ಆಗುವಲ್ಲಿ ಪಿಡಿಒಗಳನ್ನೇ ಜವಾಬ್ದಾರನ್ನಾಗಿಸಿ
ಪುತ್ತೂರು ಕಬಕದ ಮುರ ಎಂಬಲ್ಲಿ ಕಳೆದ ಮೂರು ದಿನಗಳಿಂದ ನೀರಿಲ್ಲ. ಪಂಪ್ ಹಾಳಾಗಿದ್ದು, ಅದನ್ನು ರಿಪೇರಿಗೆ ತೆಗೆದುಕೊಂಡು ಹೋಗಿದ್ದಾರೆನ್ನಲಾಗಿದೆ. ಆದರೆ ನೀರು ಪೂರೈಕೆಗೆ ಪರ್ಯಾಯ ಕ್ರಮ ವಹಿ ಸಿಲ್ಲ, ಅಧಿಕಾರಿಗಳಿಗೆ ಸಮಸ್ಯೆ ಎದುರಾದಾಗ ನೀರು ಪೂರೈಕೆಗೆ ಹಣಕಾಸಿನ ತೊಂದರೆ ಏನಾದರೂ ಇದೆ ಎಂದು ಸಭೆಯಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಪ್ರಶ್ನಿಸಿದರು.
ನೀರಿನ ಪೂರೈಕೆಗೆ ಸಂಬಂಧಿಸಿ ಹಣಕಾಸಿನ ತೊಂದರೆ ಇಲ್ಲ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದಾಗ, ಸ್ಥಲೀಯವಾಗಿ ನೀರುಪೂರೈಕೆಯ ಜವಾಬ್ಧಾರಿಯನ್ನು ಪಿಡಿಒಗಳೇ ನಿರ್ವಹಿಸಬೇಕು. ಸಮಸ್ಯೆ ಆದಾಗ ಪಿಡಿಒಗಳನ್ನೇ ಜವಾಬ್ಧಾರನ್ನಾಗಿಸಬೇಕು ಎಂದು ಹೇಳಿದರು.
ಮಳೆಗಾಲದ ಸಮಸ್ಯೆಗೆ ಎದುರಿಸಲು ಸಿದ್ಧತೆಗೆ ಸಲಹೆ
ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವ ಜತೆಯಲ್ಲಿಯೇ ಮಳೆಗಾಲ ದಲ್ಲಿ ನಿಗದಿತ ಸ್ಥಳಗಳಲ್ಲಿ ಕೃತಕ ನೆರೆ ಎದುರಾಗದಂತೆ ಕ್ರಮ ವಹಿಸಬೇಕು. ಇದಕ್ಕಾಗಿ ರಾಜಕಾಲುವೆಗಳ ಹೂಳೆತ್ತುವ ಕಾರ್ಯವನ್ನು ತಕ್ಷಣದಿಂದ ಆರಂಭಿಸಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದರು.
ಕಳೆದ ವರ್ಷ ಮುಂಗಾರು ಪೂರ್ವದಲ್ಲಿ ಸಂಭವನೀಯ ಪ್ರವಾಹ ಪೀಡಿತ ಸ್ಥಳಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡ ಕಾರಣ ಪಂಪ್‌ವೆಲ್, ಕೊಟ್ಟಾರ ಮೊದಲಾದೆಡೆ ಕೃತಕ ನೆರೆ ಸಮಸ್ಯೆ ಎದುರಾಗಿಲ್ಲ. ಈ ಬಾರಿಯೂ ತಹಶೀಲ್ದಾರ್ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ಸಭೆಯಲ್ಲಿ ದ.ಕ. ಜಿಪಂ ಸಿಇಒ ಡಾ. ಆನಂದ್, ಎಸ್ಪಿ ಯತೀಶ್ ಎನ್., ಡಿಸಿಎಫ್ ಆ್ಯಂಟನಿ ಮರಿಯಪ್ಪ, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಮೀನು ಸಂಗ್ರಹದಲ್ಲಿ ಇಳಿಕೆ: ಮೀನುಗಾರರ ಸಮಸ್ಯೆ ಬಗ್ಗೆ ಚರ್ಚೆ
ಕಡಲ ಮೀನುಗಾರಿಕೆ ಸಂಗ್ರಹದಲ್ಲಿ 2023-24 ನೇ ಸಾಲಿಗೆ ಹೋಲಿಸಿದರೆ 2024-25ನೆ ಸಾಲಿನಲ್ಲಿ ಸಾಕಷ್ಟು ಇಳಿಕೆಯಾಗಿರುವ ಹಾಗೂ ಮೀನುಗಾರರ ಸಮಸ್ಯೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಕಳೆದ ವರ್ಷ ಕಡಲ ಮೀನುಗಾರಿಕೆಯಲ್ಲಿ 2.39 ಲಕ್ಷ ಟನ್ ಮೀನು ಸಂಗ್ರಹವಾಗಿದ್ದರೆ, ಈ ವರ್ಷದ ಸಂಗ್ರಹ 1.72 ಲಕ್ಷ ಟನ್ ಆಗಿದೆ. ಈ ಬಾರಿಯ ಬಿಸಿಗಾಳಿಯೂ ಕಡಲ ಮೀನು ಸಂಗ್ರಹದಲ್ಲಿ ಇಳಿಕೆಗೆ ಕಾರಣವಾಗಿದ್ದು, ಕೆಲವೆಡೆ ಅಕ್ರಮ ಮೀನುಗಾರಿಕೆ, ಲೈಟ್ ಫಿಶಿಂಗ್ ಬಗ್ಗೆಯೂ ಮೀನುಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಳೆಗಾಲದ ಮೀನುಗಾರಿಕಾ ನಿಷೇಧದ ಅವಧಿಯನ್ನು 2 ತಿಂಗಳಿಂದ 3 ತಿಂಗಳಿಗೆ ವಿಸ್ತರಿಸಬೇಕೆಂಬ ಬೇಡಿಕೆಯೂ ಇದೆ. ಆದರೆ ಕೆಲವರಿಂದ ಇದಕ್ಕೆ ವಿರೋಧವಿದ್ದು, ಕರ್ನಾಟಕ ಕರಾವಳಿ ಯಲ್ಲಿ ಮೂರು ತಿಂಗಳು ನಿಷೇಧ ಮಾಡಿದರೂ ಇತರ ಕರಾವಳಿ ತೀರದ ರಾಜ್ಯಗಳ ಮೀನುಗಾರರು ಆ ಸಮಯದಲ್ಲಿ ಮೀನುಗಾರಿಕೆ ನಡೆಸುತ್ತಾರೆ. ಹಾಗಾಗಿ ಮೀನುಗಾರಿಕೆ ಏಕರೂಪದ ನೀತಿ ಜಾರಿಯಾಗ ಬೇಕೆಂಬ ಮೀನುಗಾರರ ಆಗ್ರಹವಿದೆ ಎಂದು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸಿದ್ಧಯ್ಯ ಹೇಳಿದರು.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ನೂತನ ಜಿಲ್ಲಾಧಿಕಾರಿ ಕಚೇರಿಯನ್ನು ಎ. 20ರ ಬಳಿಕ ಮುಖ್ಯಮಂತ್ರಿ ಆಗಮನದ ದಿನಾಂಕವನ್ನು ನಿಗದಿಪಡಿಸಿಕೊಂಡು ಯಾವ ದಿನದಲ್ಲಾದರೂ ಉದ್ಘಾಟನೆ ಕಾರ್ಯಕ್ರಮ ನಡೆಸಬಹುದು. ಅದಕ್ಕೆ ಕನಿಷ್ಟ ಎರಡು ದಿನಗಳಿಗೆ ಮುಂಚಿತವಾಗಿಯಾದರೂ ಅಲ್ಲಿಗೆ ಸ್ಥಳಾಂತರವಾಗಲಿರುವ ಇಲಾಖೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನಿರ್ದೇಶನ ನೀಡಿದರು.