ನವಮಂಗಳೂರು ಬಂದರಿಗೆ ಆಗಮಿಸಿದ ಐಷಾರಾಮಿ ಪ್ರವಾಸಿ ಹಡಗು

ಮಂಗಳೂರು, ಎ.5: ಐಷಾರಾಮಿ ಪ್ರವಾಸಿ ಹಡಗು ಎಂಎಸ್ ನಾರ್ವೇಜಿಯನ್ ಸ್ಕೈ ಪಣಂಬೂರಿನ ನವಮಂಗಳೂರು ಬಂದರಿಗೆ ಶನಿವಾರ ಆಗಮಿಸಿದೆ.
ಇದು ನವಮಂಗಳೂರು ಬಂದರಿಗೆ ಪ್ರಸಕ್ತ ಸಾಲಿನಲ್ಲಿ ಆಗಮಿಸಿದ ಐದನೇ ಹಡಗು ಆಗಿದೆ. ಕೆರಬ್ಬೀಯನ್ ದೇಶ ಬಹಾಮಾಸ್ ಫ್ಲಾಗ್‌ನೊಂದಿಗೆ ಸಂಚರಿಸುವ ಈ ಐಷಾರಾಮಿ ಹಡಗಿನಲ್ಲಿ 1,876 ಪ್ರಯಾಣಿಕರು ಮತ್ತು 861 ಸಿಬ್ಬಂದಿ ಇದ್ದಾರೆ. ಕೋವಿಡ್ ಬಳಿಕ ಹಡಗಿನಲ್ಲಿ ಮಂಗಳೂರಿಗೆ ಆಗಮಿಸಿದ ಅತಿ ಹೆಚ್ಚು ಪ್ರಯಾಣಿಕರ ಸಂಖ್ಯೆ ಇದಾಗಿದೆ.
ಬಂದರಿನ 4ನೇ ಬರ್ತ್‌ನಲ್ಲಿ ನಿಂತಿರುವ 258.6 ಮೀಟರ್ ಉದ್ದದ ಕ್ರೂಸ್ ಕೊಚ್ಚಿನ್ ಬಂದರಿನಿಂದ ಆಗಮಿಸಿತ್ತು.
ಎನ್‌ಎಂಪಿಎ ಉಪಾಧ್ಯಕ್ಷೆ ಎಸ್. ಶಾಂತಿ ಮತ್ತು ಎಂಆರ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂ. ಶ್ಯಾಮಪ್ರಸಾದ್ ಕಾಮತ್ ಅವರು ಶಿಪ್ ಮಾಸ್ಟರ್ ಅವರನ್ನು ಸ್ಮರಣಿಕೆಯೊಂದಿಗೆ ಸ್ವಾಗತಿಸಿದರು. ಕ್ರೂಸ್ ಲಾಂಜ್‌ನಲ್ಲಿ ಯಕ್ಷಗಾನ ಮತ್ತು ಭರತನಾಟ್ಯ ಪ್ರದರ್ಶನಗಳೊಂದಿಗೆ ಕ್ರೂಸ್ ಪ್ರಯಾಣಿಕರಿಗೆ ಭವ್ಯ ಸಾಂಪ್ರದಾಯಿಕ ಸ್ವಾಗತವನ್ನು ನೀಡಲಾಯಿತು.
ಒಟ್ಟು 977 ಪ್ರಯಾಣಿಕರು ಕಾರ್ಕದ ಗೋಮಟೇಶ್ವರ, 1000 ಕಂಬದ ಬಸದಿ, ಸೋನ್ಸ್ ಫಾರ್ಮ್, ಕದ್ರಿ ಮತ್ತು ಗೋಕರ್ಣನಾಥ ದೇವಾಲಯಗಳು ಮತ್ತು ಸ್ಥಳೀಯ ಮಾರುಕಟ್ಟೆಗಳಿಗೆ ಭೇಟಿ ಸಂದರ್ಶಿಸಿದರು.
