'ತುಂಬೆ ಫೆಸ್ಟ್’ ಯಶಸ್ವಿಗೊಳಿಸಿ: ಯು.ಟಿ. ಖಾದರ್

ಬಂಟ್ವಾಳ, ಎ.7: ಜಾಗತಿಕ ಮಟ್ಟದ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಳ್ಳುವ ಮೂಲಕ ಬಡವರು, ಮಹಿಳೆಯರು, ಮಕ್ಕಳು ಸಹಿತ ಗ್ರಾಮೀಣ ಜನರು ಸುಲಭವಾಗಿ ಭಾಗವಹಿಸಿ ಖುಷಿ ಪಡುವಂತಾಗಲು 'ತುಂಬೆ ಫೆಸ್ಟ್' ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಕರೆ ನೀಡಿದರು.
ಎ. 11ರಿಂದ 13ರ ವರೆಗೆ ತುಂಬೆಯಲ್ಲಿ ನಡೆಯಲಿರುವ 'ತುಂಬೆ ಫೆಸ್ಟ್' ಕಾರ್ಯಕ್ರಮದ ಪೂರ್ವ ತಯಾರಿ ಪ್ರಯುಕ್ತ ಸೋಮವಾರ ತುಂಬೆ ಬಿ.ಎ. ಕಾಲೇಜಿನಲ್ಲಿ ಕರೆದ ವಿವಿಧ ಇಲಾಖಾ ಅಧಿಕಾರಿಗಳ ಸಭೆ ನಡೆ ಸಿದ ಅವರು, ತುಂಬೆ ಫೆಸ್ಟ್ ನಲ್ಲಿ ತುಂಬೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.
ಸಮಾಜದ ಎಲ್ಲಾ ಜನರನ್ನು ಒಂದೆಡೆ ಒಗ್ಗೂಡಿಸಿಕೊಂಡು ಪರಸ್ಪರ ಗೌರವ, ಪ್ರೀತಿ, ಸೌಹಾರ್ದವನ್ನು ಬೆಳೆಸುವಲ್ಲಿ ಇಂಥಹ ಕಾರ್ಯಕ್ರಮ ಅಗತ್ಯವಾಗಿದೆ. ಕಾರ್ಯಕ್ರಮದಲ್ಲಿ 25 ಸಾವಿಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮಗೆ ನೀಡಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಹಿಸಬೇಕು. ಯಾವುದೇ ಕುಂದುಕೊರತೆ ಬಾರದಂತೆ ಮುಂಜಾಗೃತೆ ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ಜನಸಾಮಾನ್ಯರು ಬರುವಾಗ ಅವರಿಗೆ ಯಾವುದೇ ತೊಂದರೆಯಾಗಬಾರದು. ಜಾಗತಿಕ ಗುಣಮಟ್ಟದ ಸಕಲ ಸೌಕರ್ಯ ನಮ್ಮ ಗ್ರಾಮೀಣ ಜನತೆಗೆ ದೊರಕಬೇಕು. ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರನ್ನು ನೇಮಿಸಿ. ಆಗಮಿಸಿದ ಪ್ರತೀಯೊಬ್ಬರೂ ಕಾರ್ಯಕ್ರಮವನ್ನು ಆನಂದಿಸಬೇಕು ಎಂದು ಅವರು ಹೇಳಿದರು.
ಸೂಕ್ಷ್ಮ ಹಾಗೂ ಅಗತ್ಯ ಸ್ಥಳಗಳಿಗೆ ಪೊಲೀಸ್ ಇಲಾಖೆ ತಾತ್ಕಾಲಿಕ ಸಿಸಿ ಕ್ಯಾಮರಾಗಳನ್ನು ಅಳವಡಿಸ ಬೇಕು. ಅಗ್ನಿ ಶಾಮಕ ದಳ ಸನ್ನದ್ಧ ಹಾಗೂ ತುರ್ತು ಕಾರ್ಯಕ್ಕೆ ಸದಾ ಸಿದ್ಧರಾಗಿರಬೇಕು. ಕಾರ್ಯಕ್ರಮದ ಸಮಯದಲ್ಲಿ ವಿದ್ಯುತ್ ನಿಲುಗಡೆ ಆಗದಂತೆ ಮೆಸ್ಕಾಂ ಅಧಿಕಾರಿಗಳು ನೋಡಿಕೊಳ್ಳಬೇಕು. ವಾಹನ ನಿಲುಗಡೆಗೆ ಪೊಲೀಸ್ ಇಲಾಖೆ ಅಗತ್ಯ ವ್ಯವಸ್ಥೆ ಮಾಡಬೇಕು. ಎಲ್ಲಾ ಇಲಾಖಾ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದರು.
ಎ. 11ರಂದು ಸಂಜೆ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ, ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ರೆ| ಫಾ| ವಲೇರಿಯನ್ ಡಿಸೋಜಾ ಮತ್ತು ಮಿತ್ತಬೈಲು ಮಸೀದಿಯ ಅಲ್‌ಹಾಜ್ ಕೆ.ಪಿ.ಇರ್ಷಾದ್ ದಾರಿಮಿ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಯೆನೆಪೊಯ ವಿಶ್ವವಿದ್ಯಾನಿಲಯದಿಂದ ಆರೋಗ್ಯ ತಪಾಸಣಾ ಶಿಬಿರ, ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಿಂದ ಉದ್ಯೋಗ ಮಾಹಿತಿ ಕಾರ್ಯಕ್ರಮ, ಆಹಾರ ಮೇಳ, ಕುಟುಂಬ ಸಮ್ಮಿಲನ, ವಿವಿಧ ಉತ್ಪನ್ನಗಳ ಮಳಿಗೆಗಳಿಂದ ಮಾರಾಟ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬ್ಯಾರಿ ಮತ್ತು ತುಳು ಸಂಸ್ಕೃತಿ ಯನ್ನು ಬಿಂಬಿಸುವ ಕಾರ್ಯಕ್ರಮಗಳು, ಉಮೇಶ್ ಮಿಜಾರ್ ತಂಡದಿಂದ ತೆಲಿಕೆದ ಗೊಂಚಿಲು, ಪಿಲಿನಲಿಕೆ, ಚೆಂಡೆ ವಾದನ, ಬಹುಭಾಷಾ ಕವಿಗೋಷ್ಠಿ, ಒಪ್ಪಣೆ, ದಫ್, ಭರತನಾಟ್ಯ, ಅಂತಾರಾಷ್ಟ್ರೀಯ ಖ್ಯಾತಿಯ ಬಾಲಿವುಡ್ ರಾಕ್ ಮ್ಯೂಸಿಕ್ ನಡೆಯಲಿದೆ ಎಂದು ತಿಳಿಸಿದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪ್ರಾಂಶುಪಾಲ ವಿ.ಸುಬ್ರಹ್ಮಣ್ಯ ಭಟ್, ತುಂಬೆ ಗ್ರಾಪಂ ಅಧ್ಯಕ್ಷೆ ಜಯಂತಿ, ಬಿ.ಎ. ಸಮೂಹ ಸಂಸ್ಥೆಯ ನಿರ್ದೇಶಕರಾದ ಅಬ್ದುಲ್ ಸಲಾಮ್ ಮತ್ತು ಅಬ್ದುಲ್ ಅಶ್ರಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿ.ಎ. ಐಟಿಐ ಪ್ರಾಂಶುಪಾಲ ನವೀನ್ ಪ್ರಸ್ತಾವಿಸಿದರು. ತಹಶೀಲ್ದಾರ್ ಅರ್ಚನಾ ಭಟ್ ಕಾರ್ಯಕ್ರಮದ ರೂಪುರೇಷೆ ತಿಳಿಸಿದರು. ಬಿ.ಎ. ಸಮೂಹ ಸಂಸ್ಥೆಯ ಅಧೀಕ್ಷಕ ಬಿ.ಅಬ್ದುಲ್ ಕಬೀರ್ ಕಾರ್ಯಕ್ರಮ ನಿರೂಪಿಸಿದರು.