ಕಾನ-ಕಟ್ಲ ಜನತಾ ಕಾಲನಿಯ ಭೂ ಹಗರಣದಲ್ಲಿ ಶಾಮೀಲಾತಿ ಇಲ್ಲ: ಶಿಕ್ಷಣ ಇಲಾಖೆ ಸ್ಪಷ್ಟನೆ

Update: 2023-11-15 16:58 GMT

ಸುರತ್ಕಲ್‌, ನ.15: ಇಲ್ಲಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾನ-ಕಟ್ಲ ಜನತಾ ಕಾಲನಿಯ ಭೂ ಹಗರಣದಲ್ಲಿ ಶಿಕ್ಷಣ ಇಲಾಖೆಯ ಶಾಮೀಲಾತಿ ಇಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್‌ ಕುಟೊನೊ ಅವರು ಸ್ಪಷ್ಟನೆ ನೀಡಿದ್ದಾರೆ.

ಶಾಲೆಯ ಭೂ ಹಗರಣದ ಕುರಿತು ವಾರ್ತಾಭಾರತಿ ಸುದ್ದಿಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿಯವರು, ನಾನು ಅಧಿಕಾರ ವಹಿಸಿಕೊಂಡು 2ತಿಂಗಳಾಗಿದೆಯಷ್ಟೇ. ಅದಕ್ಕಿಂತಲೂ ಮುನ್ನ ಶಾಲೆಯಿಂದ ಯಾವುದೇ ದೂರು ಅಥವಾ ಮನವಿ ಬಂದಿರುವುದಿಲ್ಲ. ನ.9ರಂದು ಶಾಲೆಯ ಮುಖ್ಯೋಪಾಧ್ಯಾಯಾರು ನನಗೆ ಪತ್ರ ಬರೆದಿದ್ದರು. ಅವರ ಪತ್ರದ ಬಂದ ತಕ್ಷಣ ಸರ್ವೇ ನಡೆಸಿ ಶಾಲೆಯ ಜಾಗವನ್ನು ಗುರುತಿಸಿಕೊಡುವಂತೆ ತಹಶೀಲ್ದಾರ್‌ ಅವರಿಗೆ ಪತ್ರ ಬರೆದಿದ್ದು, ಶೀಘ್ರ ವರದಿ ನೀಡುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಶಿಕ್ಷಣ ಇಲಾಖೆಗೆ ಯಾವುದೇ ದೂರುಗಳು ಈ ಮೊದಲು ಬಂದಿರುವುದಿಲ್ಲ. ಶಿಕ್ಷಣ ಇಲಾಖೆಯಿಂದ ಯಾವುದೇ ರೀತಿಯ ಕರ್ತವ್ಯ ಲೋಪ ಸಂಭವಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನ.9ರಂದು ಮುಖ್ಯೋಪಾದ್ಯಾಯರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆದು " ಶಾಲೆಗೆ ಸಂಬಂಧಿಸಿದ ಜಮೀನಿನಲ್ಲಿ ಭೂಹಗರಣ ನಡೆದಿರುವ ಕುರಿತು ಹಳೆ ವಿದ್ಯಾರ್ಥಿಗಳು ಮತ್ತು ಊರಿನ ಗಣ್ಯರು ಗಮನಕ್ಕೆ ತಂದಿರುತ್ತಾರೆ. ಹಾಗಾಗಿ ಶಾಲೆಗೆ ಸಂಬಂಧಿಸಿದ ನಿವೇಶನವನ್ನು ಸರ್ವೆ ಮಾಡಿಸಿ ಶಾಲೆಯ ಜಮೀನನ್ನು ಉಳಿಸಿಕೊಡಬೇಕು" ಎಂದು ಮನವಿ ಮಾಡಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರು ಮಂಗಳೂರು ತಹಶಿಲ್ದಾರ್ ಅವರಿಗೆ ಪತ್ರ ಬರೆದಿದ್ದು, "‌ ಸ.ಹಿ.ಪ್ರಾ.ಶಾಲೆ, ಕಾನಕಟ್ಟ ಇಲ್ಲಿನ ಶಾಲಾ ಜಾಗವು 1ಎಕರೆ ಹಾಗೂ 0.60 ಸೆಂಟ್ಸ್, ಆಟದ ಮೈದಾನ ಆರ್.ಟಿ.ಸಿ. ಪತ್ರದಲ್ಲಿ ನಮೂದಿಸ ಲಾಗಿದೆ. ಆದರೆ, ಊರಿನ ಗಣ್ಯವ್ಯಕ್ತಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಶಾಲಾ ಜಾಗವನ್ನು ವೀಕ್ಷಿಸಿ ಆಟದ ಮೈದಾನದ ಬಳಿ ಹೊಸದಾಗಿ ಮನೆಯೊಂದನ್ನು ನಿರ್ಮಾಣ ಮಾಡುತ್ತಿದ್ದು, ಮನೆ ನಿರ್ಮಿಸುವಾಗ ಶಾಲಾ ಆವರಣದ ಕಲ್ಲುಗಳನ್ನು ತೆಗಿಸಿ ನಿರ್ಮಾಣ ಆರಂಭಿಸಿರುತ್ತಾರೆ ಎಂದು ಉಲ್ಲೇಖಿತ ಪತ್ರದಲ್ಲಿ ಶಾಲಾ ಮುಖ್ಯಶಿಕ್ಷಕರು ಮನವಿ ಸಲ್ಲಿಸಿರುತ್ತಾರೆ. ಆದ್ದರಿಂದ ಈ ಬಗ್ಗೆ ದಾಖಲಾತಿಗಳಂತೆ ಶಾಲಾ ಸ್ಥಳದ ನಿಖರವಾದ ವಿಸ್ತೀರ್ಣ/ ಅಳತೆಯನ್ನು ಸರ್ವೇ ಮಾಡಿ ವರದಿ ನೀಡಬೇಕು" ಎಂದು ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾನ-ಕಟ್ಲ ಜನತಾ ಕಾಲನಿ ಶಾಲೆಗೆ ಸರ್ವೇ ಸಂಖ್ಯೆ 16ರಲ್ಲಿ 1ಎಕರೆ ಭೂಮಿ ಶಾಲೆಗೆ ಮತ್ತು ಆಟದ ಮೈದಾನಕ್ಕೆ 60ಸೆಂಟ್ಸ್‌ ಸ್ಥಳವನ್ನು 1994ರಲ್ಲಿ ಅಂದಿನ ಎಸಿ ಅವರು ಮಂಜೂರು ಮಾಡಿದ್ದರು. ಅದರೆ, ಸ್ಥಳೀಯರೊಬ್ಬರು ಶಾಲೆಯ ಅಟದ ಮೈದಾನವನ್ನು ಸಂಪೂರ್ಣವಾಗಿ ಕಬಳಿಸಿ ಪರಾಭಾರೆ ನಡೆಸಿದ್ದಲ್ಲದೆ, ಮನೆಗಳನ್ನೂ ನಿರ್ಮಿಸಿದ್ದರು. ಈ ಹಿನ್ನೆಲೆಯಲ್ಲಿ ಡಿವೈಎಪ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್‌ ನೇತೃತ್ವದಲ್ಲಿ ತಂಡ ಹಾಗೂ ಊರಿನ ಗಣ್ಯರೊಂದಿಗೆ ತೆರಳಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮೇಲ್ನೋಟಕ್ಕೆ ಶಾಲೆಯ ಜಮೀನು ಪರಾಬಾರೆ ನಡೆಸಿರುವುದು ಮತ್ತು ಶಾಲೆಗೆ ಹಾಕಲಾಗಿದ್ದ ಕಾಂಪೌಂಡ್‌ ನ್ನು ಒಡೆದು ಮನೆಗೆಗಳನ್ನು ನಿರ್ಮಿಸಿರುವುದು ಕಂಡು ಬಂದಿತ್ತು. ಆ ಬಳಿಕ ಗ್ರಾಮಸ್ಥರು ಸೇರಿ ಹಕ್ಕೊತ್ತಾಯ ಸಭೆ ನಡೆಸಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾನ-ಕಟ್ಲ ಜನತಾ ಕಾಲನಿ ಶಾಲೆ ಉಳಿಸಿ ಹೋರಾಟ ಸಮಿತಿ ರಚಿಸಿದ್ದರು. ಮುಂದಿನ ನ.27ರಂದು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

"ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾನ-ಕಟ್ಲ ಜನತಾ ಕಾಲನಿ ಶಾಲೆಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ಶಾಲೆಯ ಜಮೀನನ್ನು ಸರ್ವೇ ಮಾಡುವಂತೆ ಪತ್ರದ ಮೂಲಕ ಮನವಿ ಮಾಡಿಕೊಂಡಿ ರುತ್ತಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸರ್ವೇ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿಲಾಗಿದೆ. ಒಂದು ವಾರ ಅಥವಾ 15 ದಿನಗಳ ಒಳಗಾಗಿ ಸರ್ವೇ ಮಾಡಿ ವರದಿಯನ್ನು ನೀಡಲಾಗುವುದು".

-‌ ಪ್ರಶಾಂತ್‌ ಪಾಟೀಲ್‌, ತಹಶೀಲ್ದಾರ್‌ ಮಂಗಳೂರು ತಾಲೂಕು

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News