ಸೆ.2ರಂದು ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಆದಿತ್ಯ-ಎಲ್1 ಉಪಗ್ರಹ ವೀಕ್ಷಣೆಗೆ ಅವಕಾಶ
ಮಂಗಳೂರು,ಸೆ.1: ಚಂದ್ರಯಾನ 3ರ ಯಶಸ್ವಿನಿಂದ ಜಾಗತಿಕ ಮನ್ನಣೆ ಗಳಿಸಿದ ನಂತರ ಇಸ್ರೋ ಇನ್ನೊಂದು ಚಾರಿತ್ರಿಕ ಸಾಧನೆಗೆ ಮುಂದಾಗಿದೆ. ಚಂದ್ರನಿಂದ ದೂರದ ಸೂರ್ಯನಿಗೆ ಗಮನಹರಿಸಿ ಭಾರತದ ಪ್ರಪ್ರಥಮ ಖಗೋಳ ಸೌರ ವೀಕ್ಷಣಾಲಯ ಆದಿತ್ಯ-ಎಲ್ 1 ಉಪಗ್ರಹವನ್ನು ಸೆ.2ರಂದು ಪೂ.11:50ಕ್ಕೆ ಆಂಧ್ರದ ಶ್ರೀಹರಿಕೋಟ ಕೇಂದ್ರದಿಂದ ಉಡಾವಣೆ ಪ್ರಕ್ರಿಯೆ ಮಾಡುವುದಾಗಿ ಇಸ್ರೋ ಘೋಷಿಸಿದೆ.
ಪಿಲಿಕುಳ ವಿಜ್ಞಾನ ಕೇಂದ್ರವು ಆದಿತ್ಯ-ಎಲ್1 ಉಪಗ್ರಹದ ಮಾಹಿತಿ ಹಾಗೂ ಪ್ರಯೋಗಗಳ ಬಗ್ಗೆ ಇಸ್ರೋ ವಿಜ್ಞಾನಿಗಳ ನೇತೃತ್ವ ಹಾಗೂ ಭಾಗವಹಿಸುವಿಕೆಯೊಂದಿಗೆ ಜಿಲ್ಲೆಯ ಆಯ್ದ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕಾರ್ಯಗಾರಗಳನ್ನು ಆಯೋಜಿಸಿತ್ತು. ಈಗ ಆದಿತ್ಯ-ಎಲ್ 1ಉಪಗ್ರಹ ಉಡ್ಡಯನ ಸಂದರ್ಭ ವಿಜ್ಞಾನ ಕೇಂದ್ರದ ನೇರಪ್ರಸಾರ ಹಾಗೂ ಭಿತ್ತಿಚಿತ್ರ ಪ್ರದರ್ಶನವನ್ನು ಪೂ. 11:30ಕ್ಕೆ ವಿಜ್ಞಾನ ಕೇಂದ್ರದ ಸಭಾಭವನದಲ್ಲಿ ಏರ್ಪಡಿಸಿದೆ. ಉಪಗ್ರಹದ ವಿವರಗಳನ್ನು ಕೇಂದ್ರದ ಅಧಿಕಾರಿ ವರ್ಗವು ನೀಡಲಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.