ರಾಜ್ಯದಲ್ಲಿ 5 ವರ್ಷಗಳಲ್ಲಿ 25 ಕೋಟಿ ಗಿಡಗಳ ನಾಟಿ ಗುರಿ: ಸಚಿವ ಈಶ್ವರ ಖಂಡ್ರೆ
ಬಂಟ್ವಾಳ, ಜು.2: ರಾಜ್ಯದಲ್ಲಿ ಪ್ರತೀ ವರ್ಷ ತಲಾ 5 ಕೋಟಿಯಂತೆ ಐದು ವರ್ಷಗಳಲ್ಲಿ 25 ಕೋಟಿ ಗಿಡ ನೆಡುವ ಗುರಿಯನ್ನು ಅರಣ್ಯ ಇಲಾಖೆ ಹೊಂದಿದೆ ಎಂದು ಕರ್ನಾಟಕ ರಾಜ್ಯ ಅರಣ್ಯ, ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಅವರು ಬಂಟ್ವಾಳ ತಾಲೂಕಿನ ಆಲಂಪುರಿ ಕಾವಳ ಪಡೂರು ಗ್ರಾಮ ಪಂಚಾಯತ್ ನ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಅರಣ್ಯ ಇಲಾಖೆಯ ಮೂಲಕ ರಾಜ್ಯದಲ್ಲಿ ಹಮ್ಮಿಕೊಂಡ ಸಾಮಾಜಿಕ ಅರಣ್ಯೀಕರಣ ದಶಲಕ್ಷ ಗಿಡಗಳ ನಾಟಿ ಯೋಜನೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಕಳೆದ ವರ್ಷ 5 ಕೋಟಿ 43 ಲಕ್ಷ ಗಿಡಗಳನ್ನು ರಾಜ್ಯದಲ್ಲಿ ನೆಡಲಾಗಿದೆ. ಈ ಪೈಕಿ ಶೇ.85ರಿಂದ 90 ಶೇ. ಗಿಡಗಳು ಉಳಿದಿವೆ. ಈ ಬಗ್ಗೆ ಸಾರ್ವಜನಿಕ ಆಡಿಟ್ ಮಾಡಿಸಲಾಗುವುದು. ಆದರೆ ಈಗಿನ ಪರಿಸ್ಥಿತಿಯಲ್ಲಿ ವಾರ್ಷಿಕ 10 ಕೋಟಿ ಗಿಡಗಳನ್ನು ನೆಟ್ಟರೂ ಸಾಲದು, ರಾಜ್ಯದಲ್ಲಿ ಶೇ 21 ಅರಣ್ಯ ಇದೆ. ಆದರೆ ನಮ್ಮ ಉಳಿವಿಗೆ ದೇಶದಲ್ಲಿ ಶೇ.33 ಅರಣ್ಯ ನಮ್ಮ ಉಳಿವಿಗಾಗಿ ಇರಬೇಕಾದ ಅಗತ್ಯವಿದೆ. ಸುಸ್ಥಿರ ಅಭಿವೃದ್ಧಿಗೆ ಹಸಿರು ಹೊದಿಕೆ ಅಗತ್ಯ ಎಂದರು.
ಹೆಚ್ಚುತ್ತಿರುವ ತಾಪಮಾನ ಹವಾಮಾನ ಬದಲಾವಣೆಯಿಂದ ಆಗುತ್ತಿದೆ. ಇದರಿಂದ ದಿಲ್ಲಿಯಲ್ಲಿ ಹಲವು ಮಂದಿ ಸಾವಿಗೀಡಾಗಿದ್ದಾರೆ. ಹಜ್ ಯಾತ್ರೆಯ ಸಂದರ್ಭದಲ್ಲಿ 1000ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಜನರ ಉಳಿವಿಗೆ ಗಿಡಗಳ ಸಂರಕ್ಷಣೆ ಮುಖ್ಯ. ಪ್ರಾಣಿ ಮಾನವ ಸಂಘರ್ಷ ತಪ್ಪಿಸಲು ಸಹಜವಾದ ಅರಣ್ಯ ಬೆಳೆಸಲು ಹಾಗೂ ಪ್ರಾಣಿಗಳು ಜೀವಿಸಲು ಸೂಕ್ತವಾದ ಪರಿಸರವನ್ನು ಸಂರಕ್ಷಿಸಲು, ಏಕ ಬಳಕೆ ಪ್ಲಾಸ್ಟಿಕ್ ತ್ಯಾಜ್ಯ ಕಡಿತಗೊಳಿಸಲು ಸರಕಾರದ ಜೊತೆ ಜನರು, ಸಂಘ ಸಂಸ್ಥೆಗಳ ಮೂಲಕ ಪ್ರಯತ್ನಿ ಸಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಭಾ ಸದಸ್ಯ,ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಗಿಡ ನೆಡುವ ಜೊತೆ ಮರಗಳ ಸಂರಕ್ಷಣೆ ಅತೀ ಅಗತ್ಯ. ಕಾಡಿನ ಜೊತೆ ವನ್ಯಜೀವಿಗಳ ಸಂರಕ್ಷಣೆಗಾಗಿ ಫಲ ಬರುವ ಗಿಡಗಳ ಸಂರಕ್ಷಣೆಯೂ ಮುಖ್ಯ. ನಮ್ಮ ಮುಂದಿನ ಜನಾಂಗದವರಿಗೆ ಈ ಪರಿಸರವನ್ನು ಸಂರಕ್ಷಿಸಿ ನೀಡಬೇಕಾಗಿದೆ ಎಂದರು.
'ಸಾಮಾಜಿಕ ಅರಣ್ಯೀಕರಣ' ಕಾರ್ಯಕ್ರಮದಡಿಯಲ್ಲಿ ಕಾಡಿನಲ್ಲಿ ಹಣ್ಣಿನ ಗಿಡ ನೆಡುವ ಯೋಜನೆಗೆ ಪೂರಕವಾಗುವಂತೆ ರಾಜ್ಯಾದ್ಯಂತ 'ದಶಲಕ್ಷ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮ'ದ ಮೂಲಕ ಬಂಟ್ವಾಳ ತಾಲೂಕಿನ, ಕಾವಳಪಡೂರು ಗ್ರಾಮದ, ಆಲಂಪುರಿ, ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಪ್ರದೇಶದಲ್ಲಿ ಈ ವರ್ಷದಲ್ಲಿ 3 ಲಕ್ಷ ಕಾಡು ಹಣ್ಣಿನ ಗಿಡಗಳು, ಸುಮಾರು 7 ಲಕ್ಷ ಇತರ ಸಾಮಾಜಿಕ ಅರಣ್ಯಕ್ಕೆ ಪೂರಕವಾಗಿರುವ ಗಿಡಗಳನ್ನು ನೆಡುವ ಮೂಲಕ ರಾಜ್ಯದಲ್ಲಿ 10 ಲಕ್ಷ ಹಣ್ಣಿನ ಗಿಡಗಳನ್ನು ನೆಡಲಾಗುವುದು ನೀರಿನ ಸಂರಕ್ಷಣೆಗೆ ಪ್ರತೀ ವರ್ಷ ಸುಮಾರು 500 ಕೆರೆಗಳ ಹೂಳೆತ್ತಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಸಸಿಗಳನ್ನು ವಿತರಿಸಿ ತ್ಯಾಜ್ಯಗಳನ್ನು ಬಳಸಿ ಗಿಡಗಳ ಸಂರಕ್ಷಣೆ ಮಾಡಬಹುದು ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಹವಾಮಾನ ಬದಲಾವಣೆ ಜಾಗತಿಕ ಚರ್ಚೆ ಪ್ರಮುಖ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಜನ ಸಹಭಾಗಿತ್ವದಲ್ಲಿ ಹೆಚ್ಚಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಅವಿನಾಶ್ ಕೊಡೆಂಕಿರಿತವರಿಗೆ ಅರಣ್ಯಮಿತ್ರ ಪ್ರಶಸ್ತಿ ವಿತರಿಸಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಅರಣ್ಯ ಇಲಾಖೆಯ ಸಿಎಫ್ ಡಾ.ಕರಿಕಾಲನ್, ಕೆಸಿಡಿಸಿ ಎಂ.ಡಿ.ಕಮಲ ಕರಿಕಾಲನ್, ಡಿಸಿಎಫ್ ಆ್ಯಂಟೊನಿ ಮರಿಯಪ್ಪ, ಎಸಿಎಫ್ ಶ್ರೀಧರ್, ಕಾವಳ ಪಡೂರು ಅಧ್ಯಕ್ಷ ಲಕ್ಷ್ಮೀ ನಾರಾಯಣ ಶರ್ಮ, ವಲಯ ಅರಣ್ಯಾಧಿಕಾರಿ ಪ್ರಫುಲ್ಲ ಶೆಟ್ಟಿ, ಎಸ್ ಕೆ ಡಿಆರ್ ಡಿಪಿ ಕಾರ್ಯ ನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಮೊದಲಾದ ವರು ಉಪಸ್ಥಿತ ರಿದ್ದರು.
ಗಣೇಶ್ ಪಿ. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಎಸ್ ಕೆ ಡಿ ಆರ್ ಡಿಪಿಯ ಯೋಜನಾಧಿಕಾರಿ ಬಾಲಕೃಷ್ಣ ವಂದಿಸಿದರು.