ಪೊಲೀಸರೇ ನಿಮ್ಮ ಟ್ರಾನ್ಸ್‌ಫರ್ ರಕ್ಷಣೆಗಾಗಿ ದೇಶವನ್ನು ಬಲಿಕೊಡಬೇಡಿ: ಶಾಸಕ ಭರತ್ ಶೆಟ್ಟಿ

Update: 2024-08-22 13:51 GMT

ಮಂಗಳೂರು: ನಾವು ನಿಮ್ಮ ಪರ ನಿಂತದ್ದು ಯಾಕೆಂದರೆ ನಾವು ಸಮಾಜ ಮತ್ತು ದೇಶದ ಪರವಾಗಿ ನಿಲ್ಲುವವರು. ಈಗ ಅಧಿಕಾರ ನಡೆಸುವ ವ್ಯಕ್ತಿಗಳು ದೇಶ ದ್ರೋಹದ ಮಾತನಾಡುತ್ತಾರೆ. ಆದರೆ ನೀವು ಟ್ರಾನ್ಸ್‌ಫರ್ ಬಗ್ಗೆ ಯೋಚನೆ ಮಾಡುತ್ತೀರಿ ಎಂದು ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಆಗ್ರಹಿಸಿ ಮತ್ತು ರಾಜ್ಯಪಾಲರ ಬಗ್ಗೆ ಕಾಂಗ್ರೆಸ್ ನಾಯಕರ ಅವಹೇಳನೆಕಾರಿ ಹೇಳಿಕೆಯನ್ನು ಖಂಡಿಸಿ ದ.ಕ. ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಗುರುವಾರ ನಗರದ ಮಿನಿಸೌಧದ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಐವನ್ ಡಿ ಸೋಜ ದೇಶದ್ರೋಹದ ಮಾತನ್ನು ಆಡಿದಾಗ ಅವರ ಮೇಲೆ ಕ್ರಮಕೈಗೊಳ್ಳಲು ನೀವು ಟ್ರಾನ್ಸ್‌ಫರ್‌ಗೆ ಹೆದರಿ ನಿಮ್ಮನೆ ಇರುವಿರಿ. ನಿಮ್ಮ ಟ್ರಾನ್ಸ್‌ಫರ್ ಉಳಿಸುವುದಕ್ಕಾಗಿ ದೇಶವನ್ನು ಬಲಿಕೊಡುವ ಪ್ರಯತ್ನ ಮಾಡಬೇಡಿ. ಅನ್ಯಾಯ ಮಾಡಿದವರ ವಿರುದ್ಧ ಕ್ರಮ ಕೊಳ್ಳಿ ಎಂದರು.

ಭರತ್ ಶೆಟ್ಟಿ, ವೇದವ್ಯಾಸ್, ಹರೀಶ್ ಪೂಂಜಾರ ಮೇಲೆ ಕೇಸು ಹಾಕಲು ಧೈರ್ಯ ತೋರುವ ನೀವು ನಾಳೆ ಸರಕಾರ ಬದಲಾದರೆ ನಿಮಗೆ ಏನು ಮಾಡಬೇಕು ಎನ್ನುವುದು ನಮಗೆ ಗೊತ್ತಿದೆ. ಫಸ್ಟ್ ಟರ್ಮ್‌ನಲ್ಲಿ ನೀವು ಬುದ್ಧಿ ಕಲಿಯಲಿಲ್ಲ. ನಾವು ಸುಮ್ಮನಿದ್ದೆವು. ಕಾಂಗ್ರೆಸ್ ಸರಕಾರ ಇದ್ದರೆ ಏನು ? ನಾವು ಅನ್ಯಾಯ ಮಾಡುವುದು ಬೇಡ ಎಂದು ಸುಮ್ಮನಿದ್ದೆವು. ಸರಕಾರ ಬದಲಾದರೆ ಮಾತ್ರ ನಿಮಗೆ ಬುದ್ದಿ ಬರುತ್ತದೊ ? ಗೊತ್ತಿಲ್ಲ ಎಂದು ಹೇಳಿದರು.

ಒಬ್ಬ ದಲಿತ ಗವರ್ನರ್‌ನ್ನು ಮನೆಯಿಂದ ಓಡಿಸುತ್ತಿದ್ದೇವೆ ಎಂದರೆ ಅದು  ದಲಿತ ದೌರ್ಜನ್ಯ ಕೇಸ್. ಆದರೆ ಐವನ್ ಮೇಲೆ ಕೇಸ್ ದಾಖಲಿಸಲು ಸೆಕ್ಷನ್ ಬಗ್ಗೆ ಎರಡೂ ಮೂರು ಕಂಪ್ಯೂಟರ್ ಇಟ್ಟುಕೊಂಡು ಆಯುಕ್ತರು ಸರ್ಚ್ ಮಾಡುತ್ತಿದ್ದಾರಂತೆ. ಎರಡು ದಿನ ಆದರೂ ಅವರಿಗೆ ಸೆಕ್ಷನ್ ಸಿಕ್ಕಿಲ್ಲ. ಇನ್ನು ಸೂಪರ್ ಕಂಪ್ಯೂಟರ್ ಬೇಕೇನೊ ? ಆದರೆ ನಮ್ಮ ಮೇಲೆ ಆಗಿದ್ದರೆ ಅರ್ಧ ಗಂಟೆಯಲ್ಲಿ ಕೇಸು ಹಾಕಿದ್ದರು ಎಂದು ಆರೋಪಿಸಿದರು.

ನಮ್ಮ ಪ್ರತಿಭಟನೆ ಸಿದ್ದರಾಮಯ್ಯ ನೇತೃತ್ವದ ಸರಕಾರವನ್ನು ಕೊನೆಗೊಳಿಸುವುದು ಮತ್ತು ಮಂಗಳೂರಿನಲ್ಲಿ ಗಲಭೆ, ದೊಂಬಿ ಮಾಡುವ ಪ್ರಯತ್ನ ನಡೆಸುವ ಸಮಾಜಘಾತಕ ಶಕ್ತಿಗಳ ವಿರುದ್ಧ ಎಂದು ಹೇಳಿದರು.

ಮಂಗಳೂರಿನಲ್ಲಿ ಸರಕಾರ ಮತ್ತು ಪೊಲೀಸ್ ಪ್ರಾಯೋಜಿತ ವ್ಯವಸ್ಥೆ ಇದೆ. ಇವರ ಧೈರ್ಯದಿಂದ ಆರೋಪಿಗಳು ಗಲಾಟೆ ಮಾಡುತ್ತಿದ್ದಾರೆ ಮೊನ್ನೆ ಕಾಂಗ್ರೆಸ್ ಪ್ರತಿಭಟನೆಯ ವೇಳೆ ಬಸ್‌ಗೆ ಕಲ್ಲು ಹೊಡೆದ ಇಬ್ಬರು ಆರೋಪಿಗಳ ಪೈಕಿ ಒಬ್ಬನ ಮೇಲೆ ಹಿಂದೆ ಹೆಣ್ಣು ಮಕ್ಕಳಿಗೆ ತೊಂದರೆ ಕೊಟ್ಟ ಆರೋಪ ಎಂದು ಅಭಿಪ್ರಾಯಪಟ್ಟರು. ಪೊಲೀಸರಿಗೆ ಯಾರ ಮೇಲೂ ಕ್ರಮ ಕೈಗೊಳ್ಳಲು ತಾಕತ್ತು ಇಲ್ಲ. ನಾವು ಕಟ್ಟುವ ತೆರಿಗೆ ಹಣದಿಂದ ನೀವು ಸಂಬಳ ಪಡೆಯುವ ನೀವು ನಿಮ್ಮ ಹೃದಯವನ್ನು ಮುಟ್ಟಿ ನೋಡಿ ಎಂದರು.

ಸಿಎಎ ಗಲಾಟೆ ನಡೆದಾಗ ಪೊಲೀಸರ ಕೆನ್ನೆಗೆ ಹೊಡೆಯಲು ಬಂದರು, ಪೊಲೀಸರಿಗೆ ಚೂರಿ ಹಾಕಲು ಮತ್ತು ಪೊಲೀಸ್ ಠಾಣೆಗೆ ಬೆಂಕಿ ಕೊಡಲು ಬಂದಾಗ ಪೊಲೀಸರ ಪರವಾಗಿ ನಿಂತದ್ದು ಬಿಜೆಪಿ, ಪೊಲೀಸರೇ ನೀವು ಬೆಂಚ್‌ಮಾರ್ಕ್ ಹಾಕಬೇಡಿ ಪೊಲೀಸರಿಗೆ ಎಚ್ಚರಿಕೆ ನೀಡಿದರು.

ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ರಾವ್ ಮಾತನಾಡಿದರು. ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಸ್.ಅಂಗಾರ, ಮಾಜಿ ಶಾಸಕ ಸಂಜೀವ ಮಠಂದೂರು, ಮೇಯರ್ ಸುಧೀರ್ ಶೆಟ್ಟಿ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತ್ತಿತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News