ವಿದ್ಯುತ್ ಕ್ಷೇತ್ರದ ಖಾಸಗೀಕರಣ ಅಪಾಯದ ಮುನ್ಸೂಚನೆ: ಸುನಿಲ್ ಕುಮಾರ್ ಬಜಾಲ್

Update: 2023-11-07 08:45 GMT

ಮಂಗಳೂರು, ನ.7: ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಸರಕಾರದ ನಡೆ ಅಪಾಯದ ಮುನ್ಸೂಚನೆಯಾಗಿದ್ದು, ಇದು ಅದಾನಿ ಮತ್ತು ಟಾಟಾ ಕಂಪನಿಯ ಜೇಜು ತುಂಬಿಸುವ ವ್ಯವಸ್ಥೆ ಎಂದು ಸಿಐಟಿಯು ಮುಖಂಡ ಸುನಿಲ್‌ಕುಮಾರ್ ಬಜಾಲ್ ಆರೋಪಿಸಿದ್ದಾರೆ.

ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ದ.ಕ. ಜಿಲ್ಲಾ ಕೇಂದ್ರ ಸಂಘಟನೆಗಳ ಜಂಟಿ ವೇದಿಕೆ (ಜೆಸಿಟಿಯು), ವಿವಿಧ ರೈತ ಸಂಘಟನೆಗಳ ಒಕ್ಕೂಟ (ಎಸ್‌ಕೆಎಂ) ಹಾಗೂ ವಿದ್ಯಾರ್ಥಿ, ಯುವಜನ, ಮಹಿಳಾ, ದಲಿತ, ಆದಿವಾಸಿ ಹಾಗೂ ಜನಪ ಸಂಘಟನೆಗಳ ವೇದಿಕೆ ವತಿಯಿಂದ ಬಿಜೈಯ ಮೆಸ್ಕಂ ಪ್ರಧಾನ ಕಚೇರಿ ಎದುರು ಮಂಗಳವಾರ ಆಯೋಜಿಸಲಾದ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ ಒಂಭತ್ತು ವರ್ಷಗಳಿಂದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ವ್ಯವಸ್ಥಿತ ಹುನ್ನಾರ ನಡೆಸುತ್ತಿರುವ ಕೇಂದ್ರ ಸರಕಾರ 2023ರ ವಿದ್ಯುತ್ ಕಾಯ್ದೆಯ ಮೂಲಕ ಸರಕಾರದ ಹಿಡಿತವನ್ನು ಸಡಿಲಗೊಳಿಸಿದೆ. ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಂಡರೆ ಬಳಕೆದಾರರ ಮೇಲೆ ದಬ್ಬಾಳಿಕ, ಮಾನಸಿಕ ಹಿಂಸೆ ಉಂಟಾಗಲಿದೆ. 2025ರ ಎಪ್ರಿಲ್‌ನಿಂದ ಎಲ್ಲಾ ಬಳಕೆದಾರರು ಪ್ರೀ ಪೇಯ್ಡಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಬೇಕಾಗುತ್ತದೆ. ಪ್ರತಿ ಮೀಟರ್‌ಗೆ 8000 ರೂ.ನಂತೆ ದೇಶದ 26 ಕೋಟಿ ವಿದ್ಯುತ್ ಗ್ರಾಹಕರ ಮೂಲಕ 2,08,0000 ಕೋಟಿ ರೂ. ಹಣ ಮೀಟರ್ ಅಳವಡಿಕೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಖಾಸಾ ದೋಸ್ತಿಗಳಾದ ಅದಾನಿ ಮತ್ತು ಟಾಟಾ ಕಂಪನಿಯ ಜೇಬು ತುಂಬಿಸುವ ಹುನ್ನಾರ ಇದಾಗಿದೆ. ಇದರಿಂದ ವಿದ್ಯುತ್ ದರ ಏರಿಕೆಯಾಗಲಿದೆ ಎಂದು ಸುನಿಲ್ ಕುಮಾರ್ ಬಜಾಲ್ ಹೇಳಿದರು.

ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸದಂತೆ ವಿಶ್ವಸಂಸ್ಥೆ ಈಗಾಗಲೇ ಎಚ್ಚರಿಕೆ ನೀಡಿದ್ದರೂ ಅದನ್ನು ಮೀರಿ ಭಾರತದಲ್ಲಿ ಈ ವ್ಯವಸ್ಥೆಗೆ ಮುಂದಾಗುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ. ಈ ಬಗ್ಗೆ ಧ್ವನಿ ಎತ್ತುವುದು ಅತೀ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಎಐಟಿಯುಸಿಯ ಎಚ್.ಪಿ. ರಾವ್ ಅವರು ಮಾತನಾಡಿ, ಸರಕಾರಿ ಸಂಸ್ಥೆಗಳ ಖಾಸಗೀಕರಣವನ್ನು ನಾವು ವಿರೋಧಿಸುತ್ತಾ ಬಂದಿದ್ದರೂ ಕೇಂದ್ರ ಸರಕಾರ ಮಾತ್ರ ಈ ಬಗ್ಗೆ ಕ್ಯಾರೇ ಅನ್ನುತ್ತಿಲ್ಲ. ಜನರನ್ನು ಖಾಸಗಿಯವರ ಗುಲಾಮರನ್ನಾಗಿ ಮಾಡುವ ಕಾರ್ಯದ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕು ಎಂದು ಅವರು ಹೇಳಿದರು.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಯೋಜನೆಯನ್ನು ಪ್ರಸ್ತಾಪಾಸಿ ಮಾತನಾಡಿದ ಅವರು, ಈ ಯೋಜನೆಯಡಿ ಚೆನ್ನೈನ ಸರಕಾರಿ ಸಂಸ್ಥೆಯಲ್ಲಿ ಖಾಸಗಿಯವರು ಬೋಗಿಗಳನ್ನು ತಯಾರಿಸಲು ಅವಕಾಶ ನೀಡಲಾಗುತ್ತಿದೆ. ಸರಕಾರದ ಸಂಸ್ಥೆಯ ಜತೆಗೆ ವಿದ್ಯುತ್, ನೀರು ಎಲ್ಲವನ್ನೂ ಬಳಸಿ ಅಲ್ಲಿ ಬೋಗಿಗಳನ್ನು ತಯಾರಿಸಿ ಸರಕಾರಕ್ಕೆ ಮಾರಾಟ ಮಾಡಿ ನಿರ್ವಹಣೆ ಮಾಡುವ ಕಾರ್ಯ ಖಾಸಗಿಯವರಿಗೆ ಒಪ್ಪಿಸಿ ಅವರಿಗೆ ಲಾಭ ಮಾಡಿಸುವ ತಂತ್ರಗಾರಿಕೆ ಇದಾಗಿದ್ದು, ಇದೀಗ ಜೀವನದ ಬಹು ಮುಖ್ಯವಾದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಕ್ಕೆ ಕೇಂದ್ರ ಸರಕಾರ ಮುಂದಾಗಿರುವುದು ಆತಂಕಕಾರಿ ಎಂದು ಅವರು ಹೇಳಿದರು.

ದಲಿತ ಸಂಘಟನೆಯ ಮುಖಂಡರಾದ ಎಂ. ದೇವದಾಸ್ ಅವರು ಮಾತನಾಡಿ, ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಬ್ರಿಟಿಷರು ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದು ಇಂಗ್ಲೆಂಡ್‌ಗೆ ಸಾಗಿಸಿದ್ದರು. ಇದೀಗ ಪ್ರಧಾನಿ ಮೋದಿ ನೇತೃತ್ವದ ಸರಕಾರ ಬಂದ ಬಳಿಕ ದೇಶದ ಸಂಪತ್ತನ್ನು ಅಂಬಾನಿ, ಅದಾನಿಗಳಿಗೆ ಮಾರಾಟ ಮಾಡುವ ಕಾರ್ಯ ನಡೆಯುತ್ತಿದೆ. ಹಾಗಾಗಿ ದೇಶದ ಸಂಪತ್ತನ್ನು ಉಳಿಸಲು ಈ ಖಾಸಗೀಕರಣದ ಹೋರಾಟ ಅನಿವಾರ್ಯ ಎಂದರು.

ಪ್ರತಿಭಟನೆಯಲ್ಲಿ ರೈತ ಮುಖಂಡ ಯಾದವ ಶೆಟ್ಟಿ, ಮಹಿಳಾಸಂಘಟನೆಯ ಭಾರತಿ ಶೆಟ್ಟಿ, ಡಿವೈಎಫ್ ಮುಖಂಡರಾದ ಸಂತೋಷ್ ಬಜಾಲ್ ಮೊದಲಾದವರು ಮಾತನಾಡಿದರು. ಡಿವೈಎಫ್‌ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಪ್ರತಿಭಟನಾ ಕಾರ್ಯಕ್ರಮವನ್ನು ನಿರ್ವಹಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಸೀತಾರಾಂ ಬೇರಿಂಜ, ವಿ. ಕುಕ್ಯಾನ್, ಶೇಖರ್, ನಾಗೇಶ್ ಕೋಟ್ಯಾನ್, ಭಾರತಿ ಬೋಳಾರ್, ಸುಹಾನ್ ಆಳ್ವ, ಮಂಜಪ್ಪ ಪುತ್ರನ್, ಪ್ರಮೀಳಾ ದೇವಾಡಿಗ, ಅಶುಂತ ಡಿಸೋಜಾ ಮೊದಲಾದವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News