ಬಜ್ಪೆ ಎಎಸ್ಸೈ ರಾಮ ಪೂಜಾರಿಗೆ ರಾಷ್ಟ್ರಪತಿ ಪದಕ

Update: 2024-01-25 15:36 GMT

ಮಂಗಳೂರು: ಪ್ರಸಕ್ತ (2024) ಸಾಲಿನ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ರಾಷ್ಟ್ರಪತಿಯ ಸೇವಾ ಪದಕಕ್ಕೆ ಬಜ್ಪೆ ಠಾಣೆಯ ಎಎಸ್ಸೈ ರಾಮ ಪೂಜಾರಿ ಆಯ್ಕೆಯಾಗಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಪದಕ ಬಂದಿದ್ದು, 1993ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಇವರು ಬ್ರಹ್ಮಾವರ, ಸುಳ್ಯ, ಎಸ್‌ಪಿ ವಿಶೇಷ ಪತ್ತೆ ದಳ, ಮೂಡುಬಿದಿರೆ, ಮುಲ್ಕಿ, ಮಂಗಳೂರು ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಬಜ್ಪೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಂಗಳೂರಿನಿಂದ ಕಾರವಾರಕ್ಕೆ ಬಸ್‌ನಲ್ಲಿ ತೆರಳುವಾಗ ಹೊನ್ನಾವರದ ಬಾರ್ಜ್‌ನ ನೀರಿನಲ್ಲಿ ಬಸ್ ಮುಳುಗಿ ಅದರಲ್ಲಿದ್ದ 25 ಮಂದಿಯ ಪ್ರಾಣವನ್ನು ರಕ್ಷಿಸಿದ ಆರು ಮಂದಿ ಪೊಲೀಸರ ತಂಡದಲ್ಲಿ ರಾಮ ಪೂಜಾರಿ ಕೂಡ ಒಬ್ಬರಾಗಿದ್ದರು.

30 ವರ್ಷದ ಸೇವಾವಧಿಯಲ್ಲಿ 35 ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಭೂಗತ ಪಾತಕಿಗಳು, ಭಯೋತ್ಪಾದಕ ಸಂಘಟನೆಯ ಸದಸ್ಯರನ್ನು ಬಂಧಿಸುವಲ್ಲಿ ಕೈಜೋಡಿಸಿದ್ದರು. ಅಲ್ಲದೆ ರಾಷ್ಟ್ರವ್ಯಾಪ್ತಿ ಪ್ರಚಾರ ಪಡೆದ ಮೂಡುಬಿದಿರೆ ಜೈನ ಬಸದಿ ಪ್ರಕರಣದ ಪ್ರಮುಖ ಆರೋಪಿಗಳ ಪತ್ತೆ, ಹಲವು ಘೋರ ಅಪರಾಧ ಪ್ರಕರಣಗಳು, ಸರ ದರೋಡೆ, ಕಳ್ಳತನ, ಅತ್ಯಾಚಾರ ಪ್ರಕರಣಗಳ ಆರೋಪಿತರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

2014ರಲ್ಲಿ ಮುಖ್ಯಮಂತ್ರಿಯ ಚಿನ್ನದ ಪದಕ ಪಡೆದುಕೊಂಡಿದ್ದ ಇವರ ಸೇವೆಯನ್ನು ಪರಿಗಣಿಸಿ ಇದೀಗ 2024ರ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News