ಪ್ರಧಾನಿ ಮೋದಿ ಜನ್ಮದಿನಾಚರಣೆ: ದ.ಕ. ಜಿಲ್ಲಾ ಬಿಜೆಪಿ ಯುವಮೋರ್ಚಾದಿಂದ ರಕ್ತದಾನ
ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 74ನೇ ಜನ್ಮ ದಿನಾಚರಣೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾವು ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡಿದೆ.
ಪಿವಿಎಸ್ ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಎಜೆ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರವನ್ನು ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ ಉದ್ಘಾಟಿಸಿದರು.
ರಕ್ತದಾನ ಮಾಡಿದ ಬಳಿಕ ಮಾತನಾಡಿದ ಸಂಸದರು, ಪ್ರಧಾನಿ ನರೇಂದ್ರ ಮೋದಿ ಅವರು ಯುವ ನಾಯಕತ್ವದ ಮೇಲೆ ವಿಶ್ವಾಸವಿರಿಸಿಕೊಂಡವರು. ಇಂದು ಯುವಮೋರ್ಚಾ ಕಾರ್ಯಕರ್ತರ ಈ ಸಮಾಜಮುಖಿ ಕಾರ್ಯಕ್ರಮವು ನಿಜಕ್ಕೂ ನರೇಂದ್ರ ಮೋದಿ ಅವರಿಗೆ ಗೌರವ ಸಲ್ಲಿಸುವ ಕಾರ್ಯವಾಗಿದೆ ಎಂದರು.
ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ನಂದನ್ ಮಲ್ಯ ಪ್ರಧಾನಿ ನರೇಂದ್ರ ಮೋದಿ ಅವರ 74ನೇ ಜನ್ಮ ದಿನಾಚರಣೆಗೆ 74 ಯೂನಿಟ್ ರಕ್ತ ಸಂಗ್ರಹಿಸಿ ನೀಡಲಾಗಿದೆ. ನರೇಂದ್ರ ಮೋದಿ ಅವರು ತಮ್ಮ ಜೀವನವನ್ನು ರಾಷ್ಟ್ರದ ಉನ್ನತಿಗಾಗಿ ಮುಡಿಪಾಗಿಟ್ಟಿದ್ದಾರೆ. ಆ ನಿಟ್ಟಿನಲ್ಲಿ ಬಿಜೆಪಿ ಯುವಮೋರ್ಚಾ ವತಿಯಿಂದ ಅವರ ಜನ್ಮ ದಿನವನ್ನು ಸಾಮಾಜಿಕ ಸೇವೆಯ ಮೂಲಕ ಆಚರಿಸಲು ರಕ್ತದಾನ ಹಮ್ಮಿಕೊಂಡಿದೆ. ಜನರಿಗೆ ಅವಶ್ಯಕವಾದ ರಕ್ತದಾನದ ಮಹತ್ವವನ್ನು ತಿಳಿಸಿಕೊಡಲು ಇದು ಉತ್ತಮ ಮಾರ್ಗವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್,ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಪ್ರಮುಖರಾದ ರಾಕೇಶ್ ರೈ ,ಯುವಮೋರ್ಚಾ ನಾಯಕರಾದ ಮುರಳಿ ಕೊಣಾಜೆ, ನಿತೇಶ್ ಕಲ್ಲೇಗ, ಶಿಶಿರ್ ಪೆರುವಾಡಿ, ಅಶ್ವಿತ್ ಕೊಟ್ಟಾರಿ, ಕುಮಾರ್ ಪ್ರಸಾದ್, ಉಮೇಶ್ ಕುಲಾಲ್, ನಿಶಾನ್ ಪೂಜಾರಿ, ವರುಣ್ ಅಂಬಟ, ಅವಿನಾಶ್ ಸುವರ್ಣ, ನವೀನ್ ರಾಜ್, ಸಾಕ್ಷಾತ್ ಶೆಟ್ಟಿ, ಬಿಜೆಪಿ ಜಿಲ್ಲಾ ನಾಯಕರು, ಮಂಡಲ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.