ಬಿಜೆಪಿ ಮಂಗಳೂರು ಉತ್ತರ ಮಂಡಲ ವತಿಯಿಂದ ಪ್ರತಿಭಟನೆ

Update: 2023-10-17 17:30 GMT

ಕಾವೂರು, ಅ.17: ರಾಜ್ಯದ ಕಾಂಗ್ರೆಸ್ ಕಾರ್ಪೊರೇಟರ್ ಮನೆಯಲ್ಲಿ ಐಟಿ ದಾಳಿಯ ವೇಳೆ ದೊರೆತಿರುವ 600ಕೋ.ರೂ. ಹಣ ಗುತ್ತಿಗೆದಾರರು ಕಮಿಷನ್‌ ಆಧಾರದಲ್ಲಿ ನೀಡಿದ್ದ ಹಣ. ಇದಕ್ಕೆ ಪುರಾವೆಯೀ ಇದ್ದು, ಕಾಂಗ್ರೆಸ್ ನಾಯಕರಿಗೆ ಮತ್ತೆ ತಿಹಾರ್ ಜೈಲ್ ಕೋಣೆ ಸಿದ್ಧವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷ ಮಂಗಳೂರು ಉತ್ತರ ಮಂಡಲದ ವತಿಯಿಂದ ಕಾಂಗ್ರೆಸ್ ಭೃಷ್ಟಾಚಾರದ ವಿರುದ್ಧ ಕಾವೂರು ಜಂಕ್ಷನ್‍ನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಿಂದೆ ನಮ್ಮ ಸರಕಾರಕ್ಕೆ ಪೇ ಸಿಎಂ, 40 ಪರ್ಸೆಂಟ್ ಸರಕಾರ ಎಂದು ಸುಳ್ಳು ಆರೋಪ ಮಾಡಿದರು. ಸಾಕ್ಷ್ಯ ನೀಡಿ ಎಂದರೆ ಅದೂ ಇರಲಿಲ್ಲ. 4 ತಿಂಗಳಲ್ಲಿ ಸಾಕ್ಷ್ಯ ಇಲ್ಲದೆ ಯಾವುದೇ ಮಂತ್ರಿಯನ್ನು ಜೈಲಿಗೆ ಕಳುಹಿಸಲು ವಿಫಲರಾದರು. ಇದೀಗ ಕಾಂಗ್ರೆಸ್ ಸರಕಾರವೇ 80 ಪರ್ಸೆಂಟ್ ಸರಕಾರವಾಗಿದೆ. ಹಣ ಪಡೆದ ಬಗ್ಗೆ ಐಟಿ ಅಧಿಕಾರಿಗಳಿಗೆ ಸಾಕ್ಷಿಯೂ ದೊರೆತಿದೆ. ಪಂಚ ರಾಜ್ಯ ಚುನಾವಣೆಗೆ ಕಳುಸಲು ಇಟ್ಟ ಹಣ ಎಂಬುದು ಸ್ಪಷ್ಟ. ಕರ್ನಾಟಕ ಕಾಂಗ್ರೆಸ್ ಹೈಕಮಾಂಡ್‍ಗೆ ಎಟಿಎಂ ಆಗಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಬೇಕು ಹಾಗೂ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು. ಈ ಮೂಲಕ ತಮ್ಮ ಸಾಚಾತನ ಸಾಬೀತು ಪಡಿಸಬೇಕು ಎಂದು ಸವಾಲು ಹಾಕಿದರು. ಬಿಜೆಪಿ ಕಾಂಗ್ರೆಸ್ ಸರಕಾರದ ಲಂಚಾವತಾರದ ವಿರುದ್ಧ ರಾಜ್ಯ ವ್ಯಾಪಿ ಹೋರಾಟ ನಡೆಸಲು ನಿರಂತರವಾಗಿ ನಡೆಯಲಿದೆ ಎಂದು ನಳಿನ್‌ ಕುಮಾರ್‌ ನುಡಿದರು.

ಪ್ರತಿಭಟನೆಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ., ಬಿಜೆಪಿ ಮುಖಂಡರಾದ ಜಗದೀಶ್ ಶೇಣವ, ತಿಲಕ್ ರಾಜ್ ಕೃಷ್ಣಾಪುರ, ಕಸ್ತೂರಿ ಪಂಜ, ಪೂಜಾ ಪೈ, ರಣ್‍ದೀಪ್ ಕಾಂಚನ್, ಉಪಮೇಯರ್ ಸುನಿತಾ, ಬಿಜೆಪಿ ಮನಪಾ ಸದಸ್ಯರು, ಜಿಲ್ಲೆಯ ಪ್ರಮುಖರು, ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News