ಸಮಾನ ವೇತನ, ಜೀವನ ಭದ್ರತೆಗೆ ಆಗ್ರಹಿಸಿ ಎಂಆರ್‌ಪಿಎಲ್‌ ನೌಕರರಿಂದ ಧರಣಿ

Update: 2023-10-15 15:15 GMT

ಸುರತ್ಕಲ್, ಅ.15: ಓಎಂಪಿಎಲ್ ಕಂಪೆನಿ ಎಂಆರ್ಪಿಎಲ್‌ ನೊಂದಿಗೆ ವಿಲೀನಗೊಂದು ಒಂದೂವರೆ ವರ್ಷ ಕಳೆದರೂ ಓಎಂಪಿಎಲ್‌ ನಿಂದ ಎಂಆರ್ಪಿಎಲ್‌ಗೆ ಸೇರ್ಪಡೆಗೊಂಡಿರುವ ಸ್ಥಳೀಯ 293ಮಂದಿ ನೌಕರರಿಗೆ ಜೀವನ ಭದ್ರತೆ ಮತ್ತು ಸಮಾನ ವೇತನ ನೀಡದೇ ಎಂಆರ್ಪಿಎಲ್‌ ತಾರತಮ್ಯ ಎಸಗುತ್ತಿದೆ ಎಂದು ಎಂಆರ್ಪಿಎಲ್ ಏರೊಮ್ಯಾಟಿಕ್ಸ್ ಕಾಂಪ್ಲೆಕ್ಸ್ ಎಂಪ್ಲಾಯಿಸ್ ಯೂನಿಯನ್ ಸುರತ್ಕಲ್‌ ಕಾನ ಬಳಿ ಎರಡು ದಿನಗಳ ಆಹೋರಾತ್ರಿ ಧರಣಿ ಆರಂಭಿಸಿದೆ.

ಧರಣಿಯ ನೇತೃತ್ವ ವಹಿಸಿರುವ ಎಂಆರ್ಪಿಎಲ್ ಏರೊಮ್ಯಾಟಿಕ್ಸ್ ಕಾಂಪ್ಲೆಕ್ಸ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಸುಧೀರ್ ಕುಮಾರ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಓಎಂಪಿಎಲ್‌ ಸಂಸ್ಥೆಯು 2022ರ ಮೇ 1ರಂದು ಎಂಆರ್‌ಪಿಎಲ್‌ ನೊಂದಿಗೆ ವಿಲೀನಗೊಂಡಿದೆ. ಕಾನೂನುಗಳ ಪ್ರಕಾರನ ಆ ಬಳಿಕದಿಂದ ನಾವು ಎಂಆರ್ಪಿಎಲ್ ನೌಕರರಾಗಿದ್ದೇವೆ. ಆದರೆ, ಒಂದೂವರೆ ವರ್ಷಗಳಿಂದ ನಮಗೆ ಸಮಾನ ವೇತನ ನೀಡದೇ ಸತಾಯಿಸಲಾಗುತ್ತಿದೆ. ನಮ್ಮ ಹಕ್ಕನ್ನು ನೀಡುವಂತೆ ಹಲವು ಬಾರಿ ಆಡಳಿತ ವರ್ಗಕ್ಕೆ ನೋಟೀಸು ನೀಡಿ 'ಗೇಟ್ ಮೀಟ್' ಪ್ರತಿಭಟನೆಗಳನ್ನು ಮಾಡಿ ದ್ದೇವೆ. ಆದರೆ, ಎಂಆರ್ಪಿಎಲ್‌ ಕನಿಷ್ಠ ನಮ್ಮ ಅಹವಾಲುಗಳನ್ನೂ ಸ್ವೀಕರಿಸಲು ಮುಂದೆ ಬರುತ್ತಿಲ್ಲ ಎಂದು ದೂರಿದರು.

ಓಎಂಪಿಎಲ್‌ ಕೈಗಾರಿಕೆ ಸ್ಥಾಪನೆ ಸಂದರ್ಭ ಭೂಮಿ ಕಳೆದುಕೊಂಡಿದ್ದ 293 ಮಂದಿ ನಿರ್ವಸಿತರಿಗೆ ಓಎಂಪಿಎಲ್ ಕಂಪೆನಿ ಕೆಪಿಟಿಯಲ್ಲಿ ತರಬೇತಿ ಕೊಟ್ಟು ಕೆಲಸಕ್ಕೆ ನೇಮಿಸಿಕೊಂಡಿತ್ತು. ಓಎಂಪಿಎಲ್ ಅನ್ನು ಎಂಆರ್ಪಿಎಲ್ ಜೊತೆಗೆ ವಿಲೀನ ಮಾಡಲಾಗಿದೆ. ನಮಗೆ 2022ರ ಡಿಸೆಂಬರ್ ತಿಂಗಳಲ್ಲಿ ಏಕರೂಪ ಸಂಬಳ ನೀಡಬೇಕೆಂದು ಎಂಆರ್ಪಿಎಲ್ ಬೋರ್ಡ್ ಸ್ವತಂತ್ರ ನಿರ್ದೇಶಕರು ಆದೇಶವನ್ನು ಹೊರಡಿಸಿದ್ದಾರೆ. ಆದರೆ, ಎಂಆರ್ಪಿಎಲ್‌ ಆದೇಶವನ್ನು ದಿಕ್ಕರಿಸಿ ಸ್ಥಳೀಯ 293 ನೌಕರರಿಗೆ ಸಮಾನ ವೇತನ ನೀಡದೇ ಸತಾಯಿಸುತ್ತಿದೆ. ಎಂಆರ್ಪಿಎಲ್‌ನ ಮೇಲಿನ ಅಧಿಕಾರಿಗಳು ನಮಗೆ ಸಮಾನ ವೇತನ ಮತ್ತು ಸಮಾನ ಹಕ್ಕುಗಳನ್ನು ನೀಡಲು ಆದೇಶಿಸಿದ್ದರೂ ಕೆಳಹಂತದ ಹೆಚ್ ಆರ್ ವಿಭಾಗದ ಅಧಿಕಾರಿಗಳು ನಮ್ಮ ಮೂಲಸೌಕರ್ಯಗಳನ್ನು ನೀಡಲು ನಿರಾಕರಿಸುತ್ತಿದ್ದಾರೆ. ಆದಷ್ಟು ಶೀಘ್ರ 2022ರ ಮೇ 1ರಿಂದ ಬಾಕಿ ವೇತನ ಪಾವತಿ ಮಾಡುವ ಜೊತೆಗೆ ಏಕರೂಪ ವೇತನ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಂಪೆನಿ ಅಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

"ನಾನು ಓಎಂಪಿಎಲ್‌ ನಲ್ಲಿ ಕೆಲಸ ಮಾಡುತ್ತಿದ್ದೆ. ಬಳಿಕ 2022ರಲ್ಲಿ ಓಎಂಪಿಎಲ್‌ ಎಂಆರ್ಪಿಎಲ್‌ ಜೊತೆ ವಿಲೀನ ಗೊಂಡಿದೆ. ಆ ಬಳಿಕದಿಂದ ನಾನು ಎಂಆರ್ಪಿಎಲ್‌ ನೌಕರಳಾಗಿದ್ದೇನೆ. ಆದರೆ, ಇಲ್ಲಿ ಎಂಆರ್ಪಿಎಲ್ ನ ಮೂಲ ನೌಕರರು ಪಡೆಯುತ್ತಿರುವ ವೇತನ, ಜೀವನ ಭದ್ರತೆ, ಮೂಲಭೂತ ಸೌಕರ್ಯಗಳು ನಮಗೆ ನೀಡದೇ ಅಧಿಕಾರಿಗಳು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ತಾರತಮ್ಯ ತೋರುತ್ತಿದ್ದಾರೆ. ಇದು ಅಂತ್ಯವಾಗಬೇಕು. ನಾವು ಈಗ ಎಂಆರ್‌ಪಿಎಲ್‌ ನ ನೌಕರರೇ ಆಗಿರುವುದರಿಂದ ಎಲ್ಲರಿಂತೆ ನಮಗೂ ಸಮಾನ ವೇತನ, ಜೀವನ ಭದ್ರತೆ, ಮೂಲಸೌಕರ್ಯ ನೀಡಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಉಗ್ರ ರೀತಿಯ ಹೋರಾಟಕ್ಕೂ ನಾವು ಸಿದ್ಧ".

-ಪ್ರಮೀಳಾ ದೀಪಕ್‌, ಎಂಆರ್ಪಿಎಲ್‌ ನೌಕರೆ




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News