ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಆಗ್ರಹಿಸಿ ಪ್ರತಿಭಟನೆ
ಮಂಗಳೂರು,ಸೆ.11:ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆಯೂ ವೈದ್ಯರು ಮತ್ತು ಸಿಬ್ಬಂದಿ ವರ್ಗ ಸಾರ್ವಜನಿಕರ ಸೇವೆಗೆ ಲಭ್ಯರಿರಬೇಕ. ಮೂಲಭೂತ ಸೌಲಭ್ಯದೊಂದಿಗೆ ಮೇಲ್ದರ್ಜೆಗೇರಿಸಬೇಕು. ಸುಮಾರು 2 ಲಕ್ಷ ಜನಸಂಖ್ಯೆ ಹೊಂದಿರುವ ಗುರುಪುರ ಹೋಬಳಿಗೆ ಸಮುದಾಯ ಆಸ್ಪತ್ರೆಯನ್ನು ಮಂಜೂರುಗೊಳಿಸಬೇಕು ಎಂದು ಆಗ್ರಹಿಸಿ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯು ಸೋಮವಾರ ಕುಪ್ಪೆಪದವಿನಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಇದು ಕುಲವೂರು, ಕಿಲಿಂಜಾರು, ಮುತ್ತೂರು, ಪದರಂಗಿ ಸಹಿತ ಸುತ್ತಮುತ್ತಲಿನ ಹಲವು ಗ್ರಾಮಗಳ ಏಕೈಕ ಪ್ರಾಥಮಿಕ ಆರೋಗ್ಯ ಕೇಂದ್ರ ವಾಗಿದೆ. ಕೂಲಿ ಕೆಲಸಗಾರರು, ಬೀಡಿ, ಕಟ್ಟಡ ಕಾರ್ಮಿಕರು, ಕೆಳ ಮಧ್ಯಮ ವರ್ಗದವರೇ ಇಲ್ಲಿ ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ನಗರದಿಂದ ಬಹಳಷ್ಟು ದೂರದಲ್ಲಿರುವ ಇಂತಹ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವು ಸರಕಾರಿ ರಜೆ ಮತ್ತು ರಾತ್ರಿ ಹಗಲುಗಳೆನ್ನದೆ 24 ಗಂಟೆಯೂ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಯು ಆರೋಗ್ಯದ ಗ್ಯಾರಂಟಿಯನ್ನೂ ಕೂಡ ರಾಜ್ಯದ ಜನತೆಗೆ ನೀಡಬೇಕು. ಜನತೆಗೆ ಪೂರಕವಾಗುವಂತೆ ಸರಕಾರಿ ಆರೋಗ್ಯದ ಕ್ಷೇತ್ರದಲ್ಲಿ ಬದಲಾವಣೆಗಳು ಆಗಬೇಕು ಎಂದ ಮುನೀರ್ ಕಾಟಿಪಳ್ಳ ‘ಗುರುಪುರ ಹೋಬಳಿಯು ಮಂಗಳೂರು ತಾಲೂಕಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಹೋಬಳಿಯಾಗಿದೆ. ಗಂಜಿಮಠ ಕೈಗಾರಿಕಾ ವಲಯ ಸಹಿತ ಹಲವು ವ್ಯಾಪಾರಿ ಸಂಸ್ಥೆ, ಉದ್ಯಮಗಳು ಇವೆ. ಸುಮಾರು 2 ಲಕ್ಷ ಜನಸಂಖ್ಯೆ ಇರುವ ಗುರುಪುರ ಹೋಬಳಿಯಲ್ಲಿ ಸರಕಾರದ ವೈದ್ಯಕೀಯ ಅಧಿನಿಮಯದ ಪ್ರಕಾರ 10 ವರ್ಷಗಳ ಹಿಂದೆಯೇ 40 ಹಾಸಿಗೆಗಳ ಸಮುದಾಯ ಆಸ್ಪತ್ರೆ ತೆರೆಯಬೇಕಿತ್ತು ಎಂದು ಹೇಳಿದರು.
ಪ್ರತಿ ಬಾರಿಯೂ ಖಾಸಗಿ ಆಸ್ಪತ್ರೆಗಳಿಗೆ ಉತ್ತೇಜನ ನೀಡುತ್ತಿರುವ ಸರಕಾರಗಳು, ಸರಕಾರಿ ಆಸ್ಪತ್ರೆಗಳತ್ತ ಕಿಂಚಿತ್ತೂ ಗಮನ ಹರಿಸುತ್ತಿಲ್ಲ. ಈ ತಾರತಮ್ಯದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ದುರ್ಬಲವಾಗುತ್ತಿವೆ. ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆ ಈಗ ಖಾಸಗಿ ಆಸ್ಪತ್ರೆಗಳ ಕ್ಲಿನಿಲ್ ಲ್ಯಾಬೊರೇಟರಿಯಂತೆ ಕಾರ್ಯನಿರ್ವಹಿಸುತ್ತಿದೆ. ಅಲ್ಲಿನ ವ್ಯವಸ್ಥೆ ಬಡ ರೋಗಿಗಳಿಗೆ ಎಟಕುತಿಲ್ಲ. ವೆನ್ಲಾಕ್‌ನ್ನು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನಾಗಿ ಪರಿವರ್ತಿಸಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ, ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಎನ್‌ಎ ಹಸನಬ್ಬ, ಡಿವೈಎಫ್‌ಐ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು, ಭೂಮಿ ಹೋರಾಟ ಸಮಿತಿಯ ಕಾರ್ಯದರ್ಶಿ ಆನಂದ ಪೂಜಾರಿ ಇರುವೈಲು, ಸಾಮಾಜಿಕ ಕಾರ್ಯ ಕರ್ತರಾದ ಬಾವ ಪದರಂಗಿ, ಗೋಪಾಲ ಮುತ್ತೂರು, ಹಮೀದ್ ಮುತ್ತೂರು, ಜೂನಿಯರ್ ಫ್ರೆಂಡ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಅಬೂಬಕ್ಕರ್, ನ್ಯೂಫ್ರೆಂಡ್ಸ್‌ಕ್ಲಬ್‌ನ ಅಧ್ಯಕ್ಷ ಮುಸ್ತಫ, ಅಂಬೇಡ್ಕರ್ ಯುವಕ ಸಂಘದ ಕಾರ್ಯದರ್ಶಿ ರವಿ ಅಟ್ಟೆಪದವು, ಅಮ್ದ್ ಸೆಂಟರ್‌ನ ರಮೀಝ್ ಕಲೈ, ಕುಪ್ಪೆಪದವು ಗ್ರಾಪಂ ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷ ಮುಹಮ್ಮದ್ ಶರೀಫ್ ಕಜೆ, ಮಾಜಿ ಅಧ್ಯಕ್ಷ ಡಿ.ಪಿ ಹಮ್ಮಬ್ಬ, ಹರಿಯಪ್ಪಮುತ್ತೂರು, ಕೆ. ಪುರುಷೋತ್ತಮ್ ಸಮಾಗಮ ಕುಪ್ಪೆಪದವು, ಸಿಐಟಿಯು ಮುಖಂಡರಾದ ವಸಂತಿ ಕುಪ್ಪೆಪದವು, ನೋಣಯ ಗೌಡ ಮಿಜಾರ್, ಕುಪ್ಪೆಪದವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ಉಪಸ್ಥಿತರಿದ್ದರು.
ಕೊಂಪದವು ವೈದ್ಯಾಧಿಕಾರಿ ಮತ್ತು ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಡಾ.ಚೈತನ್ಯಾ ಮತ್ತು ಕುಪ್ಪೆಪದವು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾ ಮಂದೋಲಿಕರ್ ಸ್ಥಳಕ್ಕೆ ಆಗಮಿಸಿ ಮನವಿಯನ್ನು ಸ್ವೀಕರಿಸಿದರು.