ಶಾಸಕರ ಅಮಾನತು ತೆರವು ಮಾಡದಿದ್ದರೆ ಪ್ರತಿಭಟನೆ: ಬಿಜೆಪಿ

Update: 2025-03-27 14:50 IST
ಶಾಸಕರ ಅಮಾನತು ತೆರವು ಮಾಡದಿದ್ದರೆ ಪ್ರತಿಭಟನೆ: ಬಿಜೆಪಿ
  • whatsapp icon

ಮಂಗಳೂರು, ಮಾ. 27: ಅಸೆಂಬ್ಲಿಯಲ್ಲಿ ಪ್ರತಿಭಟಿಸಿದ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಅವರ ಅಮಾನತನ್ನು ಕೂಡಲೇ ವಾಪಸ್ ಹಿಂತೆಗೆದುಕೊಳ್ಳಬೇಕು. ತಪ್ಪಿದಲ್ಲಿ ಪ್ರತಿಭಟನೆ ನಡೆಸುವುದಾಗಿ ಉತ್ತರ ಮಂಡಲ ಬಿಜೆಪಿ ಮುಖಂಡರು ವಿಧಾನಸಭಾ ಸ್ವೀಕರ್ ಅವರನ್ನು ಆಗ್ರಹಿಸಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಂಡಲ ಸಮಿತಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಡಾ.ಭರತ್ ಶೆಟ್ಟಿ ಅವರು ಶಾಸಕರಾಗಿ ಎರಡನೇ ಬಾರಿ ಆಯ್ಕೆಯಾಗಿದ್ದು, ಪ್ರಥಮ ಅವಧಿಯಲ್ಲಿ 2,200 ಕೋಟಿ ರೂ.ಗೂ ಹೆಚ್ಚಿನ ಅನುದಾನವನ್ನು ತಂದು ಸಮಗ್ರ ಅಭಿವೃದ್ಧಿ ನಡೆಸಿದ್ದಾರೆ. ಇಂತಹ ಶಾಸಕರಿಗೆ ಸದನದಿಂದಲೇ ಅಮಾನತು ಶಿಕ್ಷೆ ವಿಧಿಸಿರುವುದು ಸರಿಯಲ್ಲ ಎಂದರು.

ವಿಧಾನಸಭೆಯ ಬಾವಿಯಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಅದನ್ನು ಸ್ವೀಕರಿಸುವ ಮನಸ್ಥಿತಿ ಸ್ಪೀಕರ್‌ಗೆ ಇರಬೇಕು. ಸ್ಪೀಕರ್ ಸರ್ಕಾರದ ಭಾಗವಲ್ಲ, ಆದರೆ ಮೊನ್ನೆಯ ಘಟನೆಯಲ್ಲಿ ಸರ್ಕಾರದ ಪ್ರತಿನಿಧಿಯಾಗಿ ವರ್ತಿಸಿ ಅಮಾನತು ಮಾಡಿದ ನಿರ್ಧಾರ ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದೆ ಎಂದರು.

ಹನಿಟ್ರ್ಯಾಪ್ ಬಗ್ಗೆ ಶಾಸಕರು ಮಾತನಾಡುತ್ತಿರುವಾಗ ಸಚಿವರೂ ಧ್ವನಿಗೂಡಿಸಿದ್ದರು. ಅದನ್ನು ಸಮರ್ಥವಾಗಿ ಎದುರಿಸುವ ಬದಲು 18 ಮಂದಿ ಬಿಜೆಪಿ ಶಾಸಕರನ್ನು ಆರು ತಿಂಗಳ ಅವಧಿಗೆ ಅಮಾನತುಗೊಳಿಸಿ ಪ್ರತಿಪಕ್ಷ ಶಾಸಕರ ಸಂಖ್ಯೆ ಕಡಿಮೆ ಮಾಡಲು ಯತ್ನಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸದನದ ಬಾವಿ ಪ್ರತಿಭಟಿಸಲು ಇರುವ ಸ್ಥಳ. ಈ ಹಿಂದೆ ಸ್ಪೀಕರ್‌ರ ಕೊರಳಪಟ್ಟಿಯನ್ನು ಕಾಂಗ್ರೆಸ್ ಶಾಸಕರು ಹಿಡಿದು ಎಳೆದು ಅಪಮಾನ ಮಾಡಿದ್ದನ್ನು ಮರೆಯಲು ಸಾಧ್ಯವಿಲ್ಲ. ಔಚಿತ್ಯ ಮೀರಿದ ಶಾಸಕರನ್ನು ದಿನದ ಮಟ್ಟಿಗೆ ಅಥವಾ ಅಧಿವೇಶನ ಅವಧಿಗೆ ಅಮಾನತುಗೊಳಿಸುವುದು ಸಾಮಾನ್ಯ. ಅದುಬಿಟ್ಟು ದೀರ್ಘ ಅವಧಿಗೆ ಅಮಾನತುಗೊಳಿಸುವ ಮೂಲಕ ಕ್ಷೇತ್ರದ ಜನತೆಯ ಸೇವೆ ಮಾಡುವ ಶಾಸಕರ ಹಕ್ಕನ್ನು ಮೊಟಕುಗೊಳಿಸುವಂತೆ ಮಾಡಲಾಗಿದೆ. ಆದ್ದರಿಂದ ಅಮಾನತು ಆದೇಶವನ್ನು ವಾಪಸ್ ಮಾಡಬೇಕು. ನಾವು ಶಾಸಕರ ಜೊತೆಗಿದ್ದು, ಅಮಾನತು ರದ್ದುಪಡಿಸದಿದ್ದರೆ ಹೋರಾಟ ನಡೆಸುವುದಾಗಿ ಅವರು ಹೇಳಿದರು.

ಉಪಾಧ್ಯಕ್ಷ ತಿಲಕ್‌ರಾಜ್, ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಮುಖಂಡರಾದ ಪೂಜಾ ಪೈ, ಭರತ್‌ರಾಜ್, ಆಶಿತ್ ನೋಂಡಾ, ರಣದೀಪ್ ಕಾಂಚನ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News