ರಾಜಕೀಯ ಕಾರಣಗಳಿಗಾಗಿ ಮೀಸಲಾತಿ ಇಂದಿಗೂ ಮುಂದುವರಿದಿದೆ: ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ

Update: 2023-11-09 13:28 GMT

ಸುಳ್ಯ : ದೇಶಕ್ಕೆ ಸ್ವಾತಂತ್ರ್ಯ ಬಂದು ಸಂವಿಧಾನ ರಚನೆ ಆದ ಸಂದರ್ಭದಲ್ಲಿ 10 ವರ್ಷಗಳಿಗೆ ಎಂದು ಸೇರಿಸಲಾಗಿದ್ದ ಮೀಸಲಾತಿಯು ರಾಜಕೀಯ ಕಾರಣಗಳಿಂದ ಇಂದಿಗೂ ಮುಂದುವರಿದಿದೆ ಎಂದು ನಿವೃತ್ತ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ ಅವರು ಹೇಳಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ವಿದ್ಯಾರ್ಥಿಗಳೊಂದಿಗೆ ಬುಧವಾರ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಗಳ ಪ್ರಶ್ನೆಗೆ ಅವರು ಉತ್ತರಿಸಿದರು. ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿಯಿಂದ ಪ್ರತಿಭಾವಂತರು, ಹೆಚ್ಚು ಅಂಕ ಪಡೆದವರು ಅವಕಾಶ ವಂಚಿತರಾಗುತ್ತಿದ್ದಾರೆ ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಅವರು ಉತ್ತರಿಸಿದರು. ಒಮ್ಮೆ ಮೀಸಲಾತಿ ಕಾರಣದಿಂದ ದೊಡ್ಡ ಲಾಭ ಪಡೆದರೆ ಮತ್ತೆ ಆ ಕುಟುಂಬಕ್ಕೆ ಮೀಸಲಾತಿ ನೀಡುವ ಬದಲು ಅವಕಾಶ ಸಿಗದ ಕುಟುಂಬಕ್ಕೆ ನೀಡಬಹುದು ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಹಲವು ಪ್ರಶ್ನೆಗಳನ್ನು ಮುಂದಿರಿಸಿದರು. ಭ್ರಷ್ಟಾಚಾರ ಯಾಕೆ ಕಡಿಮೆ ಮಾಡಲು ಸಾಧ್ಯವಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಭ್ರಷ್ಟಾಚಾರ ಆಳಕ್ಕೆ ಇಳಿದಿದೆ, ಭ್ರಷ್ಟಾಚಾರ ಕಡಿಮೆ ಮಾಡುವ ಪ್ರಯತ್ನ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಮೇಜರ್ ಡಾ.ಕುಶ್ವಂತ್ ಕೋಳಿಬೈಲು, ತೂಗುಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ಸುಳ್ಯ ಟಿಎಪಿಸಿಎಂಎಸ್ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮುಖ್ಯ ಅತಿಥಿಯಾಗಿದ್ದರು.

ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಚಂದ್ರಾವತಿ ಬಡ್ಡಡ್ಕ ವಂದಿಸಿದರು. ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸುಳ್ಯ ನೆಹರೂ ಸ್ಮಾರಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News