ಹೆಚ್ಚುತ್ತಿರುವ ಬಿಸಿಲು: ದ.ಕ. ಜಿಲ್ಲೆಯ ಡ್ಯಾಂಗಳಲ್ಲಿ ಇಳಿಕೆಯಾಗುತ್ತಿದೆ ನೀರು

ಕರಾವಳಿಯಲ್ಲಿ ಎಪ್ರಿಲ್ ಮೇ ತಿಂಗಳಲ್ಲಿ ಮುಂಗಾರು ಪೂರ್ವ ವಾಡಿಕೆ ಮಳೆಯಾಗುತ್ತದೆ. ಮುಖ್ಯವಾಗಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಎಪ್ರಿಲ್ ತಿಂಗಳಲ್ಲಿ ಮಳೆಯಾದರೆ ಕುಡಿಯುವ ನೀರಿಗೆ ಹೆಚ್ಚಿನ ಸಮಸ್ಯೆ ಆಗದು ಎನ್ನಲಾಗುತ್ತಿದೆ.

Update: 2024-03-18 06:16 GMT

 ಧರ್ಮಸ್ಥಳ ಸೇತುವೆ ಸಮೀಪ ನೇತ್ರಾವತಿ ನದಿಯಲ್ಲಿ 10 ದಿನಗಳ ಹಿಂದೆಯೇ ನೀರಿನ ಹರಿವು ತೀರಾ ಕಡಿಮೆಯಾಗಿದ್ದು, ಸಾವಿರಾರು ಮೀನುಗಳು ಸತ್ತು ನದಿ ನೀರಿನಲ್ಲಿ ತೇಲಲಾರಂಭಿಸಿತ್ತು.

ಮಂಗಳೂರು, ಮಾ.17: ಬಿಸಿಲ ಬೇಗೆ ಹೆಚ್ಚಾಗುತ್ತಿರುವಂತೆಯೇ ದ.ಕ. ಜಿಲ್ಲಾದ್ಯಂತ ನದಿ ಅಣೆಕಟ್ಟುಗಳಲ್ಲಿ ನೀರು ಸಂಗ್ರಹದ ಪ್ರಮಾಣವೂ ಇಳಿಕೆಯಾಗುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ ದಿನೇ ದಿನೇ ನೀರಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಬಿಸಿಲಿನಿಂದ ಆವಿಯ ಪ್ರಮಾಣವೂ ಹೆಚ್ಚಾಗುತ್ತಿದೆ ಎನ್ನಲಾಗಿದೆ.

ಪಾಲಿಕೆಗೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ ಕಳೆದ ವಾರದವರೆಗೂ ಮಾರ್ಚ್ ಪ್ರಥಮ ವಾರದಲ್ಲಿ 6 ಮೀಟರ್‌ವರೆಗೆ ನೀರು ಸಂಗ್ರಹವಿದ್ದು, ಬಳಿಕ ಇಂಚಿಂಚೂ ಕಡಿಮೆಯಾಗುತ್ತಿದೆ. ಶುಕ್ರವಾರ 5.92 ಮೀಟರ್ ಸಂಗ್ರಹವಿದ್ದು, ಶನಿವಾರ 5.88 ಮೀಟರ್‌ಗೆ ಇಳಿಕೆಯಾಗಿದ್ದರೆ, ರವಿವಾರ 5.85 ಮೀಟರ್‌ಗೆ ಇಳಿದಿದೆ. ತುಂಬೆ ಅಣೆಕಟ್ಟಿನ ಎಲ್ಲಾ ಗೇಟ್‌ಗಳನ್ನು ಈಗಾಗಲೇ ಮುಚ್ಚಲಾಗಿದ್ದು, ಕೆಳ ಭಾಗದಿಂದ ಪಂಪ್ ಮೂಲಕ ನೀರನ್ನು ಮೇಲ್ಭಾಗಕ್ಕೆ ಹರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ಸದ್ಯ ನಗರ ಸೇರಿದಂತೆ ದ.ಕ. ಜಿಲ್ಲಾದ್ಯಂತ ಕುಡಿಯುವ ನೀರಿಗೆ ಸಂಬಂಧಿಸಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಮಾರ್ಚ್ ತಿಂಗಳಲ್ಲಿ ಬಹುತೇಕವಾಗಿ ಬಜ್ಪೆ, ಕೋಟೆಕಾರು, ಉಳ್ಳಾಲದ ಕೆಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಸಹಜವಾಗಿದ್ದು, ಸಮಸ್ಯೆ ಇರುವಲ್ಲಿ ಪ್ರಸಕ್ತ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಈಗಾಗಲೇ ತಿಳಿಸಿದ್ದಾರೆ.

ನದಿ ನೀರಿನ ಮಟ್ಟ ಇಳಿಕೆ: ಚೆಕ್‌ಡ್ಯಾಂಗಳಲ್ಲಿ ನೀರು ಸಂಗ್ರಹ

ಬಂಟ್ವಾಳ, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳ ಗ್ರಾಮಾಂತರ ಹಾಗೂ ನಗರ ಭಾಗಗಳಲ್ಲಿ ಸದ್ಯ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ. ಹಾಗಿದ್ದರೂ ನದಿ, ತೊರೆ, ಹಳ್ಳ ಕೊಳ್ಳಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಜೀವನದಿಗಳಿಗೆ ಕಿಂಡಿ ಅಣೆಕಟ್ಟುಗಳನ್ನು ಕಟ್ಟಿರುವಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಿದೆ. ಸುಳ್ಯದ ಜೀವನದಿ ಪಯಸ್ವಿನಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆಯಾದರೂ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹವಿದೆ. ಬೆಳ್ತಂಗಡಿಯಲ್ಲಿಯೂ ನಗರ ಪ್ರದೇಶಗಳಿಗೆ ನೀರು ಪೂರೈಕೆಯಾಗುವ ಚೆಕ್‌ಡ್ಯಾಮ್‌ಗಳಲ್ಲಿ ನೀರು ಸಂಗ್ರಹವಿದೆ. ಆದರೆ ನದಿಯಲ್ಲಿ ನೀರಿನ ಪ್ರಮಾಣ ಮಾತ್ರ ಇಳಿಕೆಯಾಗಿದೆ. ಇದರಿಂದಾಗಿ ಹತ್ತು ದಿನಗಳ ಹಿಂದೆಯೇ ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಮೀನುಗಳು ಸಾವನ್ನಪ್ಪಿರುವುದೂ ವರದಿಯಾಗಿತ್ತು. ಪುತ್ತೂರು ಹಾಗೂ ಬಂಟ್ವಾಳ ಭಾಗದಲ್ಲೂ ಇದೇ ರೀತಿಯ ಪರಿಸ್ಥಿತಿ ಇದೆ.

ಜಿಲ್ಲಾದ್ಯಂತ ಕಳೆದ ಹಲವು ವರ್ಷಗಳಿಂದೀಚೆಗೆ ಅಂತರ್ಜಲ ಭಾರೀ ಪ್ರಮಾಣದಲ್ಲಿ ಕುಸಿತವಾಗಿರುವ ಕಾರಣ ಬೋರ್‌ವೆಲ್‌ಗಳಲ್ಲೂ ಬೇಸಿಗೆಯಲ್ಲಿ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ.

ತುಂಬೆ ಅಣೆಕಟ್ಟಿನ ಮೇಲಿರುವ ಎಎಂಆರ್ ಅಣೆಕಟ್ಟಿನ ನೀರಿನ ಸಂಗ್ರಹದಲ್ಲಿಯೂ ಇಳಿಕೆಯಾಗುತ್ತಿದೆ. ಮಾ.15ರಂದು 18.11 ಮೀಟರ್‌ನಷ್ಟಿದ್ದ ನೀರು ಮಾ.16ಕ್ಕೆ 18.08 ಮೀಟರ್‌ಗೆ ಇಳಿಕೆಯಾಗಿದೆ. ಉಳ್ಳಾಲ, ಕೊಲ್ಯ, ಕೋಟೆಕಾರು ಮೊದಲಾದ ಪ್ರದೇಶಗಳಲ್ಲಿ ಈ ಹಿಂದಿನಂತೆ ಈ ಬಾರಿಯೂ ಫೆಬ್ರವರಿಯಲ್ಲೇ ಬಾವಿಗಳಲ್ಲಿ ನೀರು ಕಡಿಮೆಯಾಗಿದೆ.

ಸೋಮೇಶ್ವರ ಪುರಸಭೆ ವ್ಯಾಪ್ತಿಯ ಬಹುತೇಕ ಪ್ರದೇಶಗಳಲ್ಲಿ ಜನರು ಬಾವಿ ನೀರು ಅಥವಾ ಬೋರ್‌ವೆಲ್ ನೀರನ್ನು ಆಶ್ರಯಿಸಿದ್ದಾರೆ. ಉಳಿದಂತೆ ಇಲ್ಲಿ ಪಂಚಾಯತ್‌ನಿಂದ ಪೈಪ್‌ಲೈನ್ ಮೂಲಕ ಹಲವೆಡೆ ಎರಡು ದಿನಗಳಿಗೊಮ್ಮೆ ನಿಗದಿತ ಅವಧಿಗೆ ನೀರು ಪೂರೈಕೆ ಮಾಡಲಾಗುತ್ತದೆ.

ಮಂಗಳೂರು ನಗರ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನ ಸುತ್ತಮುತ್ತ ಕೃಷಿಗೆ ನೀರು ಉಪಯೋಗಿಸುವುದನ್ನು ಸಂಪೂರ್ಣವಾಗಿ ತಡೆಹಿಡಿಯಲು ಜಿಲ್ಲಾಧಿಕಾರಿ ಈಗಾಗಲೇ ಆದೇಶಿಸಿದ್ದಾರೆ. ಕೈಗಾರಿಕೆಗಳಿಗೂ ನೀರಿನ ಮಟ್ಟವನ್ನು ಅನುಸರಿಸಿ ನೀರು ಪೂರೈಕೆಯಲ್ಲಿ ಕಡಿತ ಮಾಡುವಂತೆ ಸೂಚಿಸಲಾಗಿದೆ. ಸದ್ಯ ತುಂಬೆ ಅಣೆಕಟ್ಟು, ಎಎಂಆರ್ ಹಾಗೂ ಬಿಳಿಯೂರು ಅಣೆಕಟ್ಟಿನಲ್ಲಿ ನೀರು ಸಂಗ್ರಹ ಇರುವುದರಿಂದ ಮಂಗಳೂರು ನಗರಕ್ಕೆ ನೀರು ಪೂರೈಕೆಯಲ್ಲಿ ರೇಶನಿಂಗ್ ಮಾಡಲಾಗುತ್ತಿಲ್ಲ ಎಂದು ಎಂದು ತಿಳಿಸಿರುವ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಬೇಸಿಗೆಯಲ್ಲಿ ಕುಡಿಯುವ ನೀರಿನ ಮಿತ ಬಳಕೆಯ ಬಗ್ಗೆ ಸಾರ್ವಜನಿಕರದ್ದೂ ಪಾತ್ರ ಮಹತ್ತರವಾಗಿದೆ ಎಂದಿದ್ದಾರೆ.

 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News